ಏಕದಿನ: ಒಂದೇ ಎಸೆತದಲ್ಲಿ ಐದು ರನ್ ಗಳಿಸಿದ ಪಾಕ್

Update: 2018-11-12 08:19 GMT

 ದುಬೈ, ನ.12: ಪಾಕಿಸ್ತಾನ ಹಾಗೂ ನ್ಯೂಝಿಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಮಳೆಗಾಹುತಿಯಾಗಿದೆ. ಪಾಕ್ ಇನಿಂಗ್ಸ್‌ನ ವೇಳೆ ಕಿವೀಸ್ ಫೀಲ್ಡರ್‌ಗಳು ಕೇವಲ ಒಂದು ಎಸೆತದಲ್ಲಿ ಐದು ರನ್ ಬಿಟ್ಟುಕೊಟ್ಟು ಎಡವಟ್ಟು ಮಾಡಿದ್ದಾರೆ. ಕಿವೀಸ್ ಆಟಗಾರರ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದೆ.

 ಪಾಕಿಸ್ತಾನ ಇನಿಂಗ್ಸ್‌ನ 49ನೇ ಓವರ್‌ನಲ್ಲಿ ಫಹೀಮ್ ಅಶ್ರಫ್ ಹಾಗೂ ಆಸಿಫ್ ಅಲಿ ಕ್ರೀಸ್‌ನಲ್ಲಿದ್ದರು. ಅಶ್ರಫ್ ಅವರು ವೇಗದ ಬೌಲರ್ ಟ್ರೆಂಟ್ ಬ್ರಿಡ್ಜ್ ಎಸೆತವನ್ನು ಡೀಪ್ ಸ್ಕ್ವಾರ್‌ಲೆಗ್‌ನತ್ತ ತಳ್ಳಿ ಮೂರು ರನ್ ಗಳಿಸುವ ಪ್ರಯತ್ನಕ್ಕೆ ಕೈಹಾಕಿದರು. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ನಿರತ ಆಟಗಾರ ವಿಕೆಟ್‌ಕೀಪರ್ ಟಾಮ್ ಲಥಾಮ್‌ರತ್ತ ಚೆಂಡು ಎಸೆದರು. ಲಥಾಮ್ ಬೌಲಿಂಗ್ ತುದಿಯತ್ತ ಚೆಂಡನ್ನು ಬೇಕಾಬಿಟ್ಟಿ ಬಿಸಾಡಿದ ಕಾರಣ ಚೆಂಡು ಲಾಂಗ್-ಆಫ್‌ನತ್ತ ಓಡಿತು. ಡೀಪ್‌ನಿಂದ ಆಟಗಾರ ನೀಡಿದ ಚೆಂಡನ್ನು ಪಡೆಯಲು ಟಾಮ್ ಮತ್ತೆ ವಿಫಲವಾದ ಕಾರಣ ಪಾಕಿಸ್ತಾನ ಆಟಗಾರರು ಐದು ರನ್ ಪೂರೈಸಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ 8 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತ್ತು. ನ್ಯೂಝಿಲೆಂಡ್ 6.5 ಓವರ್‌ಗಳಲ್ಲಿ 1 ವಿಕೆಟ್‌ಗೆ 35 ರನ್ ಗಳಿಸಿದ್ದಾಗ ಮಳೆ ಆಗಮಿಸಿ ಪಂದ್ಯಕ್ಕೆ ಅಡ್ಡಿಪಡಿಸಿತು.

 ಪಾಕ್ ತಂಡ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ ಕಾರಣ ಕಿವೀಸ್ ವಿರುದ್ಧ ದೀರ್ಘ ಸಮಯದ ಬಳಿಕ ಸರಣಿ ಜಯಿಸುವ ವಿಶ್ವಾಸದಲ್ಲಿತ್ತು. ಆದರೆ, ಪಂದ್ಯ ಮಳೆಗಾಹುತಿಯಾದ ಕಾರಣ ಟ್ರೋಫಿಯನ್ನು ಉಭಯ ತಂಡಗಳು ಹಂಚಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News