ಕನ್ನಡಕ್ಕೆ ಕುತ್ತು ತರುವ ಭಾಷಾ ಕೋಮುವಾದ

Update: 2018-11-10 17:53 GMT

ಮಾಲಿಕೆ -3

ಜಗತ್ತಿನಲ್ಲಿ ಬೇರೆ ಭಾಷೆಗಳ ಪ್ರಭಾವಕ್ಕೆ ಒಳಗಾಗದ ಒಂದೂ ಭಾಷೆಯಿಲ್ಲ. ಭಾಷೆ ಬೆಳೆಯುವುದೇ ಹಲವು ಭಾಷೆಗಳ ಕೊಟ್ಟು ತೆಗೆದುಕೊಳ್ಳುವ ಸ್ನೇಹದ ಒಡನಾಟದಲ್ಲಿ. ಆದರೆ ತಾನು ಇತರ ಭಾಷೆಗಳ ಪ್ರಭಾವದಲ್ಲಿ ಪೂರ್ಣ ಕಳೆದುಹೋಗಬಹುದು ಎನ್ನುವ ಆತಂಕ ರಾಜಕೀಯ ವಾಗಿಯೋ, ಇನ್ನಿತರ ಕಾರಣ ಗಳಿಗಾಗಿಯೋ ತನ್ನನ್ನು ಹಿರಿಯಣ್ಣನೆಂದು ಭಾವಿಸುವ ಭಾಷೆಗಳಿಗಿಲ್ಲ. ಯಾಕೆಂದರೆ ಇವು ಇನ್ನೊಂದು ಭಾಷೆಗೆ ಕೊಡುವ ಭಾಷೆಗಳೇ ವಿನಃ ಆ ಭಾಷೆಗಳಿಂದ ಸ್ವೀಕರಿಸುವ ಭಾಷೆಗಳಲ್ಲ. ಕಳೆದುಹೋಗುವ ಈ ಆತಂಕ ಸಾಮಾನ್ಯವಾಗಿ ಸದಾ ಕಾಡುತ್ತಲೇ ಇರುವುದು ಈ ನೆಲದಲ್ಲಿಯೇ ಚಿಗುರೊಡೆ ಯುವ ದೇಶಿ ಭಾಷೆಗಳನ್ನು. ಈ ಹಿನ್ನೆಲೆಯಲ್ಲಿ ಎಲ್ಲ ಭಾಷೆಗಳಲ್ಲಿರುವಂತೆ ಹೇಗಾದರೂ ತನ್ನನ್ನು ಉಳಿಸಿಕೊಳ್ಳಬೇಕು ಎನ್ನುವ ಕಾಳಜಿ ಮತ್ತು ಹಠದ ನೆಲೆಯೊಂದು ಕನ್ನಡಕ್ಕೂ ಇದೆ. ಆದರೆ ಹೀಗೆ ಉಳಿಸಿಕೊಳ್ಳುವ ಹಂಬಲದ ಹಿಂದಿನ ಕಾರಣಗಳು ಮತ್ತು ‘ಉಳಿಸಿಕೊಳ್ಳಬಯಸುವ ಕನ್ನಡದ ಸ್ವರೂಪ’ ಹಲವು ಬಗೆಯಲ್ಲಿವೆ. ಇನ್ನೊಂದು ಭಾಷೆಯ ಒಂದೂ ಶಬ್ದವನ್ನು ಬಳಸದೆ ಅಚ್ಚಕನ್ನಡವನ್ನು ಉಳಿಸಿಕೊಳ್ಳುವುದು ಈ ಸ್ವರೂಪಗಳಲ್ಲಿ ಒಂದು. ತೀನಂಶ್ರೀಮತ್ತು ಗೆಳೆಯರು ಈ ರೀತಿ ಅಚ್ಚಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯನ್ನಿಟ್ಟು ಅದರಲ್ಲಿ ವಿಫಲರಾದ ಮೋಜಿನ ಪ್ರಸಂಗವಿದೆ. ಇಲ್ಲಿ ಸಾಮಾನ್ಯವಾಗಿ ‘ಅಚ್ಚಕನ್ನಡ’ ಎಂದರೆ ‘ಇಂಗ್ಲಿಷ್’ ನಿಂದ ಹೊರತಾದ ಕನ್ನಡ ಎನ್ನುವ ಅಭಿಪ್ರಾಯವೇ ಇರುವುದು. ಸಂಸ್ಕೃತ ಕನ್ನಡಕ್ಕೆ ಹೊರೆಯಾಗುತ್ತಿದೆ ಎಂದು ಭಾವಿಸಿದ ಬಿ.ಎಂ.ಶ್ರೀ ಅವರು ಅಚ್ಚಕನ್ನಡದ ಬಳಕೆಯನ್ನು ಪ್ರತಿಪಾದಿಸಿ ದರು. ಇದೇ ಹಂಬಲ ಡಿ.ಎನ್. ಶಂಕರಭಟ್ಟರಿಗೆ ಸಂಸ್ಕೃತ ಪದಗಳಿಂದ ಮುಕ್ತವಾದ ‘ಹೊಸ ಬರಹ’ ರಚಿಸಲು ಪ್ರೇರೇಪಿಸಿದೆ. ಬೆಂಗಳೂರಿನಲ್ಲಿರುವ ತಮಿಳು, ತೆಲುಗಿನಂತಹ ನೆರೆಯ ಭಾಷಿಕರು ಕನ್ನಡ ಕಲಿಯುತ್ತಿಲ್ಲವೆಂದು ಕನ್ನಡಿಗರಲ್ಲಿ ಅಸಮಾಧಾನ ವ್ಯಕ್ತವಾಗುವುದಿದೆ. ಹಾಗೇ ನೋಡಿದರೆ ತಮ್ಮದನ್ನು ಮೂಲದಲ್ಲಿ ಉಳಿಸಿಕೊಳ್ಳುವ ಹಠದ ಈ ಮನೋಭಾವ ‘ಮೂಲಭೂತವಾದ’ ಎನ್ನುವ ವ್ಯಾಖ್ಯಾನಕ್ಕೆ ಹೊಂದುವಂತಹದು. ಆದರೆ, ಇಲ್ಲಿ ಒಂದು ತೊಡಕಿದೆ. ‘ಮೂಲಭೂತವಾದ ಎಂದರೆ ಮೂಲಕ್ಕೆ ಹಠ’ದಿಂದ ಜೋತು ಬೀಳುವುದು ಎನ್ನುವ ಸಾಮಾನ್ಯ ಅರ್ಥವಿದ್ದರೂ ಯಾವಾಗಲೂ ‘ಮೂಲಭೂತವಾದ’ ಎನ್ನುವುದನ್ನು ಬಳಸುವುದು ಮತೀಯ ಮೂಲಭೂತವಾದಕ್ಕೆ. ಮತೀಯ ‘ಮೂಲಭೂತವಾದ’ ಹೊರನೋಟದಲ್ಲಿ ತಮ್ಮ ಧರ್ಮದ ಪಾವಿತ್ರವನ್ನು ರಕ್ಷಿಸುವ ಏಕಮೇವ ಕಾರ್ಯದಲ್ಲಿರುವಂತೆ ತೋರ್ಪಡಿಸುತ್ತ, ಮರೆಯಲ್ಲಿ ಗಂಡುಕುಲ ಮತ್ತು ಮೇಲ್ವರ್ಗಗಳ ಹಿತಾಸಕ್ತಿ ಕಾಯುವ ಉದ್ದೇಶವನ್ನಿಟ್ಟುಕೊಂಡಿರುತ್ತದೆ. ಆದರೆ ಕನ್ನಡದ ಮೂಲರೂಪದಲ್ಲಿ ಮಾತನಾಡಲು ಹಂಬಲಿಸುವ ‘ಭಾಷಿಕ ಕಾಳಜಿ’ಗೆ ಇಂತಹ ಬಚ್ಚಿಡಲ್ಪಟ್ಟ ಉದ್ದೇಶಗಳಿಲ್ಲ. ಇಲ್ಲಿರುವುದು ಕನ್ನಡಭಾಷೆ ಉಳಿಸಿಕೊಳ್ಳುವ ಕಾಳಜಿಯಷ್ಟೇ. ಆದ್ದರಿಂದ ಇದನ್ನು ಭಾಷಿಕ ಮೂಲಭೂತವಾದ ಎಂದು ಕರೆಯುವ ಬದಲಿಗೆ ‘ಭಾಷಿಕ ಕಾಳಜಿ’ಎನ್ನಬಹುದಷ್ಟೇ. ‘‘ಭಾಷೆಯೊಂದನ್ನು ಸರ್ವಶ್ರೇಷ್ಠವೆಂದೂ, ಉಳಿದ ಭಾಷೆಗಳೆಲ್ಲ ಕನಿಷ್ಠ ಅಥವಾ ಅಧೀನವೆಂದೂ ಭಾವಿಸುವ, ಭಾಷೆ-ಭಾಷೆಗಳ ನಡುವೆ ದ್ವೇಷ ಬಿತ್ತಿ ಭಾಷಾ ಸಮಾನತೆಯ ಕಲ್ಪನೆಯನ್ನು ವಿರೋಧಿಸುವ, ಒಟ್ಟು ಪ್ರತಿಪಾದನೆಯನ್ನು ‘ಭಾಷಿಕ ಮೂಲಭೂತವಾದ’ ಎಂದು ಕರೆಯಬಹುದು’’ ಎಂದು ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯ ಪಡುತ್ತಾರೆ. ಬರಗೂರರು ಹೀಗೆ ಹೇಳುವಾಗ ಅವರ ಮನಸ್ಸಿನಲ್ಲಿ ತಮ್ಮನ್ನು ಸರ್ವಶ್ರೇಷ್ಠವೆಂದು ಬೀಗುವ ಸಂಸ್ಕೃತ ಮತ್ತು ಹಿಂದಿ ಭಾಷೆಗಳು ಇರಬಹುದೆಂದು ಅನ್ನಿಸುತ್ತದೆ. ಸಂಸ್ಕೃತವನ್ನಾಗಲಿ, ಹಿಂದಿಯನ್ನಾಗಲಿ ಭಾಷೆ ಗಳಾಗಿ ಯಾರೂ ವಿರೋಧಿಸಬೇಕಿಲ್ಲ. ಆದರೆ ಈ ಭಾಷೆಗಳನ್ನು ಸಾರ್ವಭೌಮ ಸ್ಥಾನಕ್ಕೆ ತರುವ ಪ್ರಜ್ಞಾಪೂರ್ವಕ ಪ್ರಯತ್ನದಲ್ಲಿ ಉಳಿದ ಭಾಷೆಗಳನ್ನು ‘ಸಾಮಂತ’ ಸ್ಥಾನದಲ್ಲೂ ಸ್ಥಾಪಿಸದೆ ಅಗಾಧ ಭಾಷಾ ಅಸಮಾನತೆಯನ್ನು ತೋರಿಸಿದ ಕೇಂದ್ರ ಸರಕಾರದ ಧೋರಣೆಯನ್ನು ಭಾಷಿಕ ಮೂಲಭೂತವಾದ ಎಂದು ಕರೆಯಬೇಕಾಗುತ್ತದೆ ಎಂದವರು ಎಚ್ಚರಿಸುತ್ತಾರೆ. ಭಾಷಿಕ ಮೂಲಭೂತವಾದದ ಒಂದು ಚಹರೆಯಷ್ಟೇ ಇದಾಗಿದ್ದು ಬರಗೂರು ಅವರನ್ನೂ ಒಳಗೊಂಡಂತೆ ಕನ್ನಡದ ಹಲವು ಚಿಂತಕರು ಈ ಕುರಿತು ಹಲವು ಆಯಾಮಗಳಲ್ಲಿ ಚಿಂತಿಸಿದ್ದಾರೆ.

ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ರಾಷ್ಟ್ರೀಯ ಹೋರಾಟಗಳು ನಡೆಯುತ್ತಿದ್ದ ಸಂದರ್ಭದಲ್ಲೇ ನಮ್ಮ ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ಎಚ್ಚರ ಮೂಡಿತು. ಇಡೀ ದೇಶದ ಸ್ವಾತಂತ್ರ ಸಂಸ್ಕೃತಿಗಳ ಬಗ್ಗೆ ಮಾತನಾಡುವ ಉಸಿರಲ್ಲೇ ನಮ್ಮ ನಮ್ಮ ಭಾಷೆ-ಸ್ಥಳೀಯ ಸಂಸ್ಕೃತಿಗಳ ಪರವಾದ ದನಿಗಳು ಜಾಗೃತವಾದವು. 19ನೆಯ ಶತಮಾನದ ವೇಳೆಗೆ ಇಂಡಿಯಾದ ಜನರು ಅನೇಕ ರೀತಿಯ ಪಾಶ್ಚಿಮಾತ್ಯ ವೌಲ್ಯ-ಚಿಂತನೆಗಳನ್ನು ಎರವಲು ಮಾಡಿಕೊಂಡಿದ್ದರು. ಅಂಥವುಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯೂ ಒಂದು. ರಾಷ್ಟ್ರೀಯತೆ ಎಂಬುದು ನಿರ್ದಿಷ್ಟ ಜನಾಂಗೀಯ ಗುಂಪುಗಳು, ಭಾಷಿಕರು ಕಂಡುಕೊಳ್ಳುವ ಸ್ವಪ್ರಜ್ಞೆಯ ಅರಿವೂ ಆಗಿರುತ್ತವೆ. ಈ ಅರಿವಿನ ಅಥವಾ ಪರಿಕಲ್ಪನೆಯ ಪರಿಧಿಗಳಲ್ಲಿ ಹುಟ್ಟಿಕೊಂಡದ್ದೇ ಏಕೀಕರಣ. ಆದರೆ ಏಕೀಕರಣದ ಪರಿಕಲ್ಪನೆಯು ಅನನ್ಯತೆಗೆ ಬಂದದ್ದು ಆಯಾ ಪ್ರಾಂತೀಯ ಮಟ್ಟಗಳಲ್ಲಿಯೇ. ಅಂಥವುಗಳಲ್ಲಿ ಪ್ರಾಂತ್ಯಾಭಿಮಾನ, ಸ್ವಾಭಿಮಾನ, ಸ್ವಭಾಷೆ, ಸ್ವಜನ, ಸ್ವಸಂಸ್ಕೃತಿ, ಸ್ವಪರಿಕಲ್ಪನೆಗಳು ಮುಖ್ಯವಾದವು. ಸಹಜವಾಗಿಯೇ ರಾಷ್ಟ್ರೀಯತೆಯ ಒಳ್ಳೆಯ ಮತ್ತು ಕೆಟ್ಟ ಪ್ರಭಾವಗಳಿಂದ ಏಕೀಕರಣ ಹೊರಗುಳಿಯಲಿಲ್ಲ ಎಂದು ಕರ್ನಾಟಕ ಏಕೀಕರಣ ಚಳವಳಿ ಕುರಿತು ಅಧ್ಯಯನ ಮಾಡಿರುವ ಸಿ.ಆರ್. ಗೋವಿಂದರಾಜು ಅವರು ಅಭಿಪ್ರಾಯ ಪಡುತ್ತಾರೆ. ಈ ಸಂದರ್ಭದ ಸಾಹಿತ್ಯ ನೋಡಿದರೆ ನಮಗೆ ಕರ್ನಾಟಕ ಏಕೀಕರಣವನ್ನು ಪ್ರಭಾವಿಸಿದ ವೌಲ್ಯಗಳು ಕಾಣುತ್ತವೆ. ಕರ್ನಾಟಕ ಸಂಸ್ಕೃತಿಯ ಬಗ್ಗೆ ಬರೆದ ಆಲೂರು, ಬೆಟಗೇರಿ, ಸಿಂಪಿ, ಮಾಸ್ತಿಯವರ ಬರಹಗಳಲ್ಲಿ ವೈಭವೀಕರಣದ ಪುನರುತ್ಥಾನವಾದೀ ನಿಲುವುಗಳನ್ನು ಗುರುತಿಸುವ ರಹಮತ್ ತರೀಕೆರೆ ಅವರು ಇವರೆಲ್ಲರಿಗೆ ಬಹುಶಃ ಈ ನಿಲುವು ತಾಳುವುದು ಕರ್ನಾಟಕದ ಏಕೀಕರಣಕ್ಕಾಗಿಯೋ ವಸಾಹತುಶಾಹಿಯ ವಿರೋಧಕ್ಕಾಗಿಯೊ ಅಥವಾ ಕಳೆದುಹೋದ ತಮ್ಮ ಸಾಂಸ್ಕೃತಿಕ ಮುಖಚಹರೆಯ ಹುಡುಕಾಟಕ್ಕಾಗಿಯೋ, ಐತಿಹಾಸಿಕ ಅವಶ್ಯಕತೆಯಾಗಿತ್ತು ಎಂದು ವಿಶ್ಲೇಷಿಸುತ್ತಾರೆ.

ಆಗಿನ ಸ್ವಾತಂತ್ರ ಚಳವಳಿಯ ಹಲವು ನೇತಾರರು ರಾಜ ಮಹಾರಾಜರ ಆಳ್ವಿಕೆಗಳನ್ನು ಕೀರ್ತಿಸುತ್ತಾ, ಭಗವದ್ಗೀತೆಯ ಮುಖಾಂತರ ದೇಶಪ್ರೇಮವನ್ನು ಪ್ರತಿಪಾದಿಸುತ್ತಿದ್ದಾಗ ಮತ್ತೊಂದು ಕಡೆ ಬೆಳೆಯುತ್ತಿದ್ದ ಕರ್ನಾಟಕ ಏಕೀಕರಣದ ಚಳವಳಿ ವಿಜಯನಗರವನ್ನು, ತಾಯಿ ಭುವನೇಶ್ವರಿಯನ್ನು ಚಳವಳಿಯ ಪ್ರೇರಣಾ ಮಾದರಿಗಳಾಗಿ ಮುಂದಿಡುತ್ತಿದ್ದಾಗ ಕುವೆಂಪು ಅವರಲ್ಲಿ ಗಟ್ಟಿಗೊಂಡಿದ್ದ ಸ್ವವಿಮರ್ಶಾಪ್ರಜ್ಞೆಯಿಂದ ಮೂಡಿದ ‘ನಮ್ಮವರೇ ಹದ ಹಾಕಿ ತಿವಿದರದು ಹೂವೆ’ ಎಂಬ ಎಚ್ಚರ ಅತ್ಯಂತ ಪ್ರಸ್ತುತವಾದುದಾಗಿತ್ತು. ಏಕೀಕರಣ ಚಳವಳಿಯನ್ನು ಸರಿದಿಕ್ಕಿನಲ್ಲಿ ಕೊಂಡೊಯ್ಯಬಹುದಾಗಿದ್ದ ಕುವೆಂಪು ಅವರ ಈ ಸ್ವವಿಮರ್ಶಾಪ್ರಜ್ಞೆ ಅಂದಿನ ನೇತಾರರಲ್ಲಾಗಲೀ, ಲೇಖಕರಲ್ಲಾಗಲೀ ಕಾಣುವುದಿಲ್ಲ ಎಂದು ಬಂಜಗೆರೆ ಜಯಪ್ರಕಾಶ್ ಅವರು ಅಭಿಪ್ರಾಯಪಡುತ್ತಾರೆ.

ವೈಭವೀಕರಣದ ಪುನರುತ್ಥಾನವಾದೀ ನಿಲುವುಗಳು ವಾಸ್ತವದಲ್ಲಿ ಆಚರಣೆಗೆ ಬಂದಿದ್ದು ವಿವಿಧ ಉತ್ಸವ ಮತ್ತು ಕಾರ್ಯಕ್ರಮಗಳ ಮೂಲಕ. 1936ರ ಡಿಸೆಂಬರ್ 25ರಿಂದ 27ರವರೆಗೆ ಮೂರು ದಿನಗಳು ಹಂಪಿಯಲ್ಲಿ ವಿಜಯನಗರ ಸ್ಥಾಪನೆಯ ಆರು ನೂರು ವರ್ಷಗಳ ನೆನಪಿಗಾಗಿ ಷಟ್ ಶತಮಾನೋತ್ಸವವನ್ನು ಆಚರಿಸಲಾಯಿತು. ಮುಂದೆ ನಡೆದ ನಿಜಗುಣ ಶಿವಯೋಗಿ, ಕುಮಾರವ್ಯಾಸ, ಪಂಪ, ವಿದ್ಯಾರಣ್ಯ, ಪುರಂದರ, ಬಸವೇಶ್ವರ ಇತ್ಯಾದಿ ಉತ್ಸವಗಳಿಗೆ ವಿಜಯನಗರ ಸ್ಮಾರಕೋತ್ಸವವೇ ಬುನಾದಿ. ಆ ಮೂಲಕ ಕನ್ನಡಿಗರಲ್ಲೂ ಸಾಹಿತ್ಯಕ, ಚಾರಿತ್ರಿಕ ಹಾಗೂ ಧಾರ್ಮಿಕ ಸಂಕೇತಗಳನ್ನು ಬಳಸುವುದು ವಾಡಿಕೆಗೆ ಬಂದಿತು. ಇದು ಮಹಾರಾಷ್ಟ್ರದ ತಿಲಕ್ ಪ್ರಭಾವಿತ ವ್ಯಕ್ತಿಗಳಿಂದಾದ ಪರಂಪರೆ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಈ ಉತ್ಸವಗಳು ಮತ್ತು ಕಾರ್ಯಕ್ರಮಗಳು ನಿರ್ದಿಷ್ಟವಾದವುಗಳನ್ನು ಮುನ್ನೆಲೆಗೆ ತರುವ ಮತ್ತು ಕೆಲವನ್ನು ತೆರೆಯ ಹಿಂದೆ ಸರಿಸುವ ಕೆಲಸವನ್ನು ಮಾಡಿದವು. ಇದರ ಫಲವಾಗಿ ಕರ್ನಾಟಕದ ಪ್ರಸಿದ್ಧ ರಾಜವಂಶಗಳು, ಅವರ ವಿಜಯಗಳು, ಅದರಲ್ಲೂ ಮುಖ್ಯವಾಗಿ ವಿಜಯನಗರ ಸಾಮ್ರಾಜ್ಯದ ‘ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರಿದ’ ವೈಭವ, ಪಂಪ-ರನ್ನ-ಕುಮಾರವ್ಯಾಸರು, ಕನ್ನಡಿಗರ ಉದಾರತೆ-ರಸಿಕತೆ-ಸಹಿಷ್ಣುತೆ, ಇವನ್ನು ಬಣ್ಣಿಸುವ ಶಾಸನಗಳು-ಹೀಗೆ ಕರ್ನಾಟಕದ ಸಂಸ್ಕೃತಿಯ ಚಿತ್ರಕ್ಕೆ ಒಂದು ರಮ್ಯದ್ಭುತವಾದ ಚೌಕಟ್ಟು ತಯಾರಾಗಿಬಿಟ್ಟವು. ಆದರೆ ಕರ್ನಾಟಕ ಸಂಸ್ಕೃತಿ ಎಂದ ತಕ್ಷಣ ಮೂಡುವ ಈ ಕಣ್ಕೋರೈಸುವ ಚಿತ್ರದ ಜತೆಗೆ ತಕ್ಷಣ ಮೂಡದ ನಮ್ಮ ಸಣ್ಣತನ, ಸೋಲು, ಅಸಹಿಷ್ಣುತೆ, ಬಡತನಗಳ ಹಲವಾರು ಮಸುಕು ಚಿತ್ರಗಳು ತೆರೆಯ ಹಿಂದೆ ಸರಿದವು.

ಪರಂಪರೆಯೆಂದರೆ ಹಳೆಯದರ ವೈಭವೀಕರಣವಲ್ಲ. ನಿರ್ದಿಷ್ಟ ನೆಲೆಯೊಂದರ ಚಲನಶೀಲ ನಿರಂತರತೆಯೇ ಪರಂಪರೆ. ಪರಂಪರೆ ನಿಂತ ನೆಲೆಯಲ್ಲ; ವಿಕಾಸದ ಪ್ರಕ್ರಿಯೆ. ನಮ್ಮಲ್ಲಿ ಒಂದೇ ಮತವಿಲ್ಲ; ಒಂದೇ ಧರ್ಮವಿಲ್ಲ, ಒಂದೇ ಜೀವನವಿಧಾನವಿಲ್ಲ; ಒಂದೇ ಮಾದರಿಯ ಚರಿತ್ರೆ ಪುರಾಣಗಳಿಲ್ಲ. ನಗರದ ಜನರಿದ್ದಾರೆ; ಗ್ರಾಮೀಣ ಜನರಿದ್ದಾರೆ; ಗ್ರಾಮ-ನಗರಗಳನ್ನು ನೋಡದ ಬುಡಕಟ್ಟು ಜನರೂ ಇದ್ದಾರೆ. ಇವರೆಲ್ಲರನ್ನು ಒಳಗೊಂಡದ್ದು ಕರ್ನಾಟಕ ಎಂದು ಬರಗೂರು ರಾಮಚಂದ್ರಪ್ಪ ಅವರು ವ್ಯಾಖ್ಯಾನಿಸುತ್ತಾರೆ. ಆದರೆ ವೈಭವೀಕರಣದ ಪುನರುತ್ಥಾನವಾದದಲ್ಲಿ ಇವನ್ನೆಲ್ಲ ಮರೆಯಲಾಯಿತು. ಗತದ ವೈಭವ ಪ್ರತಿಷ್ಠಾಪಿಸಬೇಕೆಂದರೆ ವರ್ತಮಾನದ ಎಲ್ಲವನ್ನು ತಿರಸ್ಕರಿಸಬೇಕು. ಹಾಗಾಗಲು ಹುಸಿ ಶತ್ರುವನ್ನು ಸೃಷ್ಟಿಸಿ ಅಥವಾ ಕಲ್ಪಿಸಿ ಸಮಾಜವನ್ನು ಅಧೀರತೆ ಕಡೆಗೆ ಒಯ್ಯಬೇಕು ಎಂಬುದೇ ಮತೀಯವಾದಿ ಸಂಸ್ಕೃತಿ ಚಿಂತನೆಯ ಮುಖ್ಯ ಗಮನ. ಸಮಾಜಗಳಲ್ಲಿರುವ ಈ ತಲ್ಲಣವನ್ನು ನಿತ್ಯ ಕಾಪಾಡಿಕೊಂಡು ಮಾರುಕಟ್ಟೆಯ ಮೇಲೆ ಯಜಮಾನಿಕೆ ಸ್ಥಾಪಿಸುವುದೇ ವಸಾಹತುಶಾಹಿ ಆಸಕ್ತಿ. ಹಾಗಾಗಿ ಈ ಎರಡು ಚಿಂತನೆಗಳು ಏಕೀಭವಿಸಿ ಮೂಲಭೂತವಾದಿ ಚಿಂತನೆಗಳು ರೂಪುಗೊಳ್ಳುತ್ತಿರುತ್ತವೆ. ಈ ಚಿಂತನೆಯ ಮೂಲಾಧಾರವೇ ಶತ್ರು ಕಲ್ಪನೆಯನ್ನು ದಟ್ಟವಾಗಿಸುತ್ತಾ ಹೋಗುವುದು.

ಮೂಲಭೂತವಾದಿ ನೆಲೆಯ ಚಿಂತನೆಗಳು ಸೃಷ್ಟಿಸಿದ ಸಮಸ್ಯೆಗಳು ಹಲವು ಬಗೆ. ಅವು ಸಾಂಸ್ಕೃತಿಕವಾಗಿ ಯಜಮಾನವಾಗಿದ್ದ ಲಿಖಿತ ದಾಖಲೆಗಳನ್ನು ನೆಚ್ಚಿ ಸೃಷ್ಟಿಯಾದ ವೈದಿಕ ಸಂಸ್ಕೃತಿಯನ್ನೇ ಭಾರತೀಯ ಸಂಸ್ಕೃತಿ ಎಂದು ನಂಬಿದ್ದರಿಂದಾಗಿ ಆದ ಅನ್ಯಾಯವೆಂದರೆ ವೈವಿಧ್ಯದ ಕೊಂಬೆಗಳನ್ನು ಸವರಿ ಎದ್ದು ಕಾಣುವ ಕಾಂಡವೊಂದನ್ನೇ ಇಡೀ ಮರವೆಂದು ಪ್ರದರ್ಶಿಸಿದ್ದು. ಹೀಗಾಗಿ ನಮ್ಮ ಸುತ್ತ ಬದುಕುತ್ತಿರುವ ಸಿದ್ದಿಯರು, ಕುಣುಬಿಯರು, ಗೊಂಡರು, ಕೊರಗರು, ಮನ್ಸರು, ಮೇರರು, ಯರವರು, ಸೋಲಿಗರು, ಹಸಲರು, ತೊದವರು, ಜೇನುಕುರುಬರು- ಹೀಗೆ ಎಷ್ಟೋ ಬುಡಕಟ್ಟುಗಳ ಬದುಕು ಕರ್ನಾಟಕ ಸಂಸ್ಕೃತಿಯ ಚರ್ಚೆಯಲ್ಲಿ ಸೇರದೇ ಹೋಯಿತು. ರಹಮತ್ ತರೀಕೆರೆ ಅವರು ಗುರುತಿಸುವಂತೆ ಕರ್ನಾಟಕ ಸಂಸ್ಕೃತಿಯ ವೈಭವೀಕರಣದ ನಿಲುವಿನ ಇನ್ನೊಂದು ಬಾಲಿಶ ಗುಣವೆಂದರೆ, ಇತಿಹಾಸದಲ್ಲಿ ದುಡಿವ ವರ್ಗದ ಮತ್ತು ಸ್ತ್ರೀಯರ ವಿರೋಧಿಯಾಗಿದ್ದ ಕೀಳ್ಗುಂಟೆ, ವೇಳೆವಾಳಿ, ಜೋಳದ ಪಾಳಿ ಮತ್ತು ಸತಿಹೋಗುವ ಕರಾಳ ಪದ್ಧತಿಗಳನ್ನು ಕನ್ನಡಿಗರ ತ್ಯಾಗದ ಸಂಕೇತಗಳಾಗಿ ಕೊಂಡಾಡುವುದು. ಯಾವುದೇ ಸಾಮ್ರಾಜ್ಯ ಚಕ್ರಾಧಿಪತ್ಯ ಕಟ್ಟಬೇಕಾದರೆ ಏಕರೂಪದ ಧರ್ಮ ಇರಬೇಕು. ಏಕರೂಪದ ಆಚರಣಾ ವ್ಯವಸ್ಥೆ ಇರಬೇಕು. ಈ ಕಾರಣದಿಂದಲೇ ಎಲ್ಲ ಸಾಮ್ರಾಜ್ಯಗಳೂ, ಅವು ಯಾವುದೇ ಸಿದ್ಧಾಂತಕ್ಕೆ ಸೇರಿದವುಗಳಾಗಿರಲಿ, ಬಲಾತ್ಕಾರವಾಗಿಯಾದರೂ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಏಕರೂಪ ತರಲು ಹವಣಿಸುತ್ತವೆ. ಭಿನ್ನರೂಪಗಳ ನಿರಾಕರಣೆ ಸಾಮಾಜಿಕ ಸ್ಥಿರತೆಯ ರೂಪ ತಾಳುತ್ತದೆ. ಬ್ರಿಟಿಷರ ಧಾರ್ಮಿಕ ಮತ್ತು ಸಾಂಸ್ಕೃತಿಕ ನೀತಿಯ ಗುರಿ ಇದ್ದದ್ದೇ ಈ ರೀತಿಯ ಏಕರೂಪತೆ ನಿರ್ಮಿಸುವ ಕಡೆಗೆ. ಬಹುರೂಪತೆಯನ್ನು ನಿರಾಕರಿಸುವ ಈಗಿನ ರಾಜಕೀಯ ಹಠದ ಉಗಮವಿರುವುದು ಬಹುಶಃ ಇಲ್ಲಿಯೇ ಎಂದು ಡಿ.ಆರ್. ನಾಗರಾಜ್ ಅವರು ವಿಶ್ಲೇಷಿಸುತ್ತಾರೆ.

ಪ್ರತಿಯೊಂದು ಭಾಷಿಕ ವಲಯದಲ್ಲೂ ಅಲ್ಲಿನ ಪ್ರಬಲ ಸಾಂಸ್ಥಿಕ ಧರ್ಮ ಭಾಷೆಯನ್ನು ತನ್ನ ಹಿತಾಸಕ್ತಿಗೆ ಬಳಸಿಕೊಳ್ಳಲು ಹವಣಿಸುತ್ತಿರುತ್ತದೆ. ಪಾಕಿಸ್ತಾನದಲ್ಲಿ ಇಸ್ಲಾಂ ಮೂಲಭೂತವಾದಿಗಳು ಉರ್ದುವನ್ನು, ಭಾರತದಲ್ಲಿ ಕನ್ನಡದಂತಹ ದೇಶಿ ಭಾಷೆಗಳನ್ನು ಹಿಂದುತ್ವದ ಮೂಲಭೂತವಾದಿಗಳು, ಉರ್ದುವನ್ನು ಇಸ್ಲಾಮಿನ ಮೂಲಭೂತವಾದಿಗಳು ಹೀಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತವೆ. ಮೂಲಭೂತವಾದಿ ನೆಲೆಯ ಕನ್ನಡ ಅಸ್ಮಿತೆಯ ಚಿಂತನೆಯ ಬೇರುಗಳಿರುವುದು ಇಲ್ಲಿಯೇ. ಸಾರಾಂಶದಲ್ಲಿ ಕನ್ನಡ ಭಾಷಿಕ ಮೂಲಭೂತವಾದದ ಮುಸುಕಿನಲ್ಲಿರುವುದು ಹಿಂದುತ್ವದ ಮೂಲಭೂತವಾದ. ಇದುವೇ ಕನ್ನಡ ಅಸ್ಮಿತೆಯ ಮೂಲಭೂತವಾದಿ ನೆಲೆಯ ಚಿಂತನಾಧಾರೆ.

ವಿಜಯನಗರ ಸಾಮ್ರಾಜ್ಯದ ವೈಭವೀಕರಣ, ಕನ್ನಡದ ರಾಜರ ಪರಾಕ್ರಮ, ಕನ್ನಡ ಸೈನಿಕರ, ಜನರ ಶೂರತನ, ಮುಸಲ್ಮಾನ ವಿರೋಧ, ಸಂಸ್ಕೃತಪರ ನಿಲುವು, ಕನ್ನಡಕ್ಕೆ ಹಿಂದೂ ಮೇಲ್ವರ್ಗಗಳ ಸಂಸ್ಕೃತಿಯ ಕೊಡುಗೆಯ ಪರಿಗಣನೆ; ಹಿಂದೂ ಕೆಳವರ್ಗಗಳು ಮತ್ತು ಇತರ ಧರ್ಮಗಳ ಸಂಸ್ಕೃತಿಯ ಕೊಡುಗೆಯ ಅವಗಣನೆ, ಇಂಗ್ಲಿಷ್-ಹಿಂದಿಯ ಬಗ್ಗೆ ಮೇಲುಮಟ್ಟದ ವಿರೋಧ; ತಮಿಳು/ತೆಲುಗಿನಂತಹ ನೆರೆಯ ಭಾಷೆಗಳ ಕಡುವಿರೋಧ, ಸಂಸ್ಕೃತಿಯ ರೂಪಕಾತ್ಮಕ ಸ್ವೀಕಾರ; ಆಶಯದ ಬಗ್ಗೆ ವೌನ, ಕನ್ನಡಕವಿ, ಸಾಹಿತಿಗಳ ಸ್ತುತಿ; ಅವರ ಸಾಹಿತ್ಯದ ಜೀವಪರ ವೌಲ್ಯಗಳ ಬಗ್ಗೆ ವೌನ - ಇವು ಮೂಲಭೂತವಾದಿ ನೆಲೆಯ ಕನ್ನಡ ಅಸ್ಮಿತೆಯ ಚಿಂತನಾಧಾರೆಯ ಮುಖ್ಯ ಚಹರೆಗಳಾಗಿವೆ. ಬಹುತ್ವದ ನೆಲೆಯ ಭಾಷಿಕ ಅಸ್ಮಿತೆಗೂ ಮೂಲಭೂತವಾದಿ ನೆಲೆಯ ಭಾಷಿಕ ಅಸ್ಮಿತೆಗೂ ಸದಾ ಸಂಘರ್ಷದ ಸಂಬಂಧ. ಭಾಷಿಕ ಮೂಲಭೂತವಾದದ ಮುಸುಕಿನಲ್ಲಿರುವ ಹಿಂದುತ್ವದ ಮೂಲಭೂತವಾದವನ್ನು ಕನ್ನಡವನ್ನೂ ಒಳಗೊಂಡಂತೆ ದೇಶಿ ಭಾಷೆಗಳು ಅನುಮೋದಿಸಿಲ್ಲ. ‘ಕನ್ನಡ ಸಾಹಿತ್ಯದ ಪ್ರಮುಖ ಕವಿಗಳು ಧರ್ಮವನ್ನು ವಸ್ತುವಾಗಿ ಸ್ವೀಕರಿಸಿ ನಿರ್ವಹಿಸಿದ ರೀತಿ ಆಸಕ್ತಿದಾಯಕವಾಗಿದೆ. ಧರ್ಮವನ್ನು ಒಂದು ಸಂಸ್ಥೆಯಾಗಿ, ಶಾಸ್ತ್ರವಾಗಿ ಸ್ವೀಕರಿಸುವ ಕ್ರಮಕ್ಕೂ ಧಾರ್ಮಿಕವಾಗಿಸುವ ಸೃಜನಶೀಲ ಕ್ರಿಯೆಗೂ ವ್ಯತ್ಯಾಸವಿದೆ... ಸಾಂಸ್ಥಿಕ ಧರ್ಮ ಮತ್ತು ಧಾರ್ಮಿಕತೆಗಳಲ್ಲಿ ನಮ್ಮ ಕವಿಗಳ ಆಯ್ಕೆ ಧಾರ್ಮಿಕತೆಯೇ ಆಗಿತ್ತು. ಆದ್ದರಿಂದಲೇ ಪಂಪ, ರನ್ನ, ರತ್ನಾಕರವರ್ಣಿ ಇತ್ಯಾದಿ ಕನ್ನಡದ ಪ್ರಮುಖ ಜೈನ ಕವಿಗಳು ಜೈನಧರ್ಮವನ್ನು ಶಾಸ್ತ್ರವಾಗಿ ಸ್ವೀಕರಿಸದೆ ಧಾರ್ಮಿಕರಾದರು. ಕುಮಾರವ್ಯಾಸ ವೈದಿಕ ಧರ್ಮ ಪ್ರಸಾರದ ಕವಿಯಾಗದೆ ಮಹಾಭಾರತದ ವಸ್ತು ವ್ಯಾಪ್ತಿಯಲ್ಲಿ ಧರ್ಮ ಸೂಕ್ಷ್ಮಗಳ ಜಿಜ್ಞಾಸೆಗೆ ಕಾರಣನಾದ. ವಚನಕಾರರು, ದಾಸರು ಜಡ ಧರ್ಮಗಳ ಶಾಸ್ತ್ರ ಸಂಕೋಲೆಗಳನ್ನು ಮೀರಿದ ಮನುಷ್ಯರಾದರು’ ಎಂದು ಬರಗೂರರು ನಮ್ಮ ಕವಿಗಳು ಧರ್ಮಕ್ಕೆ ತಂದ ಜೀವಂತಿಕೆಯನ್ನು ವಿವರಿಸಿದರೆ ಕೆ.ವಿ. ಸುಬ್ಬಣ್ಣ ಅವರು ಕವಿರಾಜಮಾರ್ಗದ ಕಾರಣಕರ್ತೃಗಳಾದ ನೃಪತುಂಗ - ಶ್ರೀವಿಜಯರು ಭಿನ್ನವಾದ ವೈದಿಕ - ಜೈನಧರ್ಮಗಳಿಗೆ ಸೇರಿದವರು; ಈ ಇಬ್ಬರೂ ಧರ್ಮದಲ್ಲಿ ಪರಮನಿಷ್ಠೆಯಿದ್ದವರು. ಹಾಗಾದರೂ ಇಡೀ ಗ್ರಂಥದ ಯಾವುದೇ ಮೂಲೆಯಲ್ಲಿಯೂ ಇವರ ಧರ್ಮಭಿನ್ನತೆಯ ಸೂಚನೆ ಕೂಡ ಕಾಣಿಸಿಕೊಳ್ಳುವುದಿಲ್ಲ ಎಂದು ಕನ್ನಡದ ಪ್ರಾಚೀನ ಕವಿಗಳ ಜಾತ್ಯತೀತ ನಿಲುವಿನತ್ತ ನಮ್ಮ ಗಮನ ಸೆಳೆಯುತ್ತಾರೆ. ಇದೇ ರೀತಿ ಭಾರತೀಯ ಸಂದರ್ಭದಲ್ಲಿ ಇಸ್ಲಾಂ ಮೂಲಭೂತವಾದಕ್ಕೆ ಉರ್ದು ಮಣಿಯಲಿಲ್ಲ. ಇಸ್ಲಾಂ ತಾನು ಹೋದೆಡೆಯಲ್ಲೆಲ್ಲ ಮೂಲ, ಶುದ್ಧ ರೂಪದಲ್ಲಿ ಇಡಬೇಕು ಎಂಬ ಪರಿಷ್ಕರಣವಾದಿಗಳನ್ನು ಲೆಕ್ಕಿಸದೆ, ಸಂಗಾತಿ ಸಂಸ್ಕೃತಿಗಳೊಡನೆ ಕೊಡುಕೊಳ್ಳು ನಡೆಸಿತು. ಇದನ್ನು ಸಾಧ್ಯಗೊಳಿಸಿದವರು ದುಡಿಮೆಗಾರರು, ಕವಿಗಳು, ಚಿತ್ರಕಾರರು, ತತ್ವಜ್ಞಾನಿಗಳು, ಸೂಫಿಸಂತರು, ಸಂಗೀತಗಾರರು. ಇಂಡಿಯಾದ ಬಹುಸಂಸ್ಕೃತಿ ಬಹುಭಾಷೆ ಬಹುಧರ್ಮಗಳು ಸೇರಿ ನಿರ್ಮಿಸಿರುವ ಕನ್ನಡಿಗಳೇ, ಕವಿ ಇಕ್ಬಾಲ್ ಅವರು ರಾಮನ ಕುರಿತು ಕವಿತೆ ಬರೆಯಲು, ಸೂಫಿಪಂಥ ಬೆಳೆಯಲು, ಹಿಂದೂಸ್ಥಾನಿ ಸಂಗೀತ ಹುಟ್ಟಲು ಕಾರಣವಾದದ್ದನ್ನು ರಹಮತ್ ತರೀಕೆರೆ ಅವರು ನೆನಪಿಸುತ್ತಾರೆ.

(ಮುಂದಿನ ವಾರಕ್ಕೆ.....)

Writer - ಡಾ.ಸರ್ಜಾಶಂಕರ ಹರಳಿಮಠ

contributor

Editor - ಡಾ.ಸರ್ಜಾಶಂಕರ ಹರಳಿಮಠ

contributor

Similar News