×
Ad

ನ.12 ರಿಂದ ಅಂತರ ವಿ.ವಿ ಮಹಿಳೆಯರ ಕಬಡ್ಡಿ ಪಂದ್ಯಾವಳಿ

Update: 2018-11-10 21:56 IST

ಬೆಂಗಳೂರು, ನ. 10: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶನಾಲಯ ಪ್ರಸಕ್ತ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಪಂದ್ಯಾವಳಿಯನ್ನು ನ.12ರಿಂದ ಎರಡು ದಿನಗಳವರೆಗೆ ದೇವನಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಸುಂದರ್‌ರಾಜ್ ಅರಸ್ ಮಾತನಾಡಿ, ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ಹಾಗೂ ಆತಿಥೇಯ ಕರ್ನಾಟಕ ರಾಜ್ಯಗಳ 60 ವಿಶ್ವವಿದ್ಯಾಲಯ ತಂಡಗಳು ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.

ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಸಂಸ್ಥೆಯವರ ತಾಂತ್ರಿಕ ಮಾರ್ಗದರ್ಶನದೊಂದಿಗೆ, ಎಐಯು ನಿಯಮಗಳಂತೆ ಆಯೋಜಿಸಲಾಗಿದೆ. ಈ ಪಂದ್ಯಾವಳಿಯ ತೀರ್ಪುಗಾರರಾಗಿ ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಸಂಸ್ಥೆಯ ತೀರ್ಪುಗಾರರು ಕಾರ್ಯ ನಿರ್ವಹಿಸಲಿದ್ದಾರೆ.

ಪ್ರಥಮ ನಾಲ್ಕು ಸ್ಥಾನ ಗಳಿಸಿದ ತಂಡಗಳು ಶಿಮ್ಲಾದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿ.ವಿ ಪಂದ್ಯಾವಳಿಗೆ ಹಾಗೂ ಖೇಲೊ ಇಂಡಿಯಾ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಪ್ರಥಮ ನಾಲ್ಕು ಸ್ಥಾನ ಗಳಿಸಿದ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ವೈಯಕ್ತಿಕ ನೆನಪಿನ ಕಾಣಿಕೆಯನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಪಂದ್ಯವನ್ನು ಉದ್ಘಾಟಿಸಲಿದ್ದು, ಲೋಕಸಭಾ ಸದಸ್ಯ ಡಾ.ಎಂ.ವೀರಪ್ಪಮೊಯ್ಲಿ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ದೇವನಹಳ್ಳಿಯ ಶಾಸಕ ಡಾ.ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News