ದಕ್ಷಿಣ ಭಾರತದಿಂದ ಉತ್ತರ ಭಾರತದತ್ತ ಪವಾಡ ರಹಸ್ಯ ಬಯಲು...

Update: 2018-11-11 02:43 GMT

ಭಾಗ 61

ಆರಂಭದಲ್ಲಿ ನಮ್ಮ ಪವಾಡ ಬಯಲು ಕಾರ್ಯಕ್ರಮಗಳು ಸಣ್ಣ ಮಟ್ಟಿನದ್ದಾಗಿತ್ತು. ಕುಟ್ಟಿಚ್ಚಾತನ್, ವಿಭೂತಿ ರಹಸ್ಯ ಬಯಲು ಕಾರ್ಯಕ್ರಮಗಳು ಪ್ರಮುಖವಾಗಿತ್ತು. ನಾನು ಹೆಚ್ಚಾಗಿ ಆಸಂದರ್ಭದಲ್ಲಿ ಬಳಕೆದಾರರ ವೇದಿಕೆ ಬಗ್ಗೆ ಗಮನ ಹರಿಸಿದ್ದೆ. ಈ ಅವಧಿಯಲ್ಲಿ ಭಾರತೀಯ ಗ್ಯಾನ್ ವಿಜ್ಞಾನ ಜಾಥಾ(ಬಿಜೆವಿಜೆ) ಆರಂಭಗೊಂಡಿತು. ದೇಶದ ಮೂರು ಮೂಲೆಯಿಂದ ಈ ಜಾಥಾ ಹೊರಟಿತು. ಈ ಜಾಥಾದ ಮುಖ್ಯ ಉದ್ದೇಶ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಹುಟ್ಟು ಹಾಕುವುದು. ಈ ಸಂದರ್ಭ ಮಂಗಳೂರಿನಲ್ಲಿ ಸ್ಥಳೀಯ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಡಾ. ಕೆ.ವಿ. ರಾವ್ (ಆಗ ಅವರು ಭೌತಶಾಸ್ತ್ರ ಪ್ರೊಫೆಸರ್ ಆಗಿದ್ದವರು)ಅವರು ನೇಮಕಗೊಂಡಿದ್ದರು. ಪುರಭವನಕ್ಕೆ ಜಾಥಾ ಬರುವುದಿತ್ತು. ಕಾರ್ಯಕ್ರಮಕ್ಕೆ ಜನರನ್ನು ಒಟ್ಟುಗೂಡಿಸಲು ಡಾ.ಕೆ.ವಿ. ರಾವ್‌ರವರು ನಮ್ಮಲ್ಲಿ ಸಲಹೆ ಕೇಳಿದ್ದರು. ಆಗ ನಾವು ತಂಡ ರಚಿಸಿ, ಬಡಾವಣೆಗಳಲ್ಲಿ ಜನರಿಗೆ ಪವಾಡಗಳ ಕುರಿತು ಪ್ರದರ್ಶನ ನೀಡಿ, ಇಲ್ಲಿ ತೋರಿಸಿದ್ದು ಕೆಲವು ಮಾತ್ರ. ಇನ್ನೂ ಹೆಚ್ಚಿನ ಕುತೂಹಲಕಾರಿ ವಿಸ್ಮಯಗಳನ್ನು ತಿಳಿದುಕೊಳ್ಳಲು ಪುರಭವನಕ್ಕೆ ಭೇಟಿ ನೀಡಿ ಎಂದು ಪ್ರೋತ್ಸಾಹಿಸುವ ಆಲೋಚನೆ ನಮ್ಮದಾಗಿತ್ತು. ಜಾಥಾ ಮಂಗಳೂರಿಗೆ ಬರುವ ದಿನ ಜನರು ಪುರಭವನದಲ್ಲಿ ಸೇರಿದ್ದರು. 10 ಗಂಟೆಗೆ ಜಾಥಾ ಬರಬೇಕಿತ್ತು. 9:45ಕ್ಕೆ ಜಾಥಾ ಬರುವುದು ತಡವಾಗುತ್ತದೆ ಎಂಬ ಸಂದೇಶ ಬಂತು. ಈ ಬಗ್ಗೆ ಕೆ.ವಿ. ರಾವ್‌ಗೆ ತಿಳಿಸಲಾಯಿತು. ಕೆ.ವಿ. ರಾವ್ ನನ್ನನ್ನು ಕರೆದು ‘‘ನಿನ್ನಲ್ಲಿ ಪವಾಡ ಬಯಲು ಮಾಡುವ ಕೆಲವೊಂದು ವಸ್ತುಗಳಿವೆಯಲ್ಲ. ಅದನ್ನು ಪ್ರದರ್ಶಿಸು’’ ಎಂದು ಹೇಳಿದರು. ನಾನು ತಕ್ಷಣ ನನ್ನ ಬ್ಯಾಗ್ ತಂದು ಸುಮಾರು 10 ವಿವಿಧ ಪವಾಡ ರಹಸ್ಯ ಬಯಲು ವಿಸ್ಮಯಗಳನ್ನು ಪ್ರದರ್ಶಿಸಿದೆ. ಇಷ್ಟಾದರೂ ಜಾಥಾ ತಲುಪಿರಲಿಲ್ಲ. ಆಗ ಪ್ರಶ್ನೆ ಕೇಳುವಂತೆ ಜನರನ್ನು ಕೇಳಲಾರಂಭಿಸಿದೆ. ಸ್ವಲ್ಪ ಹೊತ್ತಿನಲ್ಲಿ ಜಾಥಾ ಬಂದು ನಮ್ಮ ಆತಂಕಕ್ಕೆ ತೆರೆ ಎಳೆದಿತ್ತು. ನಾನೇನೋ ಕಾರ್ಯಕ್ರಮ ಕೊಟ್ಟೆ ಅಂದುಕೊಂಡಿದ್ದೆ. ಬಳಿಕ ಬಿಜೆವಿಜೆಯ ಕಾರ್ಯಕರ್ತರಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ನನಗೂ ಅಲ್ಲಿ ಉಪನ್ಯಾಸ ನೀಡಲಿದ್ದರು. ಆದರೆ ನಾನು ವೇದಿಕೆಯಲ್ಲಿ ಮೊದಲು ಮಾಡಿದ ಕಾರ್ಯಕ್ರಮದ ಬಗ್ಗೆ ಕೆ.ವಿ.ರಾವ್‌ಗೆ ಕೆಲವರು ಮಾಹಿತಿ ನೀಡಿ, ತುಂಬಾ ಒಳ್ಳೆಯ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ವೇದಿಕೆಯ ಮೇಲೆ ಮಾಡಿದ ಪ್ರಥಮ ಪ್ರದರ್ಶನ ಅದಾಗಿತ್ತು. ಕೆ.ವಿ. ರಾವ್ ನನ್ನನ್ನು ಕರೆದು ಎರಡು ದಿನಗಳ ಕಾರ್ಯಾಗಾರದಲ್ಲಿ ಒಂದು ಗಂಟೆ ಉಪನ್ಯಾಸದ ಜತೆ ಈ ಕಾರ್ಯಕ್ರಮ ಮಾಡುವಂತೆ ಸಲಹೆ ನೀಡಿದರು. ಅದರಂತೆ ಕಾರ್ಯಕ್ರಮವನ್ನು ಬಿಜೆವಿಜೆ ಕಾರ್ಯಕರ್ತರಿಗೆ ತೋರಿಸಿದೆವು. ಅರಸೀಕೆರೆಯಿಂದ ಶ್ರೀನಿವಾಸ್ ನಟೇಕರ್, ಸ್ವಾಮಿ ಎಂಬವರು ಬಂದಿದ್ದರು. ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಅರಸೀಕರೆ ಶಾಖೆ ಆರಂಭಿಸಲು ಮುಂದಾಗಿದ್ದರು. ಮೂರ್ನಾಲ್ಕು ದಿನದ ಬಳಿಕ ಅದರ ಉದ್ಘಾಟನೆ ನಡೆಯಲಿತ್ತು. ಶಿವಮೊಗ್ಗದಿಂದ ಅವರು ಅಶೋಕ್ ಪೈ ಎಂಬವರನ್ನು ಕರೆಸಲು ನಿರ್ಧರಿಸಿದ್ದರು. ಕರ್ನಾಟಕ ರಾಜ್ಯವಿಜ್ಞಾನ ಪರಿಷತ್‌ನ ಕಾರ್ಯಕರ್ತ ಪ್ರಭು ಎಂಬವರು ರಾಕೆಟ್ ಶೋ ಮಾಡಲಿದ್ದರು. ಬಳಿಕ ನನ್ನ ಕಾರ್ಯಕ್ರಮ ನೀಡಲು ನಿರ್ಧರಿಸಿದರು. ಮಂಗಳೂರಿನಿಂದ ನಾನು ಅರಸೀಕೆರೆಯಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದೆ. ಆದರೆ ಅಲ್ಲಿ ಅಶೋಕ್ ಪೈ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ನಾನೇ ಕಾರ್ಯಕ್ರಮ ನೀಡಬೇಕಾಯಿತು. ನಾನು ಅಲ್ಲಿ ಮಾತ್ರವಲ್ಲದೆ, ಅಕ್ಕಪಕ್ಕದ ಹಳ್ಳಿಗಳಲ್ಲೂ ಪ್ರದರ್ಶನ ನೀಡಲು ನನ್ನನ್ನು ಕರೆದೊಯ್ದರು. ಆವಾಗ ಪತ್ರಿಕೆಗಳಲ್ಲಿ ಪ್ರಕಟವಾಯಿತು. ‘ಕರ್ನಾಟಕದಲ್ಲೊಬ್ಬ ಕೋವೂರು’ ಎಂಬ ಒಕ್ಕಣೆಯೊಂದಿಗೆ ವರದಿಗಳು ಪ್ರಕಟ ವಾದವು.ಈ ಪ್ರಚಾರದ ಬಳಿಕ ವಿವಿಧ ಕಡೆಗಳಿಂದ ಕಾರ್ಯಕ್ರಮ ಕೊಡಿಸಲು ಪೋಸ್ಟ್‌ಕಾರ್ಡ್, ಕಾಗದ ಪತ್ರಗಳ ಮೂಲಕ ಆಹ್ವಾನ ಬರತೊಡಗಿತು. ಅದರ ಬಳಿಕ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜನರ ಮಧ್ಯೆ ವಿಜ್ಞಾನ ಮನೋಭಾವ ಮೂಡಿಸಲು ಬಾಲ ವಿಜ್ಞಾನ ಎಂಬ ಪತ್ರಿಕೆ ಹೊರತರುತ್ತಿತ್ತು. ಅದರ ಸಂಪಾದಕರಾಗಿ ಅಡ್ಯನಡ್ಕ ಕೃಷ್ಣಭಟ್ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಪತ್ರಿಕೆಯಲ್ಲಿ ಕಾರ್ಯಕ್ರಮ ಪ್ರದರ್ಶನ ಬಗ್ಗೆ ಜಾಹೀರಾತು ರೀತಿಯಲ್ಲಿ ಪ್ರಚಾರವನ್ನು ನೀಡಿದರು. ನೂರಾರು ಆಹ್ವಾನಗಳು ಬಂದವು. ಆಗ ಕರ್ನಾಟಕ ಪ್ರವಾಸವನ್ನು ನಾನುಆರಂಭಿಸಿದೆ. ಈ ಪ್ರವಾಸದಿಂದಾಗಿ ಸಾಕಷ್ಟು ಪ್ರಚಾರ ದೊರಕಿತು. ಬಿಜಿವಿಜೆ ಮೂಲಕ ಕಾರ್ಯಕ್ರಮ ನೀಡಲು ಕಾರ್ಯಕರ್ತರಿಗೆ ತರಬೇತಿ ನೀಡಿ, ಕಿಟ್‌ಗಳನ್ನು ನೀಡಲಾಯಿತು. 1992ರಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರಥಮ ತರಬೇತಿ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆಯಿತು. ಹೀಗೆ ಪವಾಡ ರಹಸ್ಯ ಬಯಲು ಮಾಡುವ ಕಾರ್ಯಕರ್ತರು ರಾಜ್ಯದ ವಿವಿಧ ಕಡೆಗಳಲ್ಲಿ ಹುಟ್ಟಿಕೊಂಡರು. ರಾಷ್ಟ್ರ ಮಟ್ಟಕ್ಕೆ ಬೆಳೆದ ಪರಿ

ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯಡಿ ನ್ಯಾಷನಲ್ ಕೌನ್ಸಿಲ್ ಫೋರ್ ಸಯನ್ಸ್ ಆ್ಯಂಡ್ ಟೆಕ್ನಾಲಜಿ ಕಮ್ಯೂನಿಕೇಶನ್ (ಎನ್‌ಸಿಎಸ್‌ಟಿಸಿ) ಅಧಿಕಾರಕ್ಕೆ ಬಂದು, ನರೇಂದ್ರ ಸೆಹಗಲ್ ಅದರ ಮುಖ್ಯಸ್ಥರಾಗಿದ್ದರು. ಅವರು ಪ್ರೇಮಾನಂದರ ನಿಕಟವರ್ತಿಯಾಗಿದ್ದರು. ಬಿಜಿವಿಜೆಯ ಕಾರ್ಯಕ್ರಮ ಪ್ರತ್ಯೇಕವಾಗಿ ನಡೆಯುತ್ತಿತ್ತು. ಬಳಿಕ ಎರಡೂ ಸಂಸ್ಥೆಗಳು ಜತೆಯಾಗಿ ಕಾರ್ಯಕ್ರಮ ನಡೆಸಲಾರಂಭಿದವು. ನ್ಯಾಷನಲ್ ಸಾಯನ್ಸ್ ಕಾಂಗ್ರೆಸ್ ಗೋವಾದಲ್ಲಿ ನಡೆಯಲು ನಿರ್ಧರಿಸಲಾಯಿತು. ಎನ್‌ಸಿಟಿಸಿಯಿಂದ ನನಗೆ ಕರೆ ಬಂದು ಗೋವಾಕ್ಕೆ ಕರೆಸಲಾಯಿತು. ನಾನು ಗೋವಾಕ್ಕೆ ಹೋದೆ. ಅಲ್ಲಿ ನಮಗೆ ಆ್ಯಕ್ಟಿವಿಟಿ ಕಾರ್ನರ್ ಒದಗಿಸಿದ್ದರು. ನಾನು ಅಲ್ಲಿ ಕಾರ್ಯಕ್ರಮ ನೀಡುತ್ತಿದ್ದೆ. ಧ್ವನಿ ವರ್ಧಕ ವ್ಯವಸ್ಥೆ ಮಾಡಲಾಗಿತ್ತು. ಪ್ರದರ್ಶನದ ಸೌಲಭ್ಯವೂ ಅಲ್ಲಿತ್ತು. ನಾನು ಕಾರ್ಯಕ್ರಮ ಆರಂಭಿಸಿದಾಗ ಪ್ರದರ್ಶನಕ್ಕೆ ಬಂದವರು ಮಾತ್ರವಲ್ಲದೆ, ಸ್ಟಾಲ್‌ನವರೂ ಸೇರುತ್ತಿದ್ದರು. ಜನರಿಂದ ಭಾರೀ ಪ್ರೋತ್ಸಾಹ ದೊರೆಯಿತು. ಅಲ್ಲಿ ಸೇರುವ ಜನರು ಕೇಳಿದ ಭಾಷೆಯಲ್ಲಿ ನಾನು ಉತ್ತರ ನೀಡುತ್ತಿದ್ದೆ. ಹಿಂದಿ, ಕೊಂಕಣಿ, ಮರಾಠಿ, ಕನ್ನಡ ಹೀಗೆ ಉತ್ತರ ಸೇರಿದ್ದವರಿಗೆ ತೃಪ್ತಿಯ ಜತೆಗೆ ಸಂತಸವನ್ನೂ ನೀಡಿತು. ಆಗ ಎನ್‌ಸಿಎಸ್‌ಟಿಸಿಯ ಉಪ ಮುಖ್ಯಸ್ಥರು ಡಿ.ಕೆ. ಪಾಂಡೆ, ಅವರು ನನ್ನನ್ನು ಉದ್ದೇಶಿಸಿ ಎಲ್ಲಾ ಭಾಷೆ ಮಾತನಾಡುತ್ತೀರಲ್ಲಾ, ನಿಮ್ಮನ್ನು ನಾವು ಉತ್ತರ ಭಾರತಕ್ಕೂ ಕರೆಸುತ್ತೇವೆ ಎಂದರು. ಅಲ್ಲಿಂದ ನನ್ನ ಉತ್ತರ ಭಾರತ ಪ್ರವಾಸ ಆರಂಭಗೊಂಡಿತು. ಪ್ರಥಮ ತರಬೇತಿ ಕಾರ್ಯಕ್ರಮ ರಾಜಸ್ಥಾನ ಮಧ್ಯಪ್ರದೇಶದ ಗಡಿ ಭಾಗದ ರತ್ನಂ ಜಿಲ್ಲೆಯ ಪಿಪ್ಲೋದ ಎಂಬ ಹಳ್ಳಿಯಲ್ಲಿ ನಡೆಯಿತು. ಅದು ಮರುಭೂಮಿ. ಆದರೂ ಕಾರ್ಯಕ್ರಮ ಉತ್ತಮವಾಗಿ ನಡೆಯಿತು. ಹಗಲು ಹೊತ್ತು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ ಸಂಜೆಯ ಹೊತ್ತು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೆವು. ಅಲ್ಲಿ ಸಾವಿರಾರು ಜನರು ಸೇರುತ್ತಿದ್ದರು. ಟ್ರಾಕ್ಟರ್ ಬೆಳಕಿನಲ್ಲಿ ಕಾರ್ಯಕ್ರಮ, ಸುಮಾರು ಐದು ದಿನದ ಕಾರ್ಯಕ್ರಮದಲ್ಲಿ 500 ಮಂದಿಗೆ ತರಬೇತಿ ನೀಡಲಾಯಿತು. ಬಳಿಕ ನೂರಾರು ತರಬೇತಿ ಕಾರ್ಯಕ್ರಮಗಳು ದೇಶದ ಮೂಲೆ ಮೂಲೆಗಳಲ್ಲಿ ನಡೆಯಿತು. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹರಿರ್ಯಾಣ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಒಡಿಶಾ ಮೊದಲಾದೆಡೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಈ ರೀತಿ ಪವಾಡ ರಹಸ್ಯ ಬಯಲು ಕಾರ್ಯಕ್ರು ರಾಷ್ಟ್ರವ್ಯಾಪಿಯಾಗಿ ಜನಪ್ರಿಯವಾಯಿತು.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News