ಇಂದಿಗೂ ಐದಾರು ಭೋಪಾಲ್ ಅನಿಲ ದುರಂತ ಸಂತ್ರಸ್ತರು ಪ್ರತಿದಿನ ಸಾಯುತ್ತಿದ್ದಾರೆ

Update: 2018-11-11 09:46 GMT

ಪ್ರತಿಯೊಂದು ಕಥೆಗೂ ಒಂದು ಆರಂಭ ಇರುತ್ತದೆ; ಆದರೆ ಕೆಲವು ಕಥೆಗಳಿಗೆ ಕೊನೆ ಇಲ್ಲ. 1984 ಡಿಸೆಂಬರ್‍ನಲ್ಲಿ 10 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡ ವಿಶ್ವದ ಭೀಕರ ಕೈಗಾರಿಕಾ ದುರಂತ ಎನಿಸಿದ ಭೋಪಾಲ್ ಅನಿಲ ದುರಂತವೂ ಕೊನೆಯಿಲ್ಲದ ಕಥೆ.

ಮಧ್ಯಪ್ರದೇಶದ ರಾಜಧಾನಿಯಲ್ಲಿ ತೊಂದರೆಗೀಡಾದ ಪ್ರದೇಶದ ಪ್ರತಿ ಮನೆಯಲ್ಲಿ ಸಾವಿನ ಸರಣಿ ಮುಂದುವರಿದಿದೆ. ಪ್ರತಿ ದಿನ ಐದಾರು ಮಂದಿಯ ಜೀವವನ್ನು ಇಂದಿಗೂ ಈ ದುರಂತ ಬಲಿ ಪಡೆಯುತ್ತಲೇ ಇದೆ. ಆದರೆ ಅವರ ಆಕ್ರಂದನ ಕೇಳಿಸಿಕೊಳ್ಳುವವರು ಯಾರೂ ಇಲ್ಲ.

1984ರ ಡಿಸೆಂಬರ್ 2/3ರ ರಾತ್ರಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಎಂಬ ಕೀಟನಾಶಕ ಉತ್ಪಾದನಾ ಕಂಪನಿಯಿಂದ ಸೋರಿಕೆಯಾದ ಮಿಥೈಲ್ ಐಸೊಸೈನೇಟ್ ಅನಿಲ 10,047 ಮಂದಿಯನ್ನು ಬಲಿ ಪಡೆಯಿತು ಹಾಗೂ 5,74,000 ಮಂದಿ ಇದರಿಂದ ತೊಂದರೆಗೆ ಒಳಗಾದರು. ಇಷ್ಟಾಗಿಯೂ, ಇದು ಅಧಿಕೃತ ಅಂಕಿ ಸಂಖ್ಯೆಗಳು. ಇತರ ಅಂದಾಜಿನಂತೆ ಈ ದುರಂತ ಸಂಭವಿಸಿದ ಎರಡು ವಾರಗಳ ಅವಧಿಯಲ್ಲಿ 15 ಸಾವಿರ ಬಂದಿ ಜೀವ ಕಳೆದುಕೊಂಡಿದ್ದಾರೆ.

ಘಟನೆ ನಡೆದು 34 ವರ್ಷಗಳಲ್ಲಿ ಹಲವು ಚುನಾವಣೆಗಳು ಬಂದು ಹೋಗಿವೆ. ಮತ್ತೆ ಭೋಪಾಲ್ ಬೀದಿಗಳಲ್ಲಿ ವಿವಿಧ ಪಕ್ಷಗಳ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಡಿಸೆಂಬರ್‍ನಲ್ಲಿ ಹೊಸ ಸರ್ಕಾರವನ್ನು ಜನ ನಿರೀಕ್ಷಿಸುತ್ತಿದ್ದಾರೆ. ಆದರೂ ಯಾವ ರಾಜಕೀಯ ಪಕ್ಷವಾಗಲೀ, ಯಾವುದೇ ರಾಜಕಾರಣಿಯಾಗಲೀ, ಈ ದುರಂತವನ್ನು ಚುನಾವಣಾ ವಿಷಯವಾಗಿ ಬಿಂಬಿಸಿಲ್ಲ.

ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಖಾತೆ ಸಚಿವ ವಿಶ್ವಾಸ್ ಸಾರಂಗ್ ಸ್ವತಃ ದುರಂತದ ಸಂತ್ರಸ್ತರಾಗಿದ್ದರೂ, ಅನಿಲ ದುರಂತದಿಂದ ತೊಂದರೆಗೆ ಒಳಗಾಗಿ ಬದುಕಿ ಉಳಿದವರ ಸ್ಥಿತಿ ಸುಧಾರಿಸಲು ಯಾವ ಕ್ರಮವನ್ನೂ ಕೈಗೊಂಡಿಲ್ಲ.

ದುರಂತದಲ್ಲಿ ಉಳಿದುಕೊಂಡವರು ಅವಳಿ ಯುದ್ಧದಲ್ಲಿ ಹೋರಾಡಬೇಕಿದೆ. ಒಂದೆಡೆ ಹಲವು ಆರೋಗ್ಯ ಸಮಸ್ಯೆಗಳು ಅವರನ್ನು ಕಾಡುತ್ತಿದ್ದರೆ, ಇನ್ನೊಂದೆಡೆ ತಮ್ಮ ಪರಿಹಾರ ಮೊತ್ತಕ್ಕಾಗಿ ಮೂರು ದಶಕಗಳಿಂದ ಹೋರಾಡುತ್ತಲೇ ಬಂದಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ, ಭೋಪಾಲ್ ಅನಿಲ ಸಂತ್ರಸ್ತರು ಸೆಪ್ಟೆಂಬರ್ 18ರಂದು ಸಭೆ ನಡೆಸಿ, 5 ಲಕ್ಷ ರೂಪಾಯಿ ಪರಿಹಾರ ಧನ ದೊರಕಿಸಿಕೊಡಲು ನೆರವಾಗುವ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದರು.

ಭೋಪಾಲ್ ಗ್ರೂಪ್ ಫಾರ್ ಇನ್ ಫಾರ್ಮೇಷನ್ ಆ್ಯಂಡ್ ಆ್ಯಕ್ಷನ್, ಭೋಪಾಲ್ ಗ್ಯಾಸ್ ಪೀಡಿತ್ ನಿರಾಶ್ರಿತ್ ಪೆನ್ಷನ್ ಭೋಗಿ ಸಂಘರ್ಷ್ ಮೋರ್ಚಾ ಹಾಗೂ ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಸ್ಟೇಷನರಿ ಕರ್ಮಚಾರಿ ಸಂಘ ಅನಿಲ ಸಂತ್ರಸ್ತರ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಗುಂಪುಗಳು ಹೇಳುವಂತೆ, ಅಭ್ಯರ್ಥಿಗಳು ಈ ಸಂಬಂಧ ಭರವಸೆ ನೀಡಿದರೆ ಅದು, ಬದ್ಧತೆಯಾಗುತ್ತದೆ ಹಾಗೂ ಅದನ್ನು ಪೂರೈಸದಿದ್ದರೆ ಕಾನೂನಾತ್ಮಕ ಹೋರಾಟ ನಡೆಸಲು ಸಾಧ್ಯವಾಗುತ್ತದೆ.

"ಎಲ್ಲ ರಾಜಕೀಯ ಪಕ್ಷಗಳು ನಮಗೆ ದ್ರೋಹ ಬಗೆದಿವೆ, ನಮ್ಮದೇ ಮನೆಯಲ್ಲಿ ನಾವು ಹೊರಗಿನವರಾಗಿದ್ದೇವೆ. ನಮಗೆ ಬಿಜೆಪಿ ಕೂಡಾ ಕಾಂಗ್ರೆಸ್‍ನಂತೆಯೇ" ಎಂದು ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಉದ್ಯೋಗ್ ಸಂಘಟನೆಯ ಸಂಚಾಲಕ ಅಬ್ದುಲ್ ಜಬ್ಬಾರ್ ಹೇಳುತ್ತಾರೆ.

ವಿಶ್ವದ ಅತಿದೊಡ್ಡ ಕೈಗಾರಿಕಾ ದುರಂತವನ್ನು ನಿರ್ವಹಿಸುವಲ್ಲಿ ಅಪರಾಧಾತ್ಮಕ ನಿರ್ಲಕ್ಷ್ಯ ವಹಿಸಲಾಗಿದೆ. ಸಂತ್ರಸ್ತರಿಗೆ ಯಾವುದೇ ವೈದ್ಯಕೀಯ ನೆರವಾಗಲೀ, ಹಣಕಾಸು ಸಹಾಯವಾಗಲೀ ಇಲ್ಲ; ಅಷ್ಟು ಮಾತ್ರವಲ್ಲದೇ, ಅಂತರ್ಜಲವನ್ನು ಮಲಿನಗೊಳಿಸುತ್ತಿರುವ ವಿಷಕಾರಿ ರಾಸಾಯನಿಕಗಳನ್ನು ವಿಲೇವಾರಿ ಮಾಡುವ ಯೋಜನೆಯಾಗಲೀ ಇಲ್ಲ.

"ನಮ್ಮ ರಾಜಕಾರಣಿಗಳು ಬೆನ್ನೆಲುಬು ಇಲ್ಲದವರು. ದುರಂತ ನಡೆದು 34 ವರ್ಷ ಕಳೆದರೂ, ನಮ್ಮ ಪರವಾಗಿ ಯಾರೂ ನಿಂತಿಲ್ಲ. ಇದರ ಪರಿಣಾಮವಾಗಿ, ದುರಂತಪೀಡಿತರು ದಯನೀಯ ಬದುಕು ಸಾಗಿಸುತ್ತಿದ್ದಾರೆ. ಆದ್ದರಿಂದ ನಾವು ಈ ಬಾರಿ ನೋಟರಿ ಮೂಲಕ ಪರಿಹಾರ ಕೇಳಲು ಯೋಚಿಸಿದ್ದೇವೆ" ಎಂದು ಜಬ್ಬಾರ್ ಹೇಳುತ್ತಾರೆ.

"ರಾಜ್ಯದ 5.74 ಲಕ್ಷ ಮಂದಿ ಪ್ರತಿ ನಿಮಿಷವೂ ಸಾಯುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿ ಹೇಗೆ ನಿದ್ದೆ ಮಾಡಲು ಸಾಧ್ಯ?" ಎನ್ನುವುದು ದುರಂತದ ಪರಿಣಾಮವಾಗಿ ಗಂಟಲಲ್ಲಿ ಗಂಟು ಸಮಸ್ಯೆ ಆರಂಭವಾಗಿರುವ ಜಬ್ಬಾರ್ ಅವರ ಪ್ರಶ್ನೆ.

ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ, ಕಾಝಿ ಕ್ಯಾಂಪ್, ಡಿಐಜಿ ಮೇಲ್ಸೇತುವೆ, ಜೆಪಿನಗರ, ಶಹಾಜಹಾನ್‍ ಬಾದ್ ಮತ್ತು ಜಹಾಂಗೀರಬಾದ್ ಹೀಗೆ ಭೋಪಾಲ್ ಅನಿಲ ಸಂತ್ರಸ್ತರ ಕಾಲನಿಗಳಲ್ಲಿ ಹಲವು ಹೋರ್ಡಿಂಗ್ ಹಾಗೂ ಬ್ಯಾನರ್‍ಗಳು ತಲೆ ಎತ್ತಿವೆ.

ಒಂದು ಹೋರ್ಡಿಂಗ್‍ನಲ್ಲಿ ಐತಿಹಾಸಿಕ ವಿಕೋಪದ ಪ್ರಾತಿನಿಧಿಕ ಚಿತ್ರವಿದ್ದು, ಜತೆಗೆ, "ಜೋ ಮುವಾಝಾ ದಿಲೇಗಾ, ವೋಟ್ ವಹಿ ಲೇ ಜಾಯೇಗಾ (ಯಾರು ಪರಿಹಾರ ನೀಡುತ್ತಾರೋ ಅವರು ಮತ ಪಡೆಯುತ್ತಾರೆ) ಎಂಬ ಘೋಷಣೆ ಇದೆ. ಇದು ಎಲ್ಲ ಸಂತ್ರಸ್ತರ ಮತ್ತು ಉಳಿದವರ ಒಕ್ಕೊರಲ ಧ್ವನಿ ಎಂದೂ ಬ್ಯಾನರ್‍ನಲ್ಲಿ ಹೇಳಲಾಗಿದೆ.

"ಸರ್ಕಾರ ಹಾಗೂ ಮುಖಂಡರು ಅನಿಲ ಸಂತ್ರಸ್ತರಲ್ಲಿ ಉಳಿದುಕೊಂಡವರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಅವರಲ್ಲಿ ಯಾರೂ ಉಳಿದೇ ಇಲ್ಲ; ಅಥವಾ ಏನೂ ಸಂಭವಿಸಿಯೇ ಇಲ್ಲ ಎಂಬ ಭಾವನೆಯಿಂದ ಇದ್ದಾರೆ. ಆದ್ದರಿಂದ ಈ ಚುನಾವಣೆಯಲ್ಲಿ ನಾವು ನಮ್ಮ ಬಲ ಪ್ರದರ್ಶನಕ್ಕೆ ನಿರ್ಧರಿಸಿದ್ದೇವೆ. ಈ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಂದ ನಾವು, ನೋಟರಿ ಮಾಡಲ್ಪಟ್ಟ ಪ್ರತಿಜ್ಞಾಪತ್ರ ಬಯಸಿದ್ದೇವೆ. ಆದ್ದರಿಂದ ಇವರು ಭರವಸೆ ಈಡೇರಿಸಲು ವಿಫಲರಾದಲ್ಲಿ, ನಾವು ಕಾನೂನು ಕ್ರಮಕ್ಕೆ ಮುಂದಾಗಬಹುದು" ಎನ್ನುವುದು ದಶಕದಿಂದ ಸಂತ್ರಸ್ತರ ಪರವಾಗಿ ಹೋರಾಡುತ್ತಿರುವ ಭೋಪಾಲ್ ಗ್ರೂಪ್ ಫಾರ್ ಇನ್ ಫಾರ್ಮೇಶನ್ ಆ್ಯಂಡ್ ಆ್ಯಕ್ಷನ್ ಸಂಘಟನೆಯ ಸಂಚಾಲಕಿ ರಚನಾ ಧಿಂಗ್ರಾ ಅವರ ಅಭಿಪ್ರಾಯ.

ತಮ್ಮ ಕಾರ್ಯತಂತ್ರವನ್ನು ವಿವರಿಸಿದ ಭೋಪಾಲ್ ಅನಿಲಪೀಡಿತ ಮಹಿಳಾ ಸ್ಟೇಷನರಿ ಕರ್ಮಚಾರಿ ಸಂಘದ ನಾಯಕಿ ರಶೀದಾ ಬೀ, "ಭೋಪಾಲ್ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಿವೆ. ನರೇಲಾ ಹಾಗೂ ಭೋಪಾಲ್ ಉತ್ತರ ಕ್ಷೇತ್ರಗಳಲ್ಲಿ ಅತಿದೊಡ್ಡ ಸಂಖ್ಯೆಯ ಸಂತ್ರಸ್ತರು ಮತ್ತು ಉಳಿದವರಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಶೇಕಡ 80-90ರಷ್ಟು ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುರಂತದ ಜತೆ ಸಂಬಂಧ ಹೊಂದಿದವರು.

ಭೋಪಾಲ್ ಸೆಂಟ್ರಲ್ ಹಾಗೂ ಹುಝೂರ್‍ನಂಥ ಕ್ಷೇತ್ರಗಳಲ್ಲೂ ಗಣನೀಯ ಸಂಖ್ಯೆಯ ಸಂತ್ರಸ್ತರ ಮತ್ತು ದುರಂತದಲ್ಲಿ ಉಳಿದುಕೊಂಡವರ ಕುಟುಂಬಗಳಿವೆ. ದುರಂತದ ನಂತರದ ಪರಿಣಾಮದಿಂದ ಇವರು ನರಳುತ್ತಿದ್ದಾರೆ. ಸುಮಾರು 40 % ಸಂತ್ರಸ್ತರ ಮತಗಳು ಈ ಎರಡೂ ಕ್ಷೇತ್ರಗಳಲ್ಲಿದ್ದು, ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ಮತಗಳಿವೆ.

ಬೆರಾಸಿಯಾ ಕ್ಷೇತ್ರ ಭೋಪಾಲ್ ಜಿಲ್ಲೆಯ ಗ್ರಾಮೀಣ ವಿಸ್ತರಣೆ ಎಂದು ಪರಿಗಣಿತವಾಗಿದ್ದು, ಗೋವಿಂದಪುರ ಹಾಗೂ ಭೋಪಾಲ್ ಆಗ್ನೇಯ ಕ್ಷೇತ್ರಗಳಲ್ಲೂ ದುರಂತದ ಹಾನಿಯಿಂದಾಗಿ ವಲಸೆ ಬಂದ ಬಹಳಷ್ಟು ಸಂಖ್ಯೆಯ ಮಂದಿ ಇದ್ದಾರೆ. "ನಾವು ದುರಂತದಿಂದ ಹಾನಿಗೀಡಾದ ಎಲ್ಲ 36 ವಾರ್ಡ್‍ಗಳ ವಾರ್ಡ್ ಮಟ್ಟದ ನಾಯಕರ ಜತೆ ಸಂಪರ್ಕದಲ್ಲಿದ್ದು, ಅವರು ಮತ ಕೇಳಲು ಆಗಮಿಸುವ ವೇಳೆ, ಸಂತ್ರಸ್ತರ ಪರವಾಗಿ ಅವರು ನಾಯಕರ ಬಳಿ ಮಾತನಾಡುವಂತೆ ಒತ್ತಡ ತಂದಿದ್ದೇವೆ" ಎಂದು ರಶೀದಾ ಬೀ ವಿವರಿಸುತ್ತಾರೆ.

ಇಷ್ಟು ವರ್ಷಗಳಿಂದ ಮುಖ್ಯಮಂತ್ರಿ ಚೌಹಾಣ್ ನೀಡುತ್ತಾ ಬಂದ ಆಶ್ವಾಸನೆ ಬಗ್ಗೆ ಕೇಳಿದಾಗ, "ಮುಖ್ಯಮಂತ್ರಿ ನಿವಾಸಕ್ಕೆ ನಾವು ಲೆಕ್ಕವಿಲ್ಲದಷ್ಟು ಬಾರಿ ಹೋಗಿದ್ದೇವೆ. ನಮ್ಮ ಸಂಘಟನೆ 25 ಸಾವಿರಕ್ಕೂ ಅಧಿಕ ವೈಯಕ್ತಿಕ ಮನವಿಪತ್ರಗಳನ್ನು ಸಲ್ಲಿಸಿ, ವೈದ್ಯಕೀಯ ನೆರವು ಹಾಗೂ ಪರಿಹಾರ ಕೋರಿದ್ದೇವೆ. ಆದರೆ ಎಲ್ಲವೂ ಕಸದಬುಟ್ಟಿ ಸೇರಿವೆ" ಎಂಬ ಉತ್ತರ ಬಂತು.

ರಾಜಧಾನಿಯ ಎರಡು ಪ್ರಮುಖ ಕ್ಷೇತ್ರಗಳಾದ ಭೋಪಾಲ್ ಉತ್ತರ ಮತ್ತು ನರೇಲಾ ಕ್ಷೇತ್ರಗಳಲ್ಲಿ ದುರಂತದಿಂದ ಹಾನಿಗೀಡಾಗಿ ಉಳಿದುಕೊಂಡ ಗರಿಷ್ಠ ಸಂಖ್ಯೆಯ ಜನ ಇದ್ದಾರೆ.

ಭೋಪಾಲ್ ಉತ್ತರ ಕ್ಷೇತ್ರವನ್ನು ನಾಲ್ಕು ಬಾರಿಯ ಕಾಂಗ್ರೆಸ್ ಶಾಸಕ ಅರೀಫ್ ಅಖೀಲ್ ಪ್ರತಿನಿಧಿಸುತ್ತಿದ್ದಾರೆ. ನರೇಲಾ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವಾಸ್ ಸಾರಂಗ್ ರಾಜ್ಯದ ಸಂಪುಟ ದರ್ಜೆ ಸಚಿವ. ಇಬ್ಬರೂ ಶಾಸಕರು ಕೇಳಿದಾಗಲೆಲ್ಲ, ಸಂತ್ರಸ್ತರ ಪರಿಹಾರ ಕುರಿತ ಪ್ರಶ್ನೆಗಳಿಂದ ನುಣುಚಿಕೊಳ್ಳುತ್ತಾರೆ. ಆದರೆ ಅವರ ವೈದ್ಯಕೀಯ ಮತ್ತು ಸಾಮಾಜಿಕ ಅಗತ್ಯತೆಗಳನ್ನು ನೋಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ.

ನಾನು ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸುತ್ತಲೇ ಬಂದಿದ್ದೇನೆ; ಆದರೆ ಬಿಜೆಪಿ ಸರ್ಕಾರ ಇದಕ್ಕೆ ಸೊಪ್ಪು ಹಾಕಿಲ್ಲ ಎನ್ನುವುದು ಅಖೀಲ್ ಅವರ ಆರೋಪ. ಹಲವು ಪ್ರಯತ್ನಗಳ ಬಳಿಕವೂ, ಈ ಪ್ರದೇಶಕ್ಕೆ ಸ್ವಚ್ಛ ನೀರು ಪೂರೈಸುವ ಇಚ್ಛೆಯೂ ಸರ್ಕಾರಕ್ಕೆ ಇಲ್ಲ ಎಂದು ಆಕ್ಷೇಪಿಸುತ್ತಾರೆ.

"ಈ ಪ್ರದೇಶಗಳಿಗೆ ಸ್ವಚ್ಛ ನೀರು ಒದಗಿಸುವ ವಿಷಯವನ್ನು ನಾನು ಪ್ರಸ್ತಾವಿಸಿದ್ದೆ. ಆದರೆ ಸರ್ಕಾರದ ಮೇಲೆ ಅದು ಯಾವ ಪ್ರಭಾವವನ್ನೂ ಬೀರಿಲ್ಲ. ಅವರಿಗೆ ನನ್ನ ನಿಧಿಯಿಂದ ಕುಡಿಯಲು ಯೋಗ್ಯ ನೀರು ಒದಗಿಸಲು ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ನಾನು ಪ್ರಯತ್ನಿಸಿದ್ದೇನೆ. ಆದರೆ ಬಿಜೆಪಿ ಸರ್ಕಾರ 15 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ" ಎಂದು ಹೇಳುತ್ತಾರೆ.

ಸಚಿವ ಸಾರಂಗ್ ಹೇಳುವಂತೆ, "ಅನಿಲ ದುರಂತ ಸಂತ್ರಸ್ತರಿಗಾಗಿ ಇರುವ ಆಸ್ಪತ್ರೆಗಳಿಗೆ ನಿರಂತರವಾಗಿ ಔಷಧಿ ಪೂರೈಸಲು ಮತ್ತು ಉತ್ತಮ ವೈದ್ಯರನ್ನು ನಿಯೋಜಿಸುವ ಪ್ರಯತ್ನ ಮಾಡಿದ್ದೇನೆ. ಅಂತೆಯೇ ಇವರಿಗೆ ಉದ್ಯೋಗ ನೀಡುವ ಹಲವು ಕ್ರಮಗಳನ್ನೂ ನಮ್ಮ ಸರ್ಕಾರ ಕೈಗೊಂಡಿದೆ"

ಆದರೆ ರಯೀಸಾ ಬೀ ಹೇಳುವಂತೆ, "ಔಷಧಿಯ ಗುಣಮಟ್ಟ ತೀರಾ ಕಳಪೆ ಹಾಗೂ ಪರಿಣಾಮಕಾರಿಯಾಗಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರು ಸಾಕಷ್ಟು ಇಲ್ಲ ಹಾಗೂ ಪ್ರತಿ ತಿಂಗಳೂ ಎರಡು ವಾರ ಕಳೆದ ಬಳಿಕ ಔಷಧಿಗಳು ಸಿಗುವುದಿಲ್ಲ. ಸಂತ್ರಸ್ತರ ವೈದ್ಯಕೀಯ ತಪಾಸಣೆಗಳೂ ನಡೆಯುತ್ತಿಲ್ಲ. ಪ್ರತಿದಿನ ಐದಾರು ಮಂದಿ ಸಾಯುತ್ತಿದ್ದು, ಸಚಿವರು ಸುಳ್ಳು ಹೇಳುತ್ತಿದ್ದಾರೆ"

ದುರಾದೃಷ್ಟ ಹಾಗೂ ರಾಜಕಾರಣಿಗಳ ನಿರ್ಲಕ್ಷ್ಯದಿಂದ, ಕಳೆದ 34 ವರ್ಷಗಳಿಂದ ನ್ಯಾಯ ಕೋರಿ ಅನಿಲ ದುರಂತ ಸಂತ್ರಸ್ತರು ನ್ಯಾಯಾಲಯದ ಕಟ್ಟೆ ಏರುತ್ತಿದ್ದಾರೆ. ಆದರೆ ಪ್ರಕರಣ ಸುಪ್ರೀಂಕೋರ್ಟ್ ಮುಂದಿದೆ.

ಆದರೆ ಇಂದಿನವರೆಗೆ, ಇವರಿಗೆ ಲಭಿಸಿದ್ದು ಅಲ್ಪಸ್ವಲ್ಪ ಮಾತ್ರ. ದುರಂತದಲ್ಲಿ ಬದುಕಿ ಉಳಿದವರಿಗೆ 25 ಸಾವಿರದಿಂದ 50 ಸಾವಿರ ರೂಪಾಯಿ ಪರಿಹಾರ ಮತ್ತು 200 ರೂಪಾಯಿ ಸ್ಟೈಪೆಂಡ್. ಅದು ಕೂಡಾ ನ್ಯಾಯಾಲಯದ ಮೂಲಕ. ಏಕೆಂದರೆ ರಾಜಕಾರಣಿಗಳು ಭರವಸೆ ನೀಡುತ್ತಿದ್ದಾರೆಯೇ ವಿನಃ ಏನನ್ನೂ ಮಾಡಿಲ್ಲ.

Writer - ಕಾಶಿಫ್ ಕಾಕ್ವಿ, newsclick.in

contributor

Editor - ಕಾಶಿಫ್ ಕಾಕ್ವಿ, newsclick.in

contributor

Similar News