ಏಕದಿನ: ಆಸ್ಟ್ರೇಲಿಯ ವಿರುದ್ಧ ಗರಿಷ್ಠ ಜೊತೆಯಾಟ ನಡೆಸಿದ ಮಿಲ್ಲರ್-ಪ್ಲೆಸಿಸ್

Update: 2018-11-11 10:48 GMT

ಹೊಬರ್ಟ್, ನ.11: ದಕ್ಷಿಣ ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ಹಾಗೂ ದಾಂಡಿಗ ಡೇವಿಡ್ ಮಿಲ್ಲರ್ ಆಸ್ಟ್ರೇಲಿಯ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನದಲ್ಲಿ ನಾಲ್ಕನೇ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿದ ಸಾಧನೆ ಮಾಡಿದರು.

ಪ್ಲೆಸಿಸ್(125) ಹಾಗೂ ಮಿಲ್ಲರ್(139)ಸಾಹಸದ ನೆರವಿನಿಂದ ದಕ್ಷಿಣ ಆಫ್ರಿಕ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಗಳಿಸಿ ಆಸ್ಟ್ರೇಲಿಯ ಗೆಲುವಿಗೆ ಕಠಿಣ ಗುರಿ ನೀಡಲು ನೆರವಾದರು.

ದಕ್ಷಿಣ ಆಫ್ರಿಕ 55 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಆಸರೆಯಾದ ಡು ಪ್ಲೆಸಿಸ್ ಹಾಗೂ ಮಿಲ್ಲರ್ 4ನೇ ವಿಕೆಟ್‌ಗೆ 252 ರನ್ ಜೊತೆಯಾಟ ನಡೆಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕ ಆಟಗಾರರು ಗಳಿಸಿದ 3ನೇ ಗರಿಷ್ಠ ರನ್ ಜೊತೆಯಾಟವಾಗಿದೆ.

ಇದೇ ವೇಳೆ ಆಸ್ಟ್ರೇಲಿಯ ತಂಡ ಏಕದಿನ ಕ್ರಿಕೆಟ್‌ನಲ್ಲಿ ಎದುರಾಳಿ ಆಟಗಾರರಿಗೆ ಗರಿಷ್ಠ ರನ್ ಬಿಟ್ಟುಕೊಟ್ಟಿತು. 2003ರಲ್ಲಿ ನಡೆದ ಏಕದಿನದಲ್ಲಿ ಶ್ರೀಲಂಕಾದ ಮರ್ವನ್ ಅಟಪಟ್ಟು ಹಾಗೂ ಸನತ್ ಜಯಸೂರ್ಯ ಆಸ್ಟ್ರೇಲಿಯ ವಿರುದ್ಧ 237 ರನ್ ಸೇರಿಸಿದ್ದರು. ಪ್ಲೆಸಿಸ್ ಹಾಗೂ ಮಿಲ್ಲರ್ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ವಿಕೆಟ್‌ಗೆ ಮೂರನೇ ಗರಿಷ್ಠ ಜೊತೆಯಾಟ ನಡೆಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News