ಮೂತ್ರಪಿಂಡ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು ?

Update: 2018-11-10 10:33 GMT

ಮೂತ್ರಪಿಂಡಗಳ ಅಂಗಾಂಶಗಳಲ್ಲಿಯ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯು ಮೂತ್ರಪಿಂಡ ಕ್ಯಾನ್ಸರ್‌ನ್ನುಂಟು ಮಾಡುತ್ತದೆ. ಈ ಕೋಶಗಳು ಟ್ಯೂಮರ್ ಅಥವಾ ಗಡ್ಡೆಯ ರೂಪವನ್ನು ತಳೆಯುತ್ತವೆ.

ಅವರೆ ಬೀಜದ ಆಕಾರದ ಮೂತ್ರಪಿಂಡಗಳು ಎದೆಗೂಡಿನ ಕೆಳಗೆ ಬೆನ್ನಿನ ಮಧ್ಯದ ಸಮೀಪದಲ್ಲಿರುತ್ತವೆ. ಅವು ನಮ್ಮ ಮುಷ್ಟಿಯಷ್ಟು ಗಾತ್ರ ಹೊಂದಿದ್ದು, ಬೆನ್ನುಮೂಳೆಯ ಎರಡೂ ಪಕ್ಕಗಳಲ್ಲಿ ಒಂದರಂತಿರುತ್ತವೆ. ಮೂತ್ರಪಿಂಡಗಳು ದ್ರವ ಸಮತೋಲನವನ್ನು ಕಾಯ್ದುಕೊಳ್ಳುವ,ತ್ಯಾಜ್ಯಗಳನ್ನು ಶರೀರದಿಂದ ಹೊರಹಾಕುವ,ರಕ್ತದೊತ್ತಡವನ್ನು ನಿಯಂತ್ರಿಸುವ ಕಾರ್ಯಗಳನ್ನು ನಿರ್ವಹಿಸುವ ಜೊತೆಗೆ ಮೂಳೆಗಳನ್ನು ಸದೃಢಗೊಳಿಸುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತವೆ.

ಜೀವಕೋಶಗಳಲ್ಲಿ ಬದಲಾವಣೆ ಮತ್ತು ಅವುಗಳ ಅನಿಯಂತ್ರಿತ ವಿಭಜನೆ ಮೂತ್ರಪಿಂಡಗಳ ಕ್ಯಾನ್ಸರ್‌ಗೆ ನಾಂದಿ ಹಾಡುತ್ತದೆ. ಮೂತ್ರಪಿಂಡ ಕ್ಯಾನ್ಸರ್‌ನಲ್ಲಿ ಮುಖ್ಯವಾಗಿ ನಾಲ್ಕು ವಿಧಗಳಿವೆ.

► ರೇನಲ್ ಸೆಲ್ ಕಾರ್ಸಿನೋಮಾ

ವಯಸ್ಕರಲ್ಲಿ ಕಾಣಿಸಿಕೊಳ್ಳುವ ಮೂತ್ರಪಿಂಡ ಕ್ಯಾನ್ಸರ್ ಪ್ರಕರಣಗಳ ಶೇ.85ರಷ್ಟು ಈ ವರ್ಗಕ್ಕೆ ಸೇರಿರುತ್ತವೆ. ಕ್ಯಾನ್ಸರ್‌ನ ಈ ರೂಪದಲ್ಲಿ ಒಂಂದು ಮೂತ್ರಪಿಂಡದಲ್ಲಿ ಗಡ್ಡೆಯು ಬೆಳೆಯುತ್ತದೆ,ಆದರೆ ಕೆಲವೊಮ್ಮೆ ಇನ್ನೊಂದು ಮೂತ್ರಪಿಂಡಕ್ಕೂ ಹರಡುತ್ತದೆ. ಮೂತ್ರಪಿಂಡಗಳಲ್ಲಿ ಚಿಕ್ಕ ನಾಳಗಳಿದ್ದು,ಇವು ಕೋಶಗಳಿಂದ ಆವೃತಗೊಂಡಿರುತ್ತವೆ. ರೇನಲ್ ಸೆಲ್ ಕಾರ್ಸಿನೋಮಾ ಮೊದಲು ಈ ಕೋಶಗಳಲ್ಲಿ ಆರಂಭಗೊಳ್ಳುತ್ತದೆ ಮತ್ತು ಬಳಿಕ ಮೂತ್ರಪಿಂಡದ ಇತರ ಭಾಗಗಳಿಗೆ ಮತ್ತು ನಂತರ ಇತರ ಅಂಗಾಂಗಗಳಿಗೆ ಹರಡುತ್ತದೆ.

► ಟ್ರಾನ್ಸಿಷನಲ್ ಸೆಲ್ ಕಾರ್ಸಿನೋಮಾ

ಶೇ.6ರಿಂದ ಶೇ.7ರಷ್ಟು ಮೂತ್ರಪಿಂಡ ಕ್ಯಾನ್ಸರ್ ಪ್ರಕರಣಗಳು ಈ ವರ್ಗಕ್ಕೆ ಸೇರಿದ್ದಾಗಿರುತ್ತವೆ. ಇದು ಸಾಮಾನ್ಯವಾಗಿ ರೇನಲ್ ಪೆಲ್ವಿಸ್ ಎಂದು ಕರೆಯಲಾಗುವ,ಮೂತ್ರನಾಳ ಮತ್ತು ಮೂತ್ರಪಿಂಡದ ಮುಖ್ಯಭಾಗ ಜೋಡಣೆಗೊಂಡಿರುವ ಜಾಗದಲ್ಲಿ ಆರಂಭವಾಗುತ್ತದೆ. ಈ ವಿಧದ ಕ್ಯಾನ್ಸರ್ ಮೂತ್ರನಾಳ ಅಥವಾ ಮೂತ್ರಕೋಶದಲ್ಲಿಯೂ ಪ್ರಾರಂಭಗೊಳ್ಳುತ್ತದೆ.

► ರೇನಲ್ ಸಾರ್ಕೋಮಾ

ಇದು ಅಪರೋಪದ ಮೂತ್ರಪಿಂಡ ಕ್ಯಾನ್ಸರ್ ಆಗಿದ್ದು,ಸುಮಾರು ಶೇ.1ರಷ್ಟು ಪ್ರಕರಣಗಳು ಈ ವರ್ಗಕ್ಕೆ ಸೇರಿರುತ್ತವೆ. ಇದು ಮೂತ್ರಪಿಂಡಗಳ ಸಂಪರ್ಕ ಅಂಗಾಂಶಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಮೀಪದ ಇತರ ಅಂಗಗಳು ಹಾಗೂ ಮೂಳೆಗಳಿಗೆ ಹರಡುತ್ತದೆ.

► ವಿಲ್ಮ್ಸ್ ಟ್ಯೂಮರ್

ಇದು ಮಕ್ಕಳಲ್ಲಿ ಕಂಡು ಬರುವ ಮೂತ್ರಪಿಂಡ ಕ್ಯಾನ್ಸರ್ ಆಗಿದೆ. ಸುಮಾರು ಶೇ.5ರಷ್ಟು ಮೂತ್ರಪಿಂಡ ಕ್ಯಾನ್ಸರ್ ಪ್ರಕರಣಗಳು ವಿಲ್ಮ್ಸ್ ಟ್ಯೂಮರ್ ಆಗಿರುತ್ತವೆ.

  ►► ಲಕ್ಷಣಗಳು

ಮೂತ್ರದಲ್ಲಿ ರಕ್ತ ಹೋಗುವುದು(ಹೆಮಟ್ಯೂರಿಯಾ), ಹಸಿವು ಕ್ಷೀಣಗೊಳ್ಳುವುದರಿಂದ ದೇಹತೂಕ ಕಡಿಮೆಯಾಗುವುದು, ಮೂಳೆಗಳಲ್ಲಿ ನೋವು, ಅಸಾಧಾರಣವಾದ ಅಧಿಕ ರಕ್ತದೊತ್ತಡ,ಬಳಲಿಕೆ ಮತ್ತು ಜ್ವರ ಇವು ಮೂತ್ರಪಿಂಡ ಕ್ಯಾನ್ಸರ್‌ನ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಮೂತ್ರಪಿಂಡ ಕ್ಯಾನ್ಸರ್ ನಾಲ್ಕು ಹಂತಗಳನ್ನು ಹೊಂದಿದ್ದು, ರೋಗಿಯು ಬದುಕುಳಿಯುವ ಪ್ರಮಾಣ ಪ್ರತಿ ಹಂತಕ್ಕೂ ಭಿನ್ನವಾಗಿರುತ್ತದೆ. ಮೊದಲ ಹಂತದಲ್ಲಿ ಟ್ಯೂಮರ್‌ನ ಗಾತ್ರ ಏಳು ಸೆಂ.ಮೀ.ಗಿಂತಲೂ ಕಡಿಮೆಯಿದ್ದು,ರೋಗಿಗಳು ಬದುಕುಳಿಯುವ ಸಾಧ್ಯತೆ ಶೇ.95ರಷ್ಟು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ನಂತರದ ಹಂತಗಳಲ್ಲಿ ಟ್ಯೂಮರ್‌ನ ಗಾತ್ರ ಬೆಳೆಯುತ್ತಲೇ ಹೋಗುತ್ತದೆ ಮತ್ತು ಎರಡು,ಮೂರು ಮತ್ತು ನಾಲ್ಕನೇ ಹಂತಗಳಲ್ಲಿ ರೋಗಿಯು ಬದುಕುಳಿಯುವ ಪ್ರಮಾಣ ಅನುಕ್ರಮವಾಗಿ ಶೇ.88,ಶೇ.50 ಮತ್ತು ಶೇ.20ರಷ್ಟಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News