ನೀವು ನಂಬಲೇಬೇಕು, ಈ ವ್ಯಕ್ತಿ ನಿಜಕ್ಕೂ ಅರ್ಧ ಶರೀರವನ್ನು ಮಾತ್ರ ಹೊಂದಿದ್ದಾನೆ!

Update: 2018-11-10 11:22 GMT

ದೈಹಿಕ ವೈಕಲ್ಯಗಳೊಂದಿಗೆ ಜನಿಸುವುದು ಪರೋಕ್ಷವಾಗಿ ದೇವರ ಆಶೀರ್ವಾದ ಎಂದೇ ಹೇಳಬಹುದು,ಏಕೆಂದರೆ ಇಂತಹ ಊನಗಳಿಂದಾಗಿ ತಮ್ಮ ತಾಕತ್ತು ಮತ್ತು ದೌರ್ಬಲ್ಯಗಳನ್ನು ಅವರು ಚೆನ್ನಾಗಿ ಅರಿತಿರುತ್ತಾರೆ. ಅಮೆರಿಕದ ಅಲಬಾಮಾ ನಿವಾಸಿ ರಾಡಿ ಬರ್ಟನ್(30)ದು ಇಂತಹುದೇ ಪ್ರಕರಣವಾಗಿದೆ.

ಬರ್ಟನ್ ಹುಟ್ಟುವಾಗಲೇ ಕೆಳ ಬೆನ್ನುಮೂಳೆಯ ವೈಕಲ್ಯವನ್ನು ಜೊತೆಯಲ್ಲಿಟ್ಟು ಕೊಂಡೇ ಬಂದಿದ್ದ. ‘ಸಾಕ್ರಲ್ ಏಜೆನೆಸಿಸ್’ ಎಂದು ಕರೆಯಲಾಗುವ ಈ ವೈಕಲ್ಯ ಅಮೆರಿಕದಲ್ಲಿ ಪ್ರತಿ 25,000 ಜನನಗಳ ಪೈಕಿ ಒಂದರಲ್ಲಿ ಕಂಡುಬರುತ್ತದೆ.

► ಮೂರರ ಹರೆಯದಲ್ಲಿಯೇ ಕಾಲುಗಳನ್ನು ಕತ್ತರಿಸಲಾಗಿತ್ತು

ಬರ್ಟನ್‌ಗೆ ಮೂರು ವರ್ಷ ಪ್ರಾಯವಾಗಿದ್ದಾಗ ಆತನ ಎರಡೂ ಕಾಲುಗಳನ್ನು ವೈದ್ಯರು ಕತ್ತರಿಸಿದ್ದರು. ಆದರೆ ಈಗಲೂ ಆತ ಇತರರಂತೆ ಸಾಮಾನ್ಯ ಜೀವನವನ್ನು ನಡೆಸುವಲ್ಲಿ ಯಶಸ್ವಿಯಾಗಿದ್ದಾನೆ. ವ್ಯಕ್ತಿ ಯಾವುದೇ ಸ್ಥಿತಿಯಲ್ಲಿರಲಿ,ಆದರೆ ಆತ ಧನಾತ್ಮಕ ವಿಚಾರಗಳನ್ನು ಹೊಂದಿರಬೇಕು ಮತ್ತು ಸದಾ ನಗುನಗುತ್ತಲೇ ಇರಬೇಕು ಎನ್ನುವುದಕ್ಕೆ ಬರ್ಟನ್ ಇತರರಿಗೆ ಅತ್ಯುತ್ತಮ ಉದಾಹರಣೆಯಾಗಿದ್ದಾನೆ.

► ಸಹಪಾಠಿಗಳು ಗೇಲಿ ಮಾಡುತ್ತಿದ್ದರು

ಬರ್ಟನ್‌ನ ಕಾಲುಗಳು ಕತ್ತರಿಸಲ್ಪಟ್ಟಾಗ ಸೊಂಟದ ಕೆಳಗೆ ಜೋಲುತ್ತಿದ್ದ ತೊಡೆಗಳ ಎರಡು ಪಳೆಯುಳಿಕೆಗಳು ಮಾತ್ರ ಉಳಿದುಕೊಂಡಿದ್ದವು. ಹೀಗಾಗಿ ಶಾಲೆಯಲ್ಲಿನ ಸಹಪಾಠಿಗಳು ಕ್ರೂರವಾಗಿ ಗೇಲಿ ಮಾಡುತ್ತಿದ್ದರು. ಇದು ಆತ ಹೈಸ್ಕೂಲು ತಲುಪುವವರೆಗೂ ನಡೆದೇ ಇತ್ತು. ಆ ವೇಳೆಗೆ ಆತನ ಸಹಪಾಠಿಗಳು ಪಕ್ವ ಬುದ್ಧಿಯವರಾಗಿದ್ದರು ಮತ್ತು ಆತನ ಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ಬರ್ಟನ್ ಗೇಲಿಗಳನ್ನೆದುರಿಸಬೇಕಿರಲಿಲ್ಲ.

► ಸ್ವತಂತ್ರವಾಗಿ ಬದುಕುವುದು ಆತನ ಬಯಕೆ

ಮಲಮೂತ್ರಗಳನ್ನು ಸಂಗ್ರಹಿಸುವ ಕೊಲೊಸ್ಟಮಿ ಬ್ಯಾಗ್‌ನ್ನು ಬರ್ಟನ್ ಸದಾ ಧರಿಸಿರುವುದು ಅನಿವಾರ್ಯವಾಗಿದೆ,ಆದರೆ ಇದು ಆತನ ಸ್ಫೂರ್ತಿಯನ್ನು ಒಂದಿನಿತೂ ಕುಂದಿಸಿಲ್ಲ. ಆತ ಸ್ವತಂತ್ರ ವ್ಯಕ್ತಿಯಾಗಿ ಬದುಕು ಸಾಗಿಸಲು ಬಯಸಿದ್ದಾನೆ. ತನ್ನ ಮುಂದೆ ಬೆಟ್ಟದಷ್ಟು ಸವಾಲುಗಳಿದ್ದರೂ ಆತ ಭವಿಷ್ಯದತ್ತ ಕಣ್ಣು ನೆಟ್ಟಿದ್ದಾನೆ. ಇತರರಂತೆ ಆತನೂ ತನ್ನ ಸ್ನೇಹಿತರೊಂದಿಗೆ ಹೊರಾಂಗಣ ಕ್ರೀಡೆಗಳನ್ನು ಆಡುತ್ತಾನೆ. ಟೇನಲ್ ಟೆನ್ನಿಸ್,ಸ್ಕೇಟ್‌ಬೋರ್ಡ್ ಮತ್ತು ಕೆಲವು ಇತರ ಆಟಗಳನ್ನು ಖುದ್ದು ತನ್ನೊಂದಿಗೇ ಆಡುವುದನ್ನು ತುಂಬ ಇಷ್ಟಪಡುತ್ತಾನೆ. ಚಲಿಸಲು ಕೈಗಳನ್ನೇ ಬಳಸುವ ಬರ್ಟನ್ ಟೆನಿಸ್ ಆಡುವಾಗ ಮಾತ್ರ ಗಾಲಿಖುರ್ಚಿಯನ್ನು ಬಳಸುತ್ತಾನೆ. ತನ್ನ ಕಾರಿಗೆ ಹತ್ತಲು ಮತ್ತು ಇಳಿಯಲು ಗಾಲಿಖುರ್ಚಿಗಿಂತ ಕೈಗಳ ಬಳಕೆಯೇ ಹೆಚ್ಚು ಸುಲಭವೆನ್ನುತ್ತಾನೆ ಆತ.

► ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿರುವ ಕೊಲೊಸ್ಟಮಿ ಬ್ಯಾಗ್‌

ತನ್ನ ಅಪರೂಪದ ದೇಹಸ್ಥಿತಿಯಿಂದಾಗಿ ಕೊಲೊಸ್ಟಮಿ ಬ್ಯಾಗ್‌ನ ಬಳಕೆ ಬರ್ಟನ್‌ಗೆ ಅನಿವಾರ್ಯವಾಗಿದೆ. ಇದು ಆತನ ಆತ್ಮವಿಶ್ವಾಸವನ್ನು ತಗ್ಗಿಸುತ್ತಿದೆ. ಈ ಬ್ಯಾಗ್ ತನಗೊಂದು ತೊಡಕಾಗಿದೆ. ಸ್ನೇಹಿತರೊಂದಿಗೆ ನಿಕಟವಾಗಿರುವಾಗ ಈ ಬ್ಯಾಗ್ ಎಲ್ಲಾದರೂ ತೆರೆದುಕೊಂಡುಬಿಟ್ಟರೆ ಎಂಬ ಆತಂಕ ತನ್ನನ್ನು ಸದಾ ಕಾಡುತ್ತಲೇ ಇರುತ್ತದೆ ಎನ್ನುತ್ತಾನೆ ಬರ್ಟನ್.

► ಈಗಲೂ ಬರ್ಟನ್ ತಂದೆಯಾಗಬಲ್ಲ

ತನ್ನ ದೇಹಸ್ಥಿತಿ ಹೀಗಿದ್ದರೂ ತಾನು ಮಕ್ಕಳನ್ನು ಹೊಂದಬಹುದು ಎನ್ನುವ ವಾಸ್ತವ ಹೆಚ್ಚಿನ ಜನರನ್ನು ಅಚ್ಚರಿಗೆ ಕೆಡವುತ್ತಿದೆ ಎನ್ನುತ್ತಾನೆ ಬರ್ಟನ್. ತಾನೋರ್ವ ಗಗನಯಾತ್ರಿಯಾಗಬೇಕು ಎನ್ನುವುದು ಬರ್ಟನ್ ಕನಸು. ಆದರೆ ತನ್ನ ದೇಹಸ್ಥಿತಿ ತಾನು ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಅಡ್ಡಿಯಾಗುತ್ತದೆ ಎಂಬ ಅಳುಕು ಆತನಿಗಿದ್ದಂತಿಲ್ಲ. ಸಾಯುವ ಮುನ್ನ ಎಂದಾದರೊಮ್ಮೆ ತನ್ನ ಕನಸು ನನಸು ಮಾಡಿಕೊಳ್ಳುವ ಅದಮ್ಯ ಇಚ್ಛೆ ಆತನದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News