ನ. 23-24ರಂದು ದುಬೈಯಲ್ಲಿ ನಡೆಯಲಿದೆ 'ವಿಶ್ವ ತುಳು ಸಮ್ಮೇಳನ - 2018'

Update: 2018-11-11 04:14 GMT

ದುಬೈ, ನ.11: ಅಖಿಲ ಭಾರತ ತುಳು ಒಕ್ಕೂಟ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಜಂಟಿಯಾಗಿ ಆಯೋಜಿಸುವ ವಿಶ್ವ ತುಳು ಸಮ್ಮೇಳನವನ್ನು ಈ ಬಾರಿ ದುಬೈಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಈವರೆಗೆ ಮಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಆಯೋಜಿಸಲಾಗುತ್ತಿದ್ದ ವಿಶ್ವ ತುಳು ಸಮ್ಮೇಳನ ಇದೇ ಮೊದಲ ಬಾರಿ ಕೊಲ್ಲಿ ರಾಷ್ಟ್ರದಲ್ಲಿ ಆಯೋಜಿಸಲಾಗಿದೆ.

ದುಬೈಯ ಅಲ್ ನಸ್ರ್ ಲೀಶರ್‌ಲ್ಯಾಂಡ್ ಐಸ್ ರಿಂಕ್ ಆ್ಯಂಡ್ ನಶ್ವನ್ ಸಭಾಂಗಣದಲ್ಲಿ ನ. 23 ಮತ್ತು 24ರಂದು ವಿಶ್ವ ತುಳು ಸಮ್ಮೇಳನ 2018 ನಡೆಯಲಿದೆ. ಸಮ್ಮೇಳನಕ್ಕೆ ಸಂಬಂಧಿಸಿ ನ. 9ರಂದು ನಡೆದ ಸಭೆಯಲ್ಲಿ ಸರ್ವೊತ್ತಮ ಶೆಟ್ಟಿ, ಶೋಧನ್ ಪ್ರಸಾದ್ ಮತ್ತು ಗಣೇಶ್ ರೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಯುಎಇ ತುಳುವಾಸ್‌ನ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರನ್ನು ವಿಶ್ವ ತುಳು ಸಮ್ಮೇಳನದ ಮುಖ್ಯ ಸಂಚಾಲಕರನ್ನಾಗಿ ನೇಮಿಸಲಾಗಿದ್ದರೆ ಶೋಧನ್ ಪ್ರಸಾದ್ ಅವರು ಕಾರ್ಯಕ್ರಮ ವ್ಯವಸ್ಥಾಪಕ ಹಾಗೂ ಗಣೇಶ್ ರೈ ಅವರ ಮೇಲುಸ್ತುವರಿಯಲ್ಲಿ ಸಮಾರಂಭದ ಸ್ಮರಣ ಸಂಚಿಕೆ ತಯಾರಾಗಲಿದೆ. ಇಡೀ ಕಾರ್ಯಕ್ರಮವನ್ನು ಸರ್ವಧರ್ಮ ಸಮ್ಮೇಳನವಾಗಿ ಆಚರಿಸಲು ಚಿಂತಿಸಲಾಗಿದ್ದು ತುಳು ಭಾಷೆ, ಸಂಸ್ಕೃತಿ ಮತ್ತು ಜನಪದಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನಡೆಯಲಿರುವುದು. ಈ ಸಂದರ್ಭದಲ್ಲಿ ಜನಪದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಒಮನ್, ಬಹ್ ರೈನ್, ಅಲ್‌ ಐನ್, ಅಬುಧಾಬಿ ಹಾಗೂ ದುಬೈಯ ವಿವಿಧ ತಂಡಗಳು ಈ ಸ್ಪರ್ಧೆಗೆ ತಮ್ಮ ಹೆಸರನ್ನು ನೋಂದಾಯಿಸಿವೆ.

ಸಮ್ಮೇಳನದ ಉದ್ಘಾಟಕರು

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್ ಶೆಟ್ಟಿ, ಬಿಶಪ್ ಪೀಟರ್ ಪೌಲ್ ಸಲ್ಡಾನಾ, ಮಂಗಳೂರು, ಬಿಶಪ್ ಹೆನ್ರಿ ಡಿಸೋಜ ಬಳ್ಳಾರಿ, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಷ್ಟಮಠ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ದೇವಸ್ಥಾನ, ಬಾಲಿವುಡ್ ನಟ ಸುನೀಲ್ ಶೆಟ್ಟಿ,  ಫಾ. ಎಬ್ನೆಝರ್ ಜತ್ತನ್ನ ಸಿಎಸ್‌ಐ ಪ್ರೊಟೆಸ್ಟೆಂಟ್ ಚರ್ಚ್, ವಾರ್ತಾಭಾರತಿ ಮುಖ್ಯ ಸಂಪಾದಕರು ಅಬ್ದುಲ್ ಸಲಾಂ ಪುತ್ತಿಗೆ, ಉದ್ಯಮಿ ರೊನಾಲ್ಡೊ ಕೊಲಾಸೊ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೋಹನ್ ಆಳ್ವಾ, ವೀರಪ್ಪ ಮೊಯಿಲಿ, ಸಚಿವೆ ಜಯಮಾಲಾ, ಸಚಿವ ಯು.ಟಿ.ಖಾದರ್, ಉಮಾನಾಥ ಕೋಟ್ಯಾನ್, ಸುನೀತಾ ಎಂ.ಶೆಟ್ಟಿ, ಉದ್ಯಮಿ ಸುಜತ್ ಶೆಟ್ಟಿ, ಯುಎಇ ತುಳುವಾಸ್ ಅಧ್ಯಕ್ಷ ಸರ್ವೋತ್ತಮ್ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಎ.ಸಿ ಭಂಡಾರಿ, ಶೋಧನ್ ಪ್ರಸಾದ್ ಉಪಸ್ಥಿತರಿರುವರು. ಸಮ್ಮೇಳನದ ಸ್ಮರಣಾರ್ಥ ತುಳು ಐಸಿರಿ ಎಂಬ ಸ್ಮರಣ ಸಂಚಿಕೆಯನ್ನು ಈ ಸಂದರ್ಭ ಬಿಡುಗಡೆ ಮಾಡಲಾಗುವುದು.

ಸಮ್ಮೇಳನದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ: ತುಳುನಾಡು ಪರ್ಬೊಲು- ಮಾಸ್ಟರ್ ಸುರೇಶ್ ಅತ್ತಾವರ ನೇತೃತ್ವದಲ್ಲಿ- ನೃತ್ಯರೂಪಕ ಚಕ್ರಪಾಣಿ ನೃತ್ಯ ಕಲಾ ಕೇಂದ್ರ, ಮಂಗಳೂರು.

ತುಳು ಯಕ್ಷಗಾನ ಬಯಲಾಟ (ಜಾಂಬವತಿ ಕೈಲಾಸ)- ದಿನೇಶ್ ಶೆಟ್ಟಿ ಕೊಟ್ಟಿಂಜ ನೇತೃತ್ವದಲ್ಲಿ- ಯಕ್ಷ ಮಿತ್ರರು. ಯಕ್ಷಗಾನ ನಾಟ್ಯಗಾನ ವೈಭವ- ಸತೀಶ್ ಶೆಟ್ಟಿ ಪಟ್ಲ ಹಾಗೂ ತಂಡದಿಂದ. ತಾಲ ಮದ್ದಲೆ- ಜಬ್ಬರ್ ಸಮೊ, ಭಾಸ್ಕರ್ ರೈ ಕುಕ್ಕುವಳ್ಳಿ, ಕದ್ರಿ ನವನೀತ್ ಶೆಟ್ಟಿ, ತೋನ್ಸೆ ಪುಷ್ಕರ್ ಕುಮಾರ್ ಮತ್ತು ದಯಾನಂದ ಕತ್ತಲ್‌ಸಾರ್ ಅವರಿಂದ. ಪಿಲಿ ನಲಿಕೆ-ದುಬೈ ಗಿರೀಶ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಸ್ಥಳೀಯ ವೇಷಧಾರಿಗಳಿಂದ ಹುಲಿ ಕುಣಿತ. ತುಳು ರಸಮಂಜರಿ-ಪ್ರಮೋದ್ ಕುಮಾರ್ ನೇತೃತ್ವದ ವರ್ಸಟೈಲ್ ತಂಡದಿಂದ ತುಳು ಹಾಡುಗಳ ತುಳು ರಸಮಂಜರಿ. ಚಲನಚಿತ್ರ ಸಂಗೀತ ನಿರ್ದೇಶಕ ಗುರು ಕಿರಣ್ ಅವರಿಂ ವಿಶೇಷ ಹಾಡುಗಾರಿಕೆ. ತುಳು ಆಯೋನ (ತುಳು ಜನಪದ ನೃತ್ಯ)-ಡಾ. ರಾಜೇಶ್ ಆಳ್ವಾ ಬದಿಯಡ್ಕ ಅವರ 50 ಸದಸ್ಯರ ತಂಡದಿಂದ. ಸತ್ಯಪುರತ ಸಿರಿ (ನೃತ್ಯರೂಪಕ)-ಚಂದ್ರ ಶೇಖರ ಶೆಟ್ಟಿ ನೇತೃತ್ವದ ಸನಾತನ ತಂಡದ ಸದಸ್ಯರಿಂದ ತುಳು ನೃತ್ಯ ರೂಪಕ. ತುಳುನಾಡ ಗೊಬ್ಬುಲು (ತುಳುನಾಡ ಕ್ರೀಡೆಗಳು)- ನಾಗೇಶ್ ಕುಲಾಲ್ ಮತ್ತು ತಂಡದಿಂದ ತುಳುನಾಡಿನ ವಿವಿಧ ಕ್ರೀಡೆಗಳ ಅನಾವರಣ.

ಹಾಸ್ಯ ಕಾರ್ಯಕ್ರಮ- ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನಾ ಮತ್ತು ಮರ್ವಿನ್ ಅವರ ಪ್ರಶಂಸಾ ತಂಡದ ಜೊತೆಗೆ ಶರತ್ ಕುಮಾರ್. ಉಮೇಶ್ ಮಿಜಾರ್ ತಂಡದ ಜೊತೆಗೆ ಮಂಗಳೂರಿನ ಆರು ಪ್ರಸಿದ್ಧ ಹಾಸ್ಯತಂಡಗಳಿಂದ ಹಾಸ್ಯ ಕಾರ್ಯಕ್ರಮ. ಇವರೊಂದಿಗೆ ಸ್ಥಳೀಯ ಪ್ರತಿಭೆಗಳ ತಂಡ ಗಮ್ಮತ್ ಕಲಾವಿದೆರ್‌ನಿಂದಲೂ ಹಾಸ್ಯದ ಹೊನಲು. ಇವೆಲ್ಲವುಗಳ ಜೊತೆಗೆ, ತುಳು ಜನಪದ ಆಚರಣೆ ಗೋಷ್ಟಿ, ಹಾಸ್ಯ ಕವಿ-ಕವನ ಗೋಷ್ಟಿ, ತುಳು ಚಲನಚಿತ್ರ ಮತ್ತು ರಂಗಭೂಮಿ ಗೋಷ್ಟಿ, ಮಾಧ್ಯಮ ಗೋಷ್ಟಿ, ಹೊರನಾಡ ಮತ್ತು ಅನಿವಾಸಿ ತುಳುವರ ಸಮಾವೇಶ ನಡೆಯಲಿದೆ. ಇವುಗಳಲ್ಲದೆ, ತುಳುನಾಡ ಸಾಂಪ್ರದಾಯಿಕ ವಸ್ತುಗಳ ವಸ್ತು ಪ್ರದರ್ಶನ, ತುಳುನಾಡ ಆಹಾರಗಳ ಪ್ರದರ್ಶನ ನಡೆಯಲಿದೆ.

ಭಾಸ್ಕರ್ ರೈ ಕುಕ್ಕವಳ್ಳಿ, ಕದ್ರಿ ನವನೀತ್ ಶೆಟ್ಟಿ, ಆರ್‌ಜೆ ಸಾಯಿಹೀಲ್ ರೈ, ಆರ್‌ಜೆ ಪ್ರಿಯಾ ಹರೀಶ್ ಶೆಟ್ಟಿ, ನವೀನ್ ಶೆಟ್ಟಿ ಯೆಡ್ಮಾರ್ ಹಾಗೂ ಮುಂಬೈ ಅಶೋಕ್ ಪಕ್ಕಲ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News