ಸಿ.ಆರ್.ಪಿ.ಎಫ್ ಗಾಯಾಳು ಯೋಧರಿಗೆ ಬಾರದ ಹೆಲಿಕಾಪ್ಟರ್ ಗಳು ಟಿವಿ ಚಾನಲ್‍ನ ಅಣಕು ಕಾರ್ಯಾಚರಣೆಗೆ ಬಂದವು !

Update: 2018-11-12 07:14 GMT

'ಇಂಡಿಯಾ ಟುಡೇ'ಯ ನಿರ್ಭೀತ ನಿರೂಪಕ ರಾಹುಲ್ ಕನ್ವಲ್ ಈ ವಾರ ಸ್ಟುಡಿಯೊ ವಾತಾವರಣದಿಂದ ಹೊರಬಂದು ಸಿ.ಆರ್.ಪಿ.ಎಫ್ ಸಿಬ್ಬಂದಿಯ ಜತೆ ದಕ್ಷಿಣ ಛತ್ತೀಸ್‍ಗಢದ ನಕ್ಸಲ್‍ ಪೀಡಿತ ಪ್ರದೇಶಗಳ ಅರಣ್ಯದಲ್ಲಿ ಹೆಜ್ಜೆ ಹಾಕಿದರು. ಪ್ರತಿ ನಡೆಯನ್ನು ಪರಿಪೂರ್ಣವಾಗಿ ಸಿನಿಮೀಯ ಮಾದರಿಯಲ್ಲಿ ಚಿತ್ರೀಕರಿಸಲಾಯಿತು. ದಟ್ಟ ಕಾಡಿನ ನಡುವೆ ವೈಮಾನಿಕ ಚಿತ್ರೀಕರಣವೂ ನಡೆಯಿತು.

ನಡುನಡುವೆ ಸಿ.ಆರ್.ಪಿ.ಎಫ್ ಕಾರ್ಯಾಚರಣೆಯ ಬಗೆಗೆ ಪ್ರಶ್ನಿಸಿ ಮಾಹಿತಿಗಳನ್ನೂ ಕಲೆಹಾಕಿದರು. ನೆಲದಲ್ಲಿ ಹುದುಗಿಸಿಟ್ಟ ನೆಲಬಾಂಬನ್ನು ಸಿಬ್ಬಂದಿ ಪತ್ತೆ ಮಾಡಿದಾಗ ಕುತೂಹಲದಿಂದ ಅದೇನೆಂದು ಕೇಳಿದರು. ಮಾವೊವಾದಿಗಳು ಸಿ.ಆರ್.ಪಿ.ಎಫ್ ಯೋಧರತ್ತ ಗುಂಡಿನ ಮಳೆಗೆರೆದಾಗಲೂ ಪ್ರಶ್ನೆ ನಿರಂತರವಾಗಿ ಸಾಗಿತ್ತು: "ನಕ್ಸಲರು ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದಾರೆಯೇ ಅಥವಾ ಮೂಲ ಶಸ್ತ್ರಾಸ್ತ್ರಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆಯೇ?" ಎಂದು ಮತ್ತೊಬ್ಬ ಅಧಿಕಾರಿಯನ್ನು ಕೇಳುತ್ತಿದ್ದರು. ಮರದ ಮರೆಯಲ್ಲಿ ನಿಂತು ಯೋಧರು ಗುಂಡಿನ ಚಕಮಕಿ ನಡೆಸುತ್ತಿದ್ದರೆ, ಯಾವ ಅಂಜಿಕೆಯೂ ಇಲ್ಲದೇ, "ಈ ದಾಳಿಯಲ್ಲಿ ನೀವು ಹೇಗೆ ಸಂಘಟಿಸಿದಿರಿ" ಎಂದು ಅಧಿಕಾರಿಯೊಬ್ಬರಿಗೆ ಪ್ರಶ್ನೆ ಎಸೆಯುತ್ತಿದ್ದರು.

ಗಾಯಗೊಂಡ ನಕ್ಸಲೀಯನೊಬ್ಬ ಕಂದಕದಲ್ಲಿ ಬಿದ್ದು, ನೋವಿನಿಂದ ನರಳುತ್ತಿದ್ದಾಗ, ಆತನನ್ನು ಸ್ಥಳಾಂತರಿಸಲು ಕಮಾಂಡೊಗಳು ನಿರ್ಧರಿಸಿದರು. ಕನ್ವಲ್ ನೆರವಿನ ಹಸ್ತ ಚಾಚಿ, ಸ್ಟ್ರೆಚರ್‍ಗೆ ಕೈಜೋಡಿಸಿದರು. ಹೆಲಿಕಾಪ್ಟರ್ ಬಂದು ಗಾಯಾಳುವನ್ನು ಹೊತ್ತೊಯ್ದಿತು.

ಈ ಹೀರೊಯಿಸಂಗೆ ಮನಸೋತ ಮುಖ್ಯಮಂತ್ರಿ ರಮಣ್ ಸಿಂಗ್, ಕನ್ವಲ್‍ಗೆ ವಿಶೇಷ ಸಂದರ್ಶನ ನೀಡಿದರು. ಮಾವೊವಾದಿಗಳನ್ನು ನಿಭಾಯಿಸಲು ತಮ್ಮ ಸರ್ಕಾರ ಹೇಗೆ ಯಶಸ್ವಿಯಾಗಿದೆ ಎಂಬ ವಿವರ ನೀಡುವ ಮೂಲಕ ಮತದಾನಕ್ಕೆ ಕೆಲವೇ ದಿನಗಳ ಮುನ್ನ ರಮಣ್ ಸಿಂಗ್ ತಮ್ಮನ್ನು ಬಿಂಬಿಸಿಕೊಳ್ಳಲು ಈ ವೇದಿಕೆ ಬಳಸಿಕೊಂಡರು.

ಸಂಘರ್ಷದ ಸಂದರ್ಭವನ್ನು ವರದಿ ಮಾಡಲು ಬಿಗಿ ಸರ್ಕಾರಿ ಭದ್ರತೆಯೊಂದಿಗೆ ಪತ್ರಕರ್ತರು ತೆರಳುವುದು ಪ್ರಶ್ನಾರ್ಹವಾದರೂ, ಪತ್ರಿಕೋದ್ಯಮ ಜಗತ್ತಿನಲ್ಲಿ ಇದು ಸಾಮಾನ್ಯವಾಗುತ್ತಿದೆ. ಅಂತೆಯೇ ಮುಖಸ್ತುತಿಯ ಸಂದರ್ಶನಗಳು ಕೂಡಾ. ಇದೆಲ್ಲವನ್ನೂ ಹೊರತುಪಡಿಸಿದರೂ, ಕನ್ವಲ್ ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟ ಏನನ್ನೂ ಮಾಡಿಲ್ಲ.

"ಪ್ರಾತಿನಿಧಿಕ ವೀಡಿಯೊ" ಮತ್ತು "ಸಿಮ್ಯುಲೇಶನ್ ಎಕ್ಸರ್‍ಸೈಜ್" ಎಂಬ ಪದಗಳು ಟಿವಿ ಪರದೆಯ ಎಡತುದಿಯಲ್ಲಿ ಕೆಲ ಹೊತ್ತು ಮಿಂಚಿದವು. ಆದರೆ ತಮ್ಮ ಇಡೀ ವೀಕ್ಷಕ ವಿವರಣೆಯಲ್ಲಿ ಕನ್ವಲ್ ಒಮ್ಮೆ ಕೂಡಾ ತಮ್ಮ ಪ್ರೇಕ್ಷಕರಿಗೆ, ಗುಂಡಿನ ಚಕಮಕಿ, ಮಾವೊವಾದಿ ಗಾಯಗೊಂಡದ್ದು ಹಾಗೂ ಸ್ಥಳಾಂತರದ ಬಗ್ಗೆ ಏನನ್ನೂ ಉಲ್ಲೇಖಿಸಲಿಲ್ಲ. ಆದರೆ ಈ ಕಾರ್ಯಾಚರಣೆ ವಾಸ್ತವ ಎಂಬ ಮಾಹಿತಿಯನ್ನು ನೀಡುವ ಎಲ್ಲ ಪ್ರಯತ್ನಗಳನ್ನೂ ಕನ್ವಲ್ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ, "ನಕ್ಸಲೀಯರ ವಿರುದ್ಧದ ಹೋರಾಟ ದೇಶದಲ್ಲಿ ಅತ್ಯಂತ ಕಠಿಣ ಕೆಲಸ" ಎಂದು ಅರಣ್ಯವನ್ನು ಪ್ರವೇಶಿಸುತ್ತಲೇ ಘೋಷಿಸಿದರು. ಅವರ ಜತೆಗೇ ಸಿಆರ್‍ಪಿಎಫ್‍ನ ಕೋಬ್ರಾ ಯುನಿಟ್ ಮಹಾ ನಿರೀಕ್ಷಕರು, "ನಕ್ಸಲ್ ವಿರುದ್ಧದ ಕಾರ್ಯಾಚರಣೆ" ಕುರಿತ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದರು. "ನಮ್ಮೊಂದಿಗೆ ಸೇರಿಕೊಳ್ಳುತ್ತೀರಾ?" ಎಂದು ನಗುವನ್ನು ಹತ್ತಿಕ್ಕಿಕೊಳ್ಳಲಾಗದ ಅವರು ಪ್ರಶ್ನಿಸಿದರು. 

"ನಾವು ಬಂದಿರುವುದೇ ಅದಕ್ಕಾಗಿ" ಎಂಬ ಸಿದ್ಧ ಉತ್ತರ ಕನ್ವಲ್ ಬಳಿ ಇತ್ತು. ಐಜಿ ನಗುತ್ತಲೇ, "ಇದು ಅಪಾಯಕಾರಿ; ಸಾಕಷ್ಟು ಮುನ್ನೆಚ್ಚರಿಕೆ ಬೇಕಾಗುತ್ತದೆ" ಎಂದು ಹೇಳಿದರು. "ನಮ್ಮ ಪ್ರೇಕ್ಷಕರಿಗೆ ನಕ್ಸಲ್ ವಿರುದ್ಧದ ಹೋರಾಟದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ತಾಜಾ ಮಾಹಿತಿ ನೀಡಲು ಬಯಸಿದ್ದೇವೆ" ಎಂದು ಕನ್ವಲ್ ಘೋಷಿಸಿದರು. "ಹಾಗಾದರೆ ಹೋಗೋಣ" ಐಜಿ ಉತ್ತರಿಸಿದರು.

ದೇಶದ ಅತಿದೊಡ್ಡ ಅರೆಸೇನಾ ಪಡೆ ತನ್ನ ಪರಿಹಾರ ಕಾರ್ಯದ ಹೆಲಿಕಾಪ್ಟರ್ ಸೇರಿದಂತೆ ಸಿಬ್ಬಂದಿ ಹಾಗೂ ಸಂಪನ್ಮೂಲವನ್ನು ಅಣಕು ಕಾರ್ಯಾಚರಣೆಗಾಗಿ ಏಕೆ ಬಳಸಬೇಕು? ಕೆಲ ವರ್ಷಗಳ ಹಿಂದೆ ಸಿಆರ್‍ಪಿಎಫ್ ಸಿಬ್ಬಂದಿ ಗಾಯಗೊಂಡಾಗ ಅವರ  ಸ್ಥಳಾಂತರಕ್ಕೆ ಕೂಡಾ ಹೆಲಿಕಾಪ್ಟರ್ ಗಳು ಸಿಗಲಿಲ್ಲ. ಆದರೆ ಈ ಶೋ ಸಾಧಿಸಿದ್ದು ಏನೆಂದರೆ, ಛತ್ತೀಸ್‍ಗಢದಲ್ಲಿ ಭದ್ರತಾ ಪಡೆಗಳು ಎದುರಿಸುವ ಸವಾಲನ್ನು ಮತ್ತು ಸಂಘರ್ಷದ ಸಂಕೀರ್ಣತೆಯನ್ನು ಬಿಂಬಿಸಿದ್ದು ಮಾತ್ರ.

ಇನ್ನೂ ಬೇಸರದ ಸಂಗತಿಯೆಂದರೆ, ಸರ್ಕಾರಗಳು ತಮ್ಮನ್ನು ಬಿಂಬಿಸಿಕೊಳ್ಳಲು ಮುಂದಾಗಿರುವುದು. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, 2019ರ ಲೋಕಸಭಾ ಚುನಾವಣೆಗೆ ಮುನ್ನ ಛತ್ತೀಸ್‍ಗಢದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಯಸಿದೆ. ಇಲ್ಲಿ ಪ್ರಶ್ನೆ ಎಂದರೆ, ತನಿಖಾ ಪತ್ರಕರ್ತನೆಂದು ಹೇಳಿಕೊಳ್ಳುವ ಪತ್ರಕರ್ತ ಈ ಬಂಧದಲ್ಲಿ ಏಕೆ ಸಿಲುಕಿಕೊಳ್ಳಬೇಕು?

ಕೆಲ ದಿನಗಳ ಹಿಂದೆ ಭದ್ರತಾ ಪಡೆಯ ಸಿಬ್ಬಂದಿಯ ಜತೆ ಬೈಕ್‍ನಲ್ಲಿ ದೂರದರ್ಶನ ಪತ್ರಕರ್ತ ಹೋಗುತ್ತಿದ್ದಾಗ, ನಕ್ಸಲರು ಬೈಕ್‍ನತ್ತ ಗುಂಡು ಹಾಕಿದ್ದು, ಪತ್ರಕರ್ತ ಸ್ಥಳದಲ್ಲೇ ಅಸು ನೀಗಿದ್ದರು. ಮತ್ತೆ ಭಾರತೀಯ ಪತ್ರಿಕೋದ್ಯಮಕ್ಕೆ ಇಂಥ ಅಣಕು ಕಾರ್ಯಾಚರಣೆ ಬೇಕಿರಲಿಲ್ಲ. scroll.in ಈ ಶೋ ಬಗ್ಗೆ ಕನ್ವಲ್‍ಗೆ ಇ-ಮೇಲ್ ಮೂಲಕ ಪ್ರಶ್ನೆಗಳನ್ನು ಕಳುಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ಕೃಪೆ : scroll.in

Writer - ಸುಪ್ರಿಯಾ ಶರ್ಮಾ

contributor

Editor - ಸುಪ್ರಿಯಾ ಶರ್ಮಾ

contributor

Similar News