ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಆರೋಪಿ ಬಿಷಪ್ ಫ್ರಾಂಕೊ ಮಲ್ಲಕಲ್‌ಗೆ ಶಿಕ್ಷೆ ನೀಡಲು ಒತ್ತಾಯ
ಬೆಂಗಳೂರು, ನ. 10: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಜಲಂಧರ್ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮಲ್ಲಕಲ್‌ಗೆ ಶಿಕ್ಷೆ ನೀಡುವ ಮೂಲಕ ಸಂತ್ರಸ್ಥೆಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶನಿವಾರ ನಗರದ ಟೌನ್ ಹಾಲ್‌ನಲ್ಲಿ ಜಲಂಧರ್ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮಲ್ಲಕಲ್‌ರ ಅತ್ಯಾಚಾರವನ್ನು ಖಂಡಿಸಿ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಮೊಂಬತ್ತಿ ಬೆಳಗಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ವಿರೋಧಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ವಿಮೋಚನಾ ಸಂಘಟನೆಯ ಕಾರ್ಯಕರ್ತೆ ಅನಿತಾಚಾರ್ಯ ಮಾತನಾಡಿ, ಧಾರ್ಮಿಕ ಮುಖಂಡರು ದೇವರ ಆವತಾರವೆಂದು, ಮಾನಸಿಕವಾಗಿ ನೊಂದಿರುವ ಮಹಿಳೆಯರ ಮನ ಓಲೈಕೆ ಮಾಡುವ ಮೂಲಕ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರುವುದು ಖಂಡನೀಯವಾದದ್ದು ಇಂತವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಮಹಿಳಾ ಸುರಕ್ಷತೆಗೆ ಹಲವು ಕಾನೂನು ಜಾರಿಗೆ ಬಂದರೂ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಆದ್ದರಿಂದ ದೌರ್ಜನ್ಯ ತಡೆಗಟ್ಟಲು ಮಹಿಳೆಯರಿಗೆ ಕಾನೂನು ತಿಳುವಳಿಕೆ ನೀಡುವ ಅವಶ್ಯಕತೆ ಇದೆ ಹಾಗೂ ಎಲ್ಲದಕ್ಕೂ ಮಹಿಳೆಯನ್ನೇ ದೂಷಿಸುವುದು ಸರಿಯಲ್ಲ ಎಂದು ತಿಳಿಸಿದರು.
ಶೋಷಣೆ ತಡೆಗಟ್ಟಲು ಎಲ್ಲರೂ ಕಾನೂನು ಹೋರಾಟ ಕೈಗೊಳ್ಳಬೇಕು. ಅತ್ಯಾಚಾರ ಹತೋಟಿಗೆ ತರಲು ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಮಹಿಳಾ ಸಂಘಟನೆಗಳು ಶೋಷಣೆ ಸಹಿಸಿಕೊಳ್ಳದೆ, ವಿರೋಧಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಕಾನೂನು ಹೋರಾಟ ಮಾಡಬೇಕು ಎಂದರು.
ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ದೊರೆಕಿಸಿಕೊಡಲು ಎಲ್ಲರೂ ಮುಂದಾಗಬೇಕು. ಲಿಂಗ ಸಮಾನತೆಗೆ ಆದ್ಯತೆ ನೀಡಿ. ಅಲ್ಲದೆ, ಶೋಷಿತ ಮಹಿಳೆಯರು ಅವರ ಮೇಲೆ ನಡೆದ ಲೈಂಗಿಕ ಶೋಷಣೆಗಳನ್ನು ಹೇಳುವುದೇ ವಿರಳ. ಇಂತಹ ಸಂದರ್ಭದಲ್ಲಿ ಸಂತ್ರಸ್ಥ ಮಹಿಳೆಯರಿಗೆ ಬೆಂಬಲ ನೀಡಬೇಕೆಂದು ಸಂಘಟನಾಕಾರರಿಗೆ ಮನವರಿಕೆ ಮಾಡಿದರು.
ಅತ್ಯಾಚಾರಿಯನ್ನು ದೂಷಿಸಬೇಕೆ ಹೊರತು, ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನಲ್ಲ.
-ಇರೋಮ್ ಶರ್ಮಿಳಾ, ಸಾಮಾಜಿಕ ಹೋರಾಟಗಾರ್ತಿ