ಕಬ್ಬನ್ ಪಾರ್ಕ್‌ನಲ್ಲಿ ಕಂಗೊಳಿಸಿದ ಗ್ರಾಮೀಣ ಸೊಗಡು
ಬೆಂಗಳೂರು, ನ.10: ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಕಬ್ಬನ್ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಬ್ಬದಲ್ಲಿ ಗ್ರಾಮೀಣ ಸೊಗಡಿನ ಆಟ-ಪಾಠಗಳನ್ನಾಡುವ ಮೂಲಕ ಪಾರ್ಕ್ ಪೂರ್ತಿ ಹಳ್ಳಿಯಂತೆ ಕಂಗೊಳಿಸುತ್ತಿತ್ತು.
ನಗರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕಬ್ಬನ್‌ಪಾರ್ಕ್‌ನಲ್ಲಿ ಮಕ್ಕಳ ಜಗತ್ತು ಅನಾವರಣಗೊಂಡಿದ್ದು, ಹಬ್ಬಕ್ಕಾಗಿ ಪಾರ್ಕ್ ಅನ್ನು ಮಕ್ಕಳಿಗಾಗಿ ಮೀಸಲಿಡಲಾಗಿದೆ. ವಿವಿಧ ಜಿಲ್ಲೆಗಳ ಬಾಲಮಂದಿರ ಮತ್ತು ಸಂಘ-ಸಂಸ್ಥೆಗಳಿಂದ ಮಕ್ಕಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಗಳ ಪ್ರದರ್ಶನ ಮಾಡಿದರು.
ಗ್ರಾಮೀಣ ಕ್ರೀಡೆಗಳಾದ ಬುಗುರಿ, ಗೋಲಿ, ಚೌಕಾಬಾರ, ಲಗೋರಿ, ಹಗ್ಗ-ಜಗ್ಗಾಟ, ಅಣೆಕಲ್ಲು, ಕುಂಟೆಬಿಲ್ಲೆ ಸೇರಿದಂತೆ ಹಲವಾರು ಕ್ರೀಡೆಗಳನ್ನು ಮಕ್ಕಳಿಗಾಗಿ ಮೀಸಲಿಡಲಾಗಿತ್ತು. ಅಲ್ಲದೆ, ಅಜ್ಜಿಯ ಕಥೆ ಹೆಸರಿನ ಅಡಿಯಲ್ಲಿ ಕುಣಿಗಲ್ ತಾಲೂಕಿನ 77ವರ್ಷದ ಅಜ್ಜಿಯು ಕಥೆ ಹಾಗೂ ಹಾಡು ಹೇಳುತ್ತಿದ್ದ ದೃಶ್ಯವು ಮಕ್ಕಳಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿತ್ತು. ಅಲ್ಲದೆ, ಚಿಕ್ಕಮ್ಮ ಎಂಬಾಕೆ ಹೂ ಕಟ್ಟುವುದು ಕಲಿಸುತ್ತಿದ್ದರೆ, ರಾಯಭಾಗ ತಾಲೂಕಿನ ಅಕ್ಕನ ಬಳಗ ಜಾನಪದ ತಂಡದವರು ರಾಗಿ ಬೀಸುವುದನ್ನು ಕಲಿಸುತ್ತಿದ್ದರು.
ತೋಟಗಾರಿಕೆ ಇಲಾಖೆಯಿಂದ ಅಂಗನವಾಡಿ ಕೇಂದ್ರ, ಮಾತೃಪೂರ್ಣ ಯೋಜನೆ, ಮಮತೆಯ ತೊಟ್ಟಿಲು ಹಾಗೂ ಹಸುಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದರು. ಮೀನುಗಾರಿಕೆ ಇಲಾಖೆಯಿಂದ ವಿವಿಧ ಬಣ್ಣ, ಆಕಾರಗಳ ಮೀನುಗಳನ್ನು ಪ್ರದರ್ಶಿಸಿದ್ದು ಮಕ್ಕಳು ಇದನ್ನು ನೋಡಿ ಪುಳಕಿತಗೊಂಡರು.
ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಡಿಯಲ್ಲಿ ಬರುವ ನಾಟಕ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಯಕ್ಷಗಾನ, ಜಾನಪದ ಅಕಾಡೆಮಿಗಳ ಮಳಿಗೆಗಳಲ್ಲಿ ಇದ್ದ ವಿವಿಧ ಆಕೃತಿಯ ಆಭರಣಗಳನ್ನು, ಧಿರಿಸುಗಳನ್ನು ಮಕ್ಕಳು ತೊಟ್ಟುಕೊಂಡು ಖುಷಿ ಪಟ್ಟರು. ರಕ್ಷಣಾ ಇಲಾಖೆಯಿಂದ ಪ್ರದರ್ಶನಕ್ಕೆ ಇರಿಸಿದ್ದ ಬಂದೂಕು, ಗನ್ ಹಾಗೂ ಮತ್ತಿತರೆ ಶಸ್ತ್ರಾಸ್ತ್ರಗಳನ್ನು ಮಕ್ಕಳು ಕೈಯಲ್ಲಿಡಿದು ಸಂಭ್ರಮಿಸಿದರು.
ಇನ್ನುಳಿದಂತೆ ಎಚ್‌ಎಎಲ್, ಅರಣ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪತ್ರಗಾರ ಇಲಾಖೆ, ನಮ್ಮ ಮೆಟ್ರೋ, ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ, ಕಾರ್ಮಿಕ ಇಲಾಖೆ, ಕೆಎಂಎಫ್, ಶಿಕ್ಷಣ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನೇತೃತ್ವದಲ್ಲಿ ನಿರ್ಮಿಸಿದ್ದ ಮಳಿಗೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಹಾಗೂ ಖುಷಿಪಡಿಸುವ ವಸ್ತುಗಳು, ವಿಷಯಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಸ್ತ್ರೀಶಕ್ತಿ ಸಂಘಗಳು ಸಿದ್ಧಪಡಿಸಿದ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆಗಳು, ಕರಕುಶಲ ಸಾಮಗ್ರಿಗಳ ಪ್ರದರ್ಶನ ಮತ್ತು ಆಹಾರ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ಎಕೋ ಸಂಸ್ಥೆ, ಮಕ್ಕಳ ಹಕ್ಕುಗಳ ಸಂಸ್ಥೆ, ಎಂಸಿಬಿ ಸಂಸ್ಥೆಗಳ ವತಿಯಿಂದಲೂ ಮಕ್ಕಳಿಗೆ ಸಂಬಂಧಿಸಿದ ಮಾಹಿತಿ ಮಳಿಗೆಗಳನ್ನು ತೆರೆಯಲಾಗಿತ್ತು.
ಕಬ್ಬನ್ ಪಾರ್ಕ್‌ನಲ್ಲಿನ ಎಲ್ಲ ಗೇಟ್‌ಗಳನ್ನು ಮುಚ್ಚಿ ವಾಹನ ಸಂಚಾರ ನಿಷೇಧ ಮಾಡಿದ್ದು, ವಿವಿಧ ಮೂಲೆಗಳಲ್ಲಿ ಮಕ್ಕಳಿಗಾಗಿ ಡೊಳ್ಳು ಕುಣಿತ, ಕಂಸಾಳೆ, ಸೋಮನಕುಣಿತ, ಸಂಬಾಳ ವಾದನ, ಭರತನಾಟ್ಯ, ಹೆಜ್ಜೆ ಮೇಳ, ಪೂಜಾ ಕುಣಿತ, ಮಹಿಳಾ ನಗಾರಿ, ತಮಟೆ ವಾದನ, ಕೋಲಾಟ, ಹುಲಿ ವೇಷ, ಡೊಳ್ಳಿನ ಕೈ ಪಟ್ಟು, ಡಫ್ ವಾದನ, ನಂದಿ ಧ್ವಜ ಕುಣಿತ, ವೀರಗಾಸೆ, ಕತ್ತಿವರಸೆ, ಹಕ್ಕಿಪಿಕ್ಕಿ ನೃತ್ಯ, ಜಾನಪದ ನೃತ್ಯ ಸೇರಿದಂತೆ ಹಲವು ಜಾನಪದ ಕಲೆಗಳನ್ನು ಪ್ರದರ್ಶಿಸಿದ್ದು, ಮಕ್ಕಳಲ್ಲಿ ಸಂತಸ ಮೂಡಿಸಿತ್ತು.
ವಿವಿಧ ಅಕಾಡೆಮಿಗಳಾದ ಲಲಿತಕಲೆ, ಸಾಹಿತ್ಯ, ಶಿಲ್ಪಕಲಾ ಮತ್ತು ಜಾನಪದ ಅಕಾಡೆಮಿಗಳ ಮೇಲುಸ್ತುವಾರಿಯಲ್ಲಿ ನಾಟಕ, ಸಂಗೀತ, ಶಿಲ್ಪಕಲೆ, ಜಾನಪದ ಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ನೃತ್ಯ ಪ್ರಕಾರಗಳು, ಸಮೂಹ ನೃತ್ಯ, ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಸರಕಾರಿ ಶಾಲಾ ಮಕ್ಕಳು ಹಾಗು ಬಾಲಮಂದಿರದ ಮಕ್ಕಳಿಂದ ರಚಿತವಾದ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ಹಾಗೂ ವಿಶೇಷ ಚೇತನ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಜಯಮಾಲ, ದೇಶದ ಸಂಪತ್ತು ಆರೋಗ್ಯವಂತ ಮಕ್ಕಳು. ಹೀಗಾಗಿ, ಮಕ್ಕಳು ಆರೋಗ್ಯವಂತರಾಗಿ ಆಗಲು ಅಲ್ಲಿ ಸಾಂಸ್ಕೃತಿಕ ವಾತಾವರಣ ಅಗತ್ಯ ಎಂದರು. ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುತ್ತಿದೆ. ಮಕ್ಕಳು ಸಣ್ಣ ವಯಸ್ಸಿನಲ್ಲಿ ಬಾಲ್ಯ ಕಳೆದುಕೊಳ್ಳುತ್ತಿದ್ದಾರೆ, ವಯಸ್ಸಾದ ಮೇಲೆ ವೃದ್ಧಾಪ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಹತ್ತಾರು ವರ್ಷಗಳ ಹಿಂದೆ ಪೌಷ್ಟಿಕಾಂಶವುಳ್ಳ ಆಹಾರದ ಕೊರತೆಯಿದ್ದರೂ, ಆರೋಗ್ಯವಂತ ಸಮಾಜವಿತ್ತು. ಈಗ ಸರಕಾರ ಎಲ್ಲ ರೀತಿಯ ಪೌಷ್ಟಿಕಾಂಶಗಳನ್ನು ನೀಡುತ್ತಿದ್ದರೂ, ಅನಾರೋಗ್ಯದಂತಹ ಸಮಾಜ ನಿರ್ಮಾಣವಾಗುತ್ತಿದೆ ಎಂದರು.
ಸಮಾರಂಭದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ ಕಣ್ಣೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾನು 60-70 ರ ದಶಕದಿಂದಲೂ ಹಾಡು ಹಾಡುತ್ತಿದ್ದೇನೆ. 80 ರ ದಶಕದಲ್ಲಿ ಆಕಾಶವಾಣಿಯಲ್ಲಿಯೂ ಹಾಡು ಹಾಡಿದ್ದೆ. ನಮ್ಮ ಹೊಲದಲ್ಲಿ ಭತ್ತ ನಾಟಿ ಮಾಡುವ ವೇಳೆಯಲ್ಲಿ ಹಾಡು ಹಾಡುತ್ತಿದ್ದರು. ಅಲ್ಲಿ ಹಾಡುತ್ತಿದ್ದನ್ನು ನಾನು ನೋಡಿ ಮಾರನೆಯ ದಿನ ಬೆಳಗ್ಗೆನೇ ಹಾಡ್ತಿದ್ದೆ. ನನಗೆ ಯಾರು ಗುರು ಅಂತಿಲ್ಲ. ಅಷ್ಟೇ ಅಲ್ಲ ನಾನು ಕಥೆಯನ್ನೂ ಹೇಳುತ್ತೇನೆ. ಜಾನಪದ ಪರಿಷತ್ ಸೇರಿದಂತೆ ವಿವಿಧ ಅಕಾಡೆಮಿಗಳು, ಸರಕಾರ ನನ್ನನ್ನು ಗುರುತಿಸಿ ಸುಮಾರು 150 ಪ್ರಶಸ್ತಿಗಳನ್ನು ನೀಡಿದೆ.
-ಗಂಗಾ ಹುಚ್ಚಮ್ಮ, ಎಡಯೂರು(ಕಥೆ ಹೇಳುವ ಅಜ್ಜಿ)
ಅಚ್ಚುಕಟ್ಟಾದ ವ್ಯವಸ್ಥೆ
ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಿಸುವುದರ ಜೊತೆಗೆ ಅವರ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಹಾಗೂ ಪೊಲೀಸ್ ಇಲಾಖೆ ಎಲ್ಲ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿತ್ತು.