ಕಾಂಗ್ರೆಸ್ ಪ್ರಣಾಳಿಕೆಗೆ 20 ಉಪ ಸಮಿತಿಗಳ ರಚನೆ: ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ.ರಾಜೀವ್‌ ಗೌಡ

Update: 2018-11-10 16:02 GMT

ಬೆಂಗಳೂರು, ನ.10: ಮುಂಬರುವ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅಧ್ಯಕ್ಷತೆಯಲ್ಲಿ 20 ಪ್ರಣಾಳಿಕೆ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಎಂ.ವಿ. ರಾಜೀವ್‌ ಗೌಡ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಶಿತರೂರ್, ಜೈರಾಮ್ ರಮೇಶ್, ಆನಂದ್‌ಶರ್ಮ, ಮನ್ಪ್ರೀತ್‌ ಬಾದಲ್, ಪ್ರೊ.ಬಾಲಚಂದ್ರ ಮುಂಗೇಕರ್, ಮೀನಾಕ್ಷಿ ನಟರಾಜನ್, ಕೆ.ರಾಜು ಹಾಗೂ ತನ್ನ ನೇತೃತ್ವದಲ್ಲಿ ಈ ಉಪ ಸಮಿತಿಗಳು ಕಾರ್ಯನಿರ್ವಹಿಸಲಿವೆ ಎಂದರು.

ಪ್ರಣಾಳಿಕೆ ಸಮಿತಿಯು ಕಳೆದ ಅಕ್ಟೋಬರ್ ತಿಂಗಳಿನಿಂದ ದೇಶಾದ್ಯಂತ ಸಂಚರಿಸಿ ಜನರ ಕುಂದು ಕೊರತೆಗಳು ಮತ್ತು ಸಲಹೆ ಸೂಚನೆಗಳನ್ನು ಸಂಗ್ರಹಿಸುತ್ತಿದೆ. ದೇಶಾದ್ಯಂತ ಸುಮಾರು 200 ಸಮಾಲೋಚನಾ ಸಭೆಗಳನ್ನು ನಡೆಸಲು ಉದ್ದೇಶಿಸಿದ್ದು, ಈವರೆಗೆ 44 ಸಭೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

ಪ್ರಣಾಳಿಕೆ ಉಪ ಸಮಿತಿಗಳ ವಿವರ: ಕೃಷಿ, ತೋಟಗಾರಿಕೆ, ಕಾರ್ಮಿಕರು, ಉದ್ಯಮ, ಆರ್ಥಿಕ ನೀತಿ, ತೆರಿಗೆ ನೀತಿ, ಎಂಎಸ್‌ಎಂಇ ನೀತಿ, ಜಿಎಸ್ಟಿ, ಉದ್ಯೋಗ, ಯುವಜನತೆ, ಕ್ರೀಡೆ, ಮಹಿಳೆಯರು, ಮಕ್ಕಳು, ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರು, ಧಾರ್ಮಿಕ ಸ್ವಾತಂತ್ರ, ವೈಯಕ್ತಿಕ ಕಾನೂನುಗಳು, ಮಾಜಿ ಸೈನಿಕರು, ಸ್ವಾತಂತ್ರ ಹೋರಾಟಗಾರರು, ಹಿರಿಯ ನಾಗರಿಕರು, ಅಸಂಘಟಿತ ವಲಯ, ಮೀನುಗಾರರು, ಸಾಮಾಜಿಕ ಭದ್ರತೆ.

ಶಿಕ್ಷಣ, ಶಿಕ್ಷಕರು, ಆರೋಗ್ಯ, ನೀರು, ನೈರ್ಮಲ್ಯ, ಆಹಾರ ಭದ್ರತೆ, ವಸತಿ, ನಗರೀಕರಣ, ಮೂಲಸೌಕರ್ಯ, ಕೇಂದ್ರ-ರಾಜ್ಯ ಸಂಬಂಧಗಳು, ರಾಷ್ಟ್ರೀಯ ಭದ್ರತೆ, ವಿದೇಶಿ ನೀತಿ, ಆಂತರಿಕ ಭದ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಕುರಿತು ಉಪ ಸಮಿತಿಗಳು ಸಮಾಲೋಚನಾ ಸಭೆಗಳನ್ನು ನಡೆಸಿ ಜನರ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಲಿವೆ ಎಂದು ಅವರು ವಿವರಣೆ ನೀಡಿದರು.

ಸಾರ್ವಜನಿಕರು ಯಾವುದೇ ಕ್ಷೇತ್ರದ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಸಲಹೆಗಳನ್ನು ನಮ್ಮ ಇಮೇಲ್ ವಿಳಾಸ ನಮ್ಮ ವಾಟ್ಸಪ್ ನಂಬರ್ 72920 88245 ಗೆ ಕಳುಹಿಸಬಹುದು. ಅಲ್ಲದೇ, ನಮ್ಮ ಚುನಾವಣಾ ಪ್ರಣಾಳಿಕೆಗೆ ಸಂಬಂಧಿಸಿದ ವೆಬ್‌ಸೈಟ್ manifesto@inc.in, manifesto.nic.in  ಗೆ ಭೇಟಿ ನೀಡಬಹುದಾಗಿದೆ ಎಂದು ರಾಜೀವ್‌ಗೌಡ ಹೇಳಿದರು.

‘ಜನ ಧ್ವನಿ-ನಿಮ್ಮ ಧ್ವನಿ-ಜನ್ ಆವಾಝ್’ ಮೂಲಕ, ಸಮಾಜದ ಎಲ್ಲ ವಿಭಾಗಗಳ ಜನರಿಂದ ಅನಿಸಿಕೆ, ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲು ಕಾಂಗ್ರೆಸ್ ಕಾರ್ಯಪ್ರವೃತ್ತವಾಗಿದೆ. ಯಾವುದೇ ರಾಜಕೀಯ ಪಕ್ಷ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಭದ್ರತಾ ವ್ಯವಸ್ಥೆ, ಅಖಂಡತೆಯನ್ನು ಎಚ್ಚರಿಕೆಯಿಂದ ಮತ್ತು ಸೂಕ್ಷ್ಮವಾಗಿ ಗ್ರಹಿಸಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ದೃಢವಾಗಿ ನಂಬಿದ್ದಾರೆ ಎಂದು ರಾಜೀವ್‌ ಗೌಡ ತಿಳಿಸಿದರು.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಜನರ ಧ್ವನಿಯನ್ನು ನಿರ್ಲಕ್ಷಿಸುವುದು ಮಾತ್ರವಲ್ಲದೆ, ಅವುಗಳನ್ನು ನಿಗ್ರಹಿಸುತ್ತಿದೆ. ಬಿಜೆಪಿಯು ಸೈದ್ಧಾಂತಿಕ ಪ್ರವೃತ್ತಿಗಳ ಮೂಲಕ ನಡೆಯುತ್ತಿರುವ ಜನ ವಿರೋಧಿ ನೀತಿಗಳನ್ನು ಪೋಷಿಸುತ್ತಿದೆ ಎಂದು ರಾಜೀವ್‌ ಗೌಡ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಸಂಶೋಧನಾ ವಿಭಾಗದ ರಾಜ್ಯ ಘಟಕದ ಸಂಭಾವ್ಯ ಅಧ್ಯಕ್ಷ ಮನ್ಸೂರ್‌ ಖಾನ್, ಕೆಪಿಸಿಸಿ ಮಾಧ್ಯಮ ವಿಭಾಗದ ಸಂಚಾಲಕ ನಟರಾಜ್‌ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News