ಅಮಿತ್ ಶಾ ಹೆಸರು ಪರ್ಶಿಯನ್ ಮೂಲದ್ದು, ಅದನ್ನೂ ಬದಲಿಸಿ

Update: 2018-11-11 08:12 GMT

ಆಗ್ರಾ, ನ.11: ಬಿಜೆಪಿ ಸರ್ಕಾರಗಳ ಹೆಸರು ಬದಲಾವಣೆ ಅಜೆಂಡಾವನ್ನು ಟೀಕಿಸಿರುವ ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್, ಮೊದಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆಸರನ್ನು ಬದಲಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

"ಅಮಿತ್ ಶಾ ಹೆಸರಿನಲ್ಲಿ ಶಾ ಎನ್ನುವ ಅಡ್ಡಹೆಸರು ಪರ್ಶಿಯನ್ ಮೂಲದ್ದು; ಅದು ಗುಜರಾತ್ ಮೂಲದ್ದಲ್ಲ. ಅವರರ ಹೆಸರು ಬದಲಾವಣೆಯ ಬಗ್ಗೆ ಮೊದಲು ಬಿಜೆಪಿ ಚಿಂತಿಸಲಿ" ಎಂದು ಅವರು ಲೇವಡಿ ಮಾಡಿದ್ದಾರೆ.

"ಗುಜರಾತ್ ಹೆಸರು ಕೂಡಾ ಪರ್ಶಿಯನ್ ಮೂಲದ್ದು; ಅದನ್ನು ಗುಜರಾತ್ರ ಎಂದು ಕರೆಯಲಾಗುತ್ತಿತ್ತು. ಅದನ್ನೂ ಬಿಜೆಪಿ ಬದಲಿಸಲಿ" ಎಂದು ಅಲೀಗಢ ಮುಸ್ಲಿಂ ವಿವಿಯ ಗೌರವ ಪ್ರೊಫೆಸರ್ ಆಗಿರುವ 87 ವರ್ಷದ ಹಬೀಬ್ ಸವಾಲು ಹಾಕಿದ್ದಾರೆ.

"ಬಿಜೆಪಿ ಸರ್ಕಾರದ ಹೆಸರು ಬದಲಾವಣೆಯ ಅಮಲು, ಆರೆಸ್ಸೆಸ್‍ ನ ಹಿಂದುತ್ವ ನೀತಿಗೆ ಅನುಗುಣವಾಗಿದೆ. ನೆರೆಯ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಅಲ್ಲದ್ದೆಲ್ಲವನ್ನೂ ತೆರವು ಮಾಡಿದಂತೆ ಬಿಜೆಪಿ ಹಾಗೂ ಬಲಪಂಥೀಯ ಬೆಂಬಲಿಗರು ಹಿಂದೂಯೇತರ ಹೆಸರುಗಳನ್ನು ಅದರಲ್ಲೂ ಮುಖ್ಯವಾಗಿ ಇಸ್ಲಾಮಿಕ್ ಮೂಲದ ಹೆಸರುಗಳನ್ನು ಬದಲಿಸುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್‍ಮಹಲ್ ಇರುವ ಆಗ್ರಾ ನಗರವನ್ನು ಅಗ್ರವನ ಎಂದು ಮರುನಾಮಕರಣ ಮಾಡುವಂತೆ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಇತಿಹಾಸಗಾರರ ಈ ಹೇಳಿಕೆ ಮಹತ್ವ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News