ನೋಂದಣಿ-ಮುದ್ರಾಂಕ ಇಲಾಖೆ ‘ಆನ್‌ಲೈನ್ ಸೇವೆ’ಗೆ ನ.12ಕ್ಕೆ ಚಾಲನೆ: ಸಚಿವ ದೇಶಪಾಂಡೆ

Update: 2018-11-10 15:33 GMT

ಬೆಂಗಳೂರು, ನ. 10: ಸ್ಥಿರಾಸ್ತಿ ನೋಂದಣಿಗೆ ಸಂಬಂಧಿಸಿದ ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರಪತ್ರ ವಿಷಯಗಳ ನೋಂದಣಿ ಸಂಬಂಧಿತ ವಿವಿಧ ಸೇವೆಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕೆಂಬ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ‘ಕಾವೇರಿ ಆನ್‌ಲೈನ್ ಸೇವೆ’’ಯನ್ನು ನ.12ರಂದು ಆರಂಭಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಆನ್‌ಲೈನ್ ಸೇವೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಸೋಮವಾರ ನಡೆಯಲಿರುವ ಸಮಾರಂಭದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಕಾವೇರಿ ಆನ್‌ಲೈನ್ ಸೇವೆಗಳ ಜಾಲದಲ್ಲಿ ಸ್ಥಿರಾಸ್ತಿಗಳ ಋಣಭಾರರಾಹಿತ್ಯ ಪ್ರಮಾಣಪತ್ರ (ಆನ್‌ಲೈನ್ ಇಸಿಸಿಸಿ), ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವಿಕೆ, ಸಾರ್ವಜನಿಕರಿಂದ ನೋಂದಣಿಪೂರ್ವ ಡೇಟಾ ಎಂಟ್ರಿ, ಆಸ್ತಿಪಾಸ್ತಿಗಳ ನೋಂದಣಿಗೆ ಮುಂಗಡವಾಗಿ ಕಾಲ ನಿಗದಿಪಡಿಸಿಕೊಳ್ಳುವಿಕೆ (ಅಪಾಯಿಂಟ್‌ಮೆಂಟ್ ಬುಕಿಂಗ್), ರಾಜ್ಯದ ಎಲ್ಲ 250 ಉಪನೋಂದಣಿ ಕಚೇರಿಗಳ ವಿಳಾಸದ ಮಾಹಿತಿ, ವಿವಾಹ ನೋಂದಣಿ ಕಚೇರಿಯ ಗುರುತಿಸುವಿಕೆ ಮುಂತಾದ ಸೇವೆಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಕೆಎಸಿಒಎಂಪಿ ಕಾಯ್ದೆಯಡಿಯಲ್ಲಿ ಕೃಷಿ ಸಾಲಗಳಿಗೆ ಸಂಬಂಧಿಸಿದ ಡಿಕ್ಲರೇಷನ್ ಮತ್ತು ಸಾಲ ತೀರುವಳಿ ಪತ್ರಗಳ ಆನ್‌ಲೈನ್ ಫೈಲಿಂಗ್ ಸೌಲಭ್ಯವನ್ನು ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಒದಗಿಸಲಾಗಿದೆ ಎಂದು ಸಚಿವ ದೇಶಪಾಂಡೆ ಮಾಹಿತಿ ನೀಡಿದ್ದಾರೆ.

ಕಾವೇರಿ ಆನ್‌ಲೈನ್ ಸೇವೆಗಳ ಜಾಲದಲ್ಲಿ ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯವನ್ನು ತಿಳಿಯಲು ಅನುಕೂಲವಾಗುವಂತೆ ‘ಮೌಲ್ಯ’ ಎಂಬ ಜಿಐಎಸ್ ಆಧಾರಿತ ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜತೆಗೆ, ಸಾರ್ವಜನಿಕರು ತಾವು ಮಾಡಿಕೊಳ್ಳುವ ಕರಾರು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಿ, ಇ-ಸ್ಟಾಂಪ್ ಕಾಗದವನ್ನು ತಮ್ಮ ಮನೆಯಿಂದಲೇ ಪ್ರಿಂಟೌಟ್ ತೆಗೆದುಕೊಂಡು ಇಟ್ಟುಕೊಳ್ಳಬಹುದು. ಇದಕ್ಕೆ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ಸಹಯೋಗ ನೀಡಿದೆ ಎಂದು ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News