ಮೋದಿಯ ಟೀಕಾಕಾರ ಯಶವಂತ್ ಸಿನ್ಹಾಗೆ ಹುಟ್ಟುಹಬ್ಬದ ಶುಭಾಶಯ: ಎಲ್ಲರ ಹುಬ್ಬೇರಿಸಿದ ರಾಜಸ್ಥಾನ ಬಿಜೆಪಿ

Update: 2018-11-10 09:01 GMT

 ಜೈಪುರ್, ನ.10: ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ರಾಜಸ್ಥಾನದ ಆಡಳಿತ ಬಿಜೆಪಿಯ  ಟ್ವಿಟರ್ ಮತ್ತು ಫೇಸ್ ಬುಕ್ ಪುಟಗಳಲ್ಲಿ ನವೆಂಬರ್ 6ರಂದು ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ಟ್ವೀಟ್ ಒಂದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಬಿಜೆಪಿ ತೊರೆದಿರುವ, ಬಿಜೆಪಿಯ, ಕೇಂದ್ರ ಸರಕಾರದ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಕಟು ಟೀಕಾಕಾರರಾಗಿರುವ ಮತ್ತು ರಫೇಲ್ ಹಗರಣದ ತನಿಖೆ ಕೋರಿ ಸಿಬಿಐಗೆ ದೂರು ನೀಡಿರುವ ಸಿನ್ಹಾ ಅವರಿಗೆ ಬಿಜೆಪಿ ಅದೇಕೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ಪೋಸ್ಟ್ ಮಾಡಿದೆ ಎಂದು ಹಲವರು ಯೋಚಿಸಲಾರಂಭಿಸಿದ್ದರು. ಅಷ್ಟೇ ಅಲ್ಲ, ಈ ಪೋಸ್ಟ್ ನಲ್ಲಿ ಸಿನ್ಹಾ ಅವರನ್ನು ಹಿರಿಯ ಬಿಜೆಪಿ ನಾಯಕ ಎಂದು ತಪ್ಪಾಗಿ ಹೇಳಲಾಗಿತ್ತು.

ಇದು ಬಿಜೆಪಿಯ ಐಟಿ ಘಟಕ ನಡೆಸಿದ ಪ್ರಮಾದವೆಂದು ರಾಜ್ಯದ ಬಿಜೆಪಿ ನಾಯಕರು ಹೇಳಿದ್ದಾರೆ. ಅತ್ತ ರಾಜಸ್ಥಾನ ಐಟಿ ಸೆಲ್ ಉಸ್ತುವಾರಿ ಹಿರೇಂದ್ರ ಕೌಶಿಕ್ ಪ್ರತಿಕ್ರಿಯಿಸುತ್ತಾ, “ರಾಜಕೀಯ ನಾಯಕರಿಗೆ ಹಾಗೂ ವಿರೋಧ ಪಕ್ಷದ ನಾಯಕರಿಗೂ ಶುಭಾಶಯ ಹೇಳುವುದು ತಮ್ಮ ಪಕ್ಷದ ಸಂಪ್ರದಾಯವಾಗಿದೆ. ಯಶವಂತ್ ಸಿನ್ಹಾ ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದವರು ಹಾಗೂ ಮಾರ್ಗದರ್ಶಕರಾಗಿದ್ದರು. ಅವರಿಗೆ ಶುಭಾಶಯ ಸಲ್ಲಿಸಿದ್ದರಲ್ಲಿ ಅಸಹಜವೇನೂ ಇಲ್ಲ,'' ಎಂದಿದ್ದಾರೆ. ಆದರೆ ಹಿರಿಯ ಬಿಜೆಪಿ ನಾಯಕರು ಎಂದು ನಮೂದಿಸಲಾಗಿದ್ದು ಐಟಿ ಘಟಕದ ಪ್ರಮಾದ ಎಂದು ಅವರು ಹೇಳಿದ್ದಾರೆ.

ರಾಜ್ಯ ಬಿಜೆಪಿ ವಕ್ತಾರ ಈ ಬಗ್ಗೆ ತುಟಿ ಬಿಚ್ಚಿಲ್ಲವಾದರೂ ರಾಜ್ಯ ಮಾಧ್ಯಮ ಸಂಘಟಕ ವಿಮಲ್ ಕಟಿಯಾರ್ ಮಾತನಾಡುತ್ತಾ, ಈ ತಪ್ಪಿಗೆ ಐಟಿ ಸೆಲ್ ಅನ್ನು ದೂರಿದರೂ ಇಂತಹ ಪೋಸ್ಟ್‍ಗಳನ್ನು ವಿಪಕ್ಷ ನಾಯಕರಿಗೂ ಶುಭಾಶಯ ಸಲ್ಲಿಸಲು ಮಾಡಲಾಗುತ್ತದೆ,. ಮಾಧ್ಯಮ ಅನಾವಶ್ಯಕವಾಗಿ ಬೇರೇನನ್ನೋ ಕಲ್ಪಿಸುತ್ತಿದೆ ಎಂದರು. ಪಕ್ಷದ ರಾಜ್ಯ ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲವೆಂದೂ ಅವರು ಸ್ಪಷ್ಟ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News