ಬಾಂಗ್ಲಾದ ಏಕದಿನ ಕ್ರಿಕೆಟ್ ಕಪ್ತಾನ ಮಶ್ರಾಫೆ ಮೊರ್ತಝ ಚುನಾವಣಾ ಅಖಾಡಕ್ಕೆ

Update: 2018-11-12 12:28 GMT

ಢಾಕಾ,ನ.12 : ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ತಂಡದ  ನಾಯಕ ಮಶ್ರಾಫೆ ಮೊರ್ತಝಾ ಸ್ಪರ್ಧಿಸಲಿದ್ದಾರೆಂದು ದೇಶದ ಆಡಳಿತ ಪಕ್ಷ ಆವಾಮಿ ಲೀಗ್ ಘೋಷಿಸಿದೆ. ಪ್ರಧಾನಿ ಶೇಖ್ ಹಸೀನಾ ಅವರು ಮಶ್ರಫೆ ಸ್ಪರ್ಧೆಗೆ ಹಸಿರು ನಿಶಾನೆ ನೀಡಿದ ನಂತರ ಈ ಘೋಷಣೆ ಮಾಡಲಾಗಿದೆ.

ಮೂವತ್ತೈದು ವರ್ಷದ ಮಶ್ರಾಫೆ ಅವರು ಪ್ರಧಾನಿ ಹಸೀನಾ ಜತೆಗಿರುವ ಫೋಟೋ ದೇಶದ ಹಲವು ದೈನಿಕಗಳ ಮುಖಪುಟದಲ್ಲಿ ಇಂದು ರಾರಾಜಿಸಿವೆ. ದೇಶದಲ್ಲಿ ಸತತ ಮೂರನೇ ಬಾರಿ ಆಡಳಿತ ಚುಕ್ಕಾಣಿ ಹಿಡಿಯುವ ಆಶಾವಾದದೊಂದಿಗೆ ಹಸೀನಾ ಅವರ ಆವಾಮಿ ಲೀಗ್ ಡಿಸೆಂಬರ್ 31ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿದೆ.

ಮಶ್ರಾಫೆ ಅವರು ಪಶ್ಚಿಮ ಬಾಂಗ್ಲಾದೇಶದಲ್ಲಿರುವ ತಮ್ಮ ತವರೂರು  ನರೈಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂದು ಪಕ್ಷದ ವಕ್ತಾರ ಮಹಬುಬುಲ್ ಅಲಮ್ ಹನೀಫ್ ಹೇಳಿದ್ದಾರೆ. ಆದರೆ ಮಶ್ರಫೆ ಮಾತ್ರ ಇಲ್ಲಿಯ ತನಕ ತಾವು ಚುನಾವಣೆ ಸ್ಫರ್ಧಿಸುವ ಬಗೆ ಏನನ್ನು ಹೇಳಿಲ್ಲ.

ಸಕ್ರಿಯ ಆಟಗಾರರು ರಾಜಕೀಯ ಪ್ರವೇಶಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಚುನಾವಣೆ ಸ್ಪರ್ಧಿಸುವುದು ಅವರ ಸಂವಿಧಾನದತ್ತ ಹಕ್ಕು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಕ್ತಾರ ಜಲಾಲ್ ಯೂನುಸ್ ಹೇಳಿದ್ದಾರೆ. ಅವರು ರಾಜಕೀಯ ಮತ್ತು ತಮ್ಮ ಕ್ರಿಕೆಟ್  ವೃತ್ತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವರೆಂದು ನಂಬಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ವರ್ಷದ ವಿಶ್ವ ಕಪ್ ಪಂದ್ಯಾವಳಿ ನಂತರ ಮಶ್ರಾಫೆ ಅವರು ಕ್ರಿಕೆಟ್ ರಂಗದಿಂದ ನಿವೃತ್ತರಾಗಲಿದ್ದಾರೆಂದು ತಿಳಿಯಲಾಗಿದೆ. ಅವರು ಈಗಾಗಲೇ ಟಿ20 ಪಂದ್ಯಾವಳಿಗಳಿಂದ ನಿವೃತ್ತರಾಗಿದ್ದು 2009ರಿಂದ ಟೆಸ್ಟ್ ಪಂದ್ಯ ಕೂಡ ಆಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News