ಡೆಮಾಕ್ರಸಿ’ಸ್ ಇಲೆವೆನ್: ಒಳ್ಳೆಯ ಪುಸ್ತಕದ ಒಂದು ಮಿತಿ

Update: 2018-11-11 02:44 GMT

ನಾನು ಇತ್ತೀಚೆಗೆ ಓದಿದ ಪುಸ್ತಕ ಪ್ರಸಿದ್ಧ ಭಾರತೀಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿಯವರು ಬರೆದಿರುವ ಭಾರತೀಯ ಕ್ರಿಕೆಟ್ ಬಗೆಗಿನ ಪುಸ್ತಕ ‘‘ಡೆಮಾಕ್ರಸಿ’ಸ್ ಇಲೆವೆನ್’’. ಜಗರ್‌ನಾಟ್ ಪ್ರಕಾಶನದವರು ಹೊರತಂದಿರುವ 372 ಪುಟಗಳ ಈ ಪುಸ್ತಕದಲ್ಲಿ ಸರ್ದೇಸಾಯಿ ಯವರು ಭಾರತ ಕ್ರಿಕೆಟಿನ ಹನ್ನೊಂದು ಜನ ಮಹಾನ್ ಆಟಗಾರರ ಬಗೆಗೆ ಪ್ರಸ್ತಾಪಿಸುತ್ತಾರೆ. ಅವರೇ ಈ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳುವ ಹಾಗೆ ಈ ಹನ್ನೊಂದು ಜನರು ಕೂಡಿಕೊಂಡು ಒಟ್ಟಿಗೆ ಆಡಬಲ್ಲ ತಂಡವನ್ನು ರಚಿಸುವುದಿಲ್ಲ. ಬದಲಿಗೆ ಭಾರತೀಯ ಕ್ರಿಕೆಟಿನ ಬ್ಯಾಟನ್ ಅನ್ನು (ರಿಲೇ ಮಾದರಿಯಲ್ಲಿ) ಒಬ್ಬರಾದ ಮೇಲೊಬ್ಬರಂತೆ ಹಿಡಿದುಕೊಂಡು ಮುನ್ನಡೆಸಿದ ಆಟಗಾರರು ಈ ಹನ್ನೊಂದು ಜನ. ಆ ಹನ್ನೊಂದು ಜನರು ಯಾರೆಂದರೆ.. ದಿಲೀಪ್ ಸರ್ದೇಸಾಯಿ, ಮನ್ಸೂರ್ ಆಲಿ ಖಾನ್ ಪಟೌಡಿ, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ಎಂ ಎಸ್ ಧೋನಿ, ಸೌರವ್ ಗಂಗುಲಿ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ಸುನಿಲ್ ಗವಸ್ಕರ್ ಮತ್ತು ಮುಹಮ್ಮದ್ ಅಝರುದ್ದೀನ್.

      ಸರ್ದೇಸಾಯಿ

ಈ ಪುಸ್ತಕವು ಬಹಳ ರೀತಿಯಲ್ಲಿ ವಿಶೇಷವಾಗಿದೆ. ಈ ಪುಸ್ತಕದಲ್ಲಿ ಲೇಖಕರು ಬರೆದಿರುವ ಆಟಗಾರರಲ್ಲಿ ಈಗ ಜೀವಂತವಿರುವ ಪ್ರತಿಯೊಬ್ಬರ ಬಳಿ ಸ್ವತಃ ಅವರು ಹೋಗಿ ಈ ಪುಸ್ತಕಕ್ಕೋಸ್ಕರಕ್ಕಾಗಿಯೇ ಸಂದರ್ಶನ ಮಾಡಿಕೊಂಡು ಬಂದಿದ್ದಾರೆ. ಈ ಆಟಗಾರರ ಕ್ರೀಡಾ ಬದುಕಿನ ತಮಾಷೆಯನ್ನೊಳಗೊಂಡ ಸಂಗತಿಗಳು ಓದುಗನಿಗೆ ಮುದ ನೀಡುತ್ತಾ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ಅವರು ಹೇಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಎಂಬುದನ್ನು ಸೇರಿದಂತೆ ಹಲವು ವಿಷಯಗಳನ್ನು ಲೇಖಕರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಉದಾಹರಣೆಗೆ ಈ ಪುಸ್ತಕದಲ್ಲಿ ಶುರುವಿನಲ್ಲೇ ಅವರು ಹೇಳುವ ಹಾಗೆ ‘‘ರಾಜಕೀಯದಂತೆ ಕ್ರಿಕೆಟ್ ರಕ್ತದಲ್ಲಿ ಹರಿದು ಬರುವುದಿಲ್ಲ! ಅದಕ್ಕಾಗಿಯೇ ಓರ್ವ ವ್ಯಕ್ತಿ ಹುಟ್ಟಿರಬೇಕು! ಇದಕ್ಕೆ ನಾನೇ ಜೀವಂತ ಉದಾಹರಣೆ’’ ಎಂದು. ತಮ್ಮ ತಂದೆಯವರಂತೆ ಲೇಖಕ ರಾಜ್ ದೀಪ್ ಸರ್ದೇಸಾಯಿ ಅವರು ಸಹ ಕ್ರಿಕೆಟ್ ಆಡಲು ಶುರು ಮಾಡಿದ್ದರು. ಆದರೆ ದೊಡ್ಡ ಮಟ್ಟಿಗೆ ಸಕ್ಸಸ್ ಕಾಣದ ಕಾರಣ ಅದನ್ನು ಬಿಟ್ಟು ಪತ್ರಿಕೋದ್ಯಮಕ್ಕೆ ಇಳಿದರಂತೆ.

 ಈ ಪುಸ್ತಕದಲ್ಲಿ ಇಷ್ಟವಾಗುವ ಒಂದು ಸಂಗತಿಯೆಂದರೆ ಲೇಖಕರು ಒಬ್ಬ ಆಟಗಾರನ ಬಗೆಗೆ ಅನಗತ್ಯವಾಗಿ ಯಾವುದೇ ವಿಷಯವನ್ನು ತುರುಕುವುದಿಲ್ಲ. ಆ ಆಟಗಾರನ ಬಗೆಗೆ ಎಷ್ಟು ಹೇಳಬೇಕೋ ಅಷ್ಟನ್ನು ಬಹಳ ಸೊಗಸಾಗಿ ಹೇಳುತ್ತಾರೆ. ಆ ವಿಷಯದಲ್ಲಿ ನಾನು ಮೊದಲೇ ಹೇಳಿದ ಹಾಗೆ ಅವರು ಪ್ರತಿಯೊಬ್ಬ ಆಟಗಾರನ ವೈಯಕ್ತಿಕ ಸಂದರ್ಶನ ಮಾಡುವುದು ಇಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಇಲ್ಲಿ ರಾಜ್‌ದೀಪ್ ಸರ್ದೇಸಾಯಿಯವರು ಜರ್ನಲಿಸಂನಲ್ಲಿ ತಮ್ಮ ಅನುಭವವನ್ನು ತೋರ್ಪಡಿಸುತ್ತಾರೆ. ಪ್ರತಿಯೊಬ್ಬ ಆಟಗಾರನನ್ನು ನೇರ ಸಂದರ್ಶನ ಮಾಡಿದಾಗ ಅದು ಆಟಗಾರನ ಆತ್ಮಕಥನದ ಸ್ವರೂಪ ಪಡೆಯುವ ಸಂಭವ ಇತ್ತು. ಆದರೆ ಲೇಖಕರು ಬಹಳ ಬುದ್ಧಿವಂತಿಕೆಯಿಂದ ಇದನ್ನು ನಿರ್ವಹಿಸಿರುವುದರಿಂದ ಆ ಅಪಾಯ ತಪ್ಪಿದೆ. ಈ ಪುಸ್ತಕದಲ್ಲಿ ನನಗೆ ಅಷ್ಟು ಹಿಡಿಸದ ಒಂದು ವಿಷಯವೆಂದರೆ ಒಬ್ಬ ಆಟಗಾರರಾಗಿ ಲೇಖಕರು ದಿಲೀಪ್ ಸರ್ದೇಸಾಯಿಯವರನ್ನು ಆಯ್ದುಕೊಂಡಿದ್ದು. ದಿಲೀಪ್ ಸರ್ದೇಸಾಯಿ ಈ ಪುಸ್ತಕದ ಲೇಖಕರಾದ ರಾಜ್‌ದೀಪ್ ಸರ್ದೇಸಾಯಿಯವರ ತಂದೆ. ನಾನು ಕ್ರಿಕೆಟಿನ ಚರಿತ್ರೆಯನ್ನು ತಿಳಿದ ಮಟ್ಟಿಗೆ ದಿಲೀಪ್ ರವರು ಅಷ್ಟೇನೂ ಉತ್ತಮ ಆಟಗಾರರು ಆಗಿರಲಿಲ್ಲ. ಭಾರತ ಕ್ರಿಕೆಟ್ ಕಂಡ ಬಹಳ ಆಟಗಾರರಂತೆ ಅವರು ಸಹ ಒಬ್ಬರಾಗಿದ್ದರು. ಅವರು ವಿಶೇಷ ವೆನಿಸುವುದು ಗೋವಾದಿಂದ ಬಂದು ರಾಷ್ಟ್ರೀಯ ತಂಡದ ಪರ ಆಡಿದ ಮೊದಲ ಆಟಗಾರ ಎಂಬ ವಿಷಯಕ್ಕೆ ಹಾಗೂ ಅವರ ವೈಯಕ್ತಿಕ ಸಮಸ್ಯೆಗಳನ್ನು ಮೀರಿನಿಂತು ಅವರು ಕ್ರಿಕೆಟ್ ಆಡಿದ ಕಾರಣಕ್ಕೆ. ಆದರೆ ಸರ್ದೇಸಾಯಿಯವರಿಗಿಂತ ದೊಡ್ಡ ಸ್ವರೂಪದ ವೈಯಕ್ತಿಕ ಸಮಸ್ಯೆಗಳನ್ನು ಹೊಂದಿ ಅವರಿಗಿಂತ ಉತ್ತಮ ರೀತಿಯಲ್ಲಿ ಕ್ರಿಕೆಟ್ ಆಡಿದವರಿದ್ದಾರೆ. ಲೇಖಕರಿಗೆ ತನ್ನ ತಂದೆಯ ಸಮಸ್ಯೆಗಳು ಎಷ್ಟು ದೊಡ್ಡದೆಂದು ವೈಯಕ್ತಿಕವಾಗಿ ಗೊತ್ತಿದ್ದರಿಂದ ಅವರು ದೊಡ್ಡ ಆಟಗಾರ ಎನಿಸಿರಬಹುದು. ಆದರೆ ಒಬ್ಬ ಪ್ರಸಿದ್ಧ ಹಾಗೂ ಉತ್ತಮ ಹೆಸರು ಹೊಂದಿರುವ ಪತ್ರಕರ್ತ ಇಂತಹ ದೊಡ್ಡ ಪುಸ್ತಕ ಬರೆಯುವಾಗ ವೈಯಕ್ತಿಕವಾದುದ್ದನ್ನು ದೂರ ಬಿಟ್ಟು ಆಟದ ದೃಷ್ಟಿಯಿಂದಲೇ ನೋಡಿ ಎಲ್ಲವನ್ನೂ ಬರೆಯಬೇಕಾಗುತ್ತದೆ. ವೈಯಕ್ತಿಕ ಸಮಸ್ಯೆಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳದೆ ಅವರು ಎಷ್ಟೇ ಬಡವ, ಎಷ್ಟೇ ಶ್ರೀಮಂತರಾಗಿದ್ದರೂ ಕೇವಲ ಆಟವನ್ನು ಮಾನದಂಡವಾಗಿಟ್ಟುಕೊಂಡು ಬರೆಯಬೇಕು..

ನನ್ನ ಪ್ರಕಾರ ದಿಲೀಪ್ ಸರ್ದೇಸಾಯಿಯವರ ಬದಲಿಗೆ ವಿಜಯ್ ಹಝಾರೆ, ವಿಜಯ್ ಮರ್ಚೆಂಟ್, ಗುಂಡಪ್ಪ ವಿಶ್ವನಾಥ್ ರಂತಹ ಅತ್ಯುತ್ತಮ ಆಟಗಾರರು ಭಾರತ ತಂಡದಲ್ಲಿ ಆಡಿದ್ದರು. ಅದರಲ್ಲಿಯೂ ವಿಜಯ್ ಹಝಾರೆ ಭಾರತೀಯ ಕ್ರಿಕೆಟಿನ ಶುರುವಿನಲ್ಲಿ ಆಡಿದಂತಹ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. 20 ಟೆಸ್ಟ್ ಗಳಲ್ಲಿ 2,000ಕ್ಕೂ ಹೆಚ್ಚು ರನ್ ಗಳಿಸಿದ್ದ ವಿಜಯ್ ಹಝಾರೆಯವರು ದಿಲೀಪ್ ರವರಿಗಿಂತ ಮುಂಚೆ ಆಡಿದ್ದರಿಂದ ಈ ರಿಲೇ ಬ್ಯಾಟನ್ ಪರಿಕಲ್ಪನೆಗೆ ಹತ್ತಿರವಾಗುತ್ತಿತ್ತು.

ಇನ್ನು ನಾನು ಪ್ರಸ್ತಾಪಿಸ ಬಯಸುವ ಮತ್ತೊಂದು ವಿಷಯವೇನೆಂದರೆ ರಿಲೇ ಬ್ಯಾಟನ್ ಪರಿಕಲ್ಪನೆಯನ್ನು ಸರ್ದೇಸಾಯಿಯವರು ಹೇಳಿರುವುದರಿಂದ ಪಟೌಡಿ ಹಾಗೂ ದಿಲೀಪ್ ಸರ್ದೇಸಾಯಿ, ಸಚಿನ್, ದ್ರಾವಿಡ್ ಹಾಗೂ ಗಂಗುಲಿ ಹೀಗೆಯೇ ಸಮಕಾಲೀನರನ್ನು 11 ಜನರಲ್ಲಿ ಸೇರಿಸಿಕೊಂಡಿರುವುದರಿಂದ ಬ್ಯಾಟನ್ ಪರಿಕಲ್ಪನೆ ಅಷ್ಟು ಸರಿಯಾಗುವುದಿಲ್ಲ. ನನ್ನ ಪ್ರಕಾರ ಸಿಕೆ ನಾಯ್ಡುರವರಿಂದ ಮೊದಲುಗೊಂಡು ಇಂದಿನ ಕ್ರಿಕೆಟ್‌ನ ನಾಯಕ ವಿರಾಟ್ ಕೊಹ್ಲಿಯವರ ತನಕ ಕ್ರಿಕೆಟಿಗರನ್ನು ಆರಿಸಿ 11 ಜನರನ್ನು ಆಯ್ಕೆ ಮಾಡಿಕೊಂಡಿದ್ದರೆ ಅದು ಇನ್ನೂ ಸಹ ಪರಿಣಾಮಕಾರಿಯಾಗುತ್ತಿತ್ತೇನೋ ಎಂಬುದು ನನ್ನ ಅಭಿಪ್ರಾಯ. ಇದೊಂದು ವಿಷಯವನ್ನು ಹೊರತು ಪಡಿಸಿದರೆ ನನಗೆ ಇದು ತುಂಬಾ ಇಷ್ಟವಾದ ಪುಸ್ತಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News