ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿತ; ಕಾರ್ಮಿಕ ಮೃತ್ಯು

Update: 2018-11-10 16:10 GMT

ಬೆಂಗಳೂರು, ನ. 10: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡವೂಂದು ಹಠಾತ್ತನೆ ಕುಸಿದ ಘಟನೆ ನಗರದ ತ್ಯಾಗರಾಜನಗರದ ಸಾಯಿಬಾಬಾ ಟೆಂಪಲ್ ಬಳಿ ನಡೆದಿದ್ದು, ಕೂಲಿ ಕಾರ್ಮಿಕ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿ ಸಾವನಪ್ಪಿದ್ದಾನೆ.

ಮೃತನನ್ನು ಸುಹೇಲ್ ಎಂದು ಗುರುತಿಸಲಾಗಿದೆ. ಕಟ್ಟಡದ ಅವಶೇಷಗಳಡಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇನ್ನೂ ಇಬ್ಬರು ಸಿಲುಕಿರುವ ಸಾಧ್ಯತೆಗಳಿದ್ದು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಏಕಾಏಕಿ ಕಟ್ಟಡ ಕುಸಿದಿದ್ದು, ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದಾರೆ.

ಕಟ್ಟಡದ ಅವಶೇಷಗಳಡಿ ಸಿಲುಕಿರುವ ಕೂಲಿ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಕಟ್ಟಡ ಹಠಾತ್ತನೆ ಕುಸಿದಿದೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕಟ್ಟಡದ ಮಾಲಕ ಮತ್ತು ಕಟ್ಟಡ ನಿರ್ಮಾಣದ ಗುತ್ತಿಗೆದಾರನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ಬಗ್ಗೆ ತ್ಯಾಗರಾಜನಗರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News