ಸಾಮಾಜಿಕ ಸ್ಥಿತಿಗತಿಗಳ ದಾಖಲೀಕರಣವೂ ಆಗುತ್ತಿರುವುದು ಸಿನಿಮಾದ ಮಹತ್ವ: ನಿರ್ದೇಶಕ ಗಿರೀಶ್ ಕಾಸರವಳ್ಳಿ
ಬೆಂಗಳೂರು, ನ. 10: ಕಾಲದಿಂದ ಕಾಲಕ್ಕೆ ಚಲನಚಿತ್ರದ ಬೆಳವಣಿಗೆಯ ಮೂಲಕವೇ ಆಯಾ ಕಾಲದ ಸಾಮಾಜಿಕ ಸ್ಥಿತಿಗತಿಗಳ ದಾಖಲೀಕರಣವೂ ಆಗುತ್ತಿರುವುದು ಸಿನಿಮಾದ ಮಹತ್ವದ ಅಂಶವಾಗಿದೆ ಎಂದು ನಿರ್ದೇಶಕ ಡಾ. ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ವಾರ್ತಾ ಇಲಾಖೆಯ ಸುಲೋಚನಾ ಚಿತ್ರಮಂದಿರದಲ್ಲಿ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಪೂನಾದ ಫಿಲಂ ಅಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್ ವತಿಯಿಂದ ನಡೆಯುತ್ತಿರುವ ಐದು ದಿನಗಳ ಚಲನಚಿತ್ರ ರಸಗ್ರಹಣ ಶಿಬಿರವನ್ನು ಉದ್ಘಾಟಸಿ ಅವರು ಮಾತನಾಡುತ್ತಿದ್ದರು.
ಯಾವುದೇ ಕಲಾ ಮಾಧ್ಯಮಕ್ಕೆ ಇಲ್ಲದ ರಸಗ್ರಹಣ ಸಿನಿಮಾ ಮಾಧ್ಯಮಕ್ಕೆ ಏಕೆ ಬೇಕು ಎಂಬುದನ್ನು ವಿಷದೀಕರಿಸಿದ ಗಿರೀಶ್ ಕಾಸರವಳ್ಳಿ, ಸಿನಿಮಾ ಮಾಧ್ಯಮಕ್ಕೆ ಇರುವ ವಿವಿಧ ಆಯಾಮಗಳು ಅದನ್ನು ಬೇಡುತ್ತವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಲಾತ್ಮಕತೆಯ ಆಯಾಮದಲ್ಲಿ ಮಾಡುವ ಚಲನಚಿತ್ರವೊಂದಕ್ಕೆ ಕಥಾ ಹಂದರದ ಜೊತೆ ಜೊತೆಗೆ ನಿರ್ದೇಶಕನ ಸೃಜನಶೀಲತೆಯೂ ಕಾರಣವಾಗುತ್ತದೆ. ಅಂದಿನ ಆ ಪರಿಸರದ ಸಮಕಾಲೀನತೆಯ ಸ್ಪರ್ಷವೂ ಇರುತ್ತದೆ. ಆದುದರಿಂದ ರಸಗ್ರಹಣ ಶಿಬಿರಗಳು ಈ ವಿಶ್ಲೇಷಣೆಗೆ ಪೂರಕವಾದ ಮನಸ್ಸುಗಳನ್ನು ಸೃಷ್ಟಿಸುತ್ತದೆ ಎಂದರು.
ಆಶಯ ಭಾಷಣ ಮಾಡಿದ ಪೂನಾ ಫಿಲಂ ಮತ್ತು ಟೆಲಿವಿಷನ್ ಸಂಸ್ಥೆಯ ನಿರ್ದೇಶಕ ಭೂಪೇಂದ್ರ ಖೈನ್‌ತೊಲ, ಇಡೀ ಭಾರತದಲ್ಲಿ ಪೂನಾ ಫಿಲಂ ಇನ್ಸ್‌ಟಿಟ್ಯೂಟ್ ಸಿನಿಮಾ ರಸಗ್ರಹಣ ಶಿಬಿರವನ್ನು ನಡೆಸಲಾಗುತ್ತದೆ. ಜನಸಾಮಾನ್ಯನಿಗೂ ಸಿನಿಮಾ ತಂತ್ರಜ್ಞಾನವನ್ನು ಸುಲಭವಾಗಿ ದಾಟಿಸುವ ಕೆಲಸವನ್ನು ಈ ಮೂಲಕ ನಡೆಸಲಾಗುತ್ತಿದೆ ಎಂದರು.
ಚಲನಚಿತ್ರ ಆಸಕ್ತಿ ಬೆಂಗಳೂರಿನಂತಹ ಪ್ರದೇಶದಲ್ಲಿ ಹೆಚ್ಚಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಬೆಂಗಳೂರು ಜಗತ್ತಿನ ಪ್ರಮುಖ ಸಿನಿಮಾ ಕೇಂದ್ರವಾಗಲಿರುವ ವಿಶ್ವಾಸ ವ್ಯಕ್ತಪಡಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಎಚ್.ಬಿ.ದಿನೇಶ್ ಮಾತನಾಡಿ, ಅಕಾಡೆಮಿ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲಿದೆ ಎಂದರಲ್ಲದೆ, ಚಲನಚಿತ್ರ ರಸಗ್ರಹಣ ಶಿಬಿರಕ್ಕೆ ಯುವ ಉತ್ಸಾಹಿ ನಿರ್ದೇಶಕರು ಆಸಕ್ತಿ ತೋರಿರುವುದು ಗಮನಾರ್ಹ ಎಂದರು.
ಜಿಲ್ಲಾ ಮಟ್ಟದಲ್ಲೂ ಚಲನಚಿತ್ರ ರಸಗ್ರಹಣ ಶಿಬಿರವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದ ಅವರು ಪ್ರಕಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ನಮ್ಮ ಮಾತೃಭಾಷೆಯಲ್ಲೇ ಅಭಿವ್ಯಕ್ತಿಸುವ ಸಿನಿಮಾಗಳು ಹೆಚ್ಚು ಪ್ರಯೋಗಶೀಲವಾಗಿರುತ್ತವೆ. ಕನ್ನಡ ಚಲನ ಚಿತ್ರರಂಗದ ಹೆಗ್ಗಳಿಕೆಯು ಅದೇ ಆಗಿದೆ ಎಂದು ಹೇಳಿದರು.
ಪೂನಾ ಫಿಲಂ ಇನ್ಸ್‌ಟಿಟ್ಯೂಟ್ ತಜ್ಞರಾದ ಪಂಕಜ್ ಸಕ್ಸೇನಾ ಹಾಗೂ ಮನೀಶ್ ಭಾರದ್ವಾಜ್ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.