‘‘ನೀವು ಗೆದ್ದಿರಿ,ನಾನು ಸೋತೆ ’’: ಇವು ಮುಂಬೈ ಪೊಲೀಸ್‌ನ ಮುಖ್ಯ ತನಿಖಾಧಿಕಾರಿಗೆ ಕಸಬ್‌ನ ಕೊನೆಯ ಮಾತುಗಳು

Update: 2018-11-12 13:09 GMT

‘‘ಆಪ್ ಜೀತ್ ಗಯೆ,ಮೈ ಹಾರ್ ಗಯಾ(ನೀವು ಗೆದ್ದಿರಿ,ನಾನು ಸೋತೆ)’’ ಇವು ಮುಂಬೈ ದಾಳಿಯ ಲಷ್ಕರ್-ಎ-ತೈಬಾದ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಮುಂಬೈನ ಸೀನಿಯರ್ ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ ಮಹಾಲೆ ಅವರೊಂದಿಗೆ ಆಡಿದ್ದ ಕೊನೆಯ ಮಾತುಗಳಾಗಿದ್ದವು.

 ಭಾರತದ ವಿರುದ್ಧ ಯುದ್ಧ ಸಾರಿದ್ದು ಸೇರಿದಂತೆ 80 ಅಪರಾಧಗಳನ್ನೆಸಗಿದ್ದಕ್ಕಾಗಿ 2012,ನವಂಬರ್‌ನಲ್ಲಿ ಕಸಬ್‌ನನ್ನು ಗಲ್ಲಿಗೇರಿಸುವ ಒಂದು ದಿನ ಮೊದಲು ಆತ ತನ್ನ ಸೋಲನ್ನು ಒಪ್ಪಿಕೊಂಡಿದ್ದ. 2008,ನ.26ರಂದು ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟ ಬಳಿಕ ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಮಹಾಲೆ ಕಸಬ್‌ಗೆ ಮೊದಲ ಪ್ರಶ್ನೆ ಕೇಳಿದಾಗಿನಿಂದ ಆರಂಭಗೊಂಡಿದ್ದ ಅನಿವಾರ್ಯ ನಂಟು ಅಂದಿಗೆ ಅಂತ್ಯಗೊಂಡಿತ್ತು.

ಈಗ ಸೇವೆಯಿಂದ ನಿವೃತ್ತಗೊಂಡಿರುವ ಮಹಾಲೆ 2008ರಲ್ಲಿ ಮುಂಬೈ ಕ್ರೈಂ ಬ್ರಾಂಚ್ ಯುನಿಟ್ 1ರ ಮುಖ್ಯಸ್ಥರಾಗಿದ್ದು,26/11ರ ಮುಂಬೈ ದಾಳಿಗ ಮುಖ್ಯ ತನಿಖಾಧಿಕಾರಿಯಾಗಿದ್ದರು. ಆರ್ಥರ್ ರೋಡ್ ಜೈಲಿನಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ಗುಂಡು ನಿರೋಧಕ,ಅತ್ಯಂತ ಬಿಗಿಭದ್ರತೆಯ ಸೆಲ್‌ಗೆ ಸ್ಥಳಾಂತರಗೊಳ್ಳುವ ಮುನ್ನ 81 ದಿನಗಳ ಕಾಲ ಕಸಬ್ ಕ್ರೈಂ ಬ್ರಾಂಚ್‌ನ ಕಸ್ಟಡಿಯಲ್ಲಿದ್ದ. ‘‘ ನ್ಯಾಯಾಲಯವು ಹೊರಡಿಸಿದ್ದ ಡೆತ್ ವಾರಂಟ್‌ನ್ನು ಕಸಬ್ ಕೈಗೆ ನೀಡುವವರೆಗೂ ಭಾರತೀಯ ಕಾನೂನುಗಳಿಂದ ತಾನು ಪಾರಾಗುತ್ತೇನೆ ಎಂದು ಆತ ಬಲವಾಗಿ ನಂಬಿಕೊಂಡಿದ್ದ’’ ಎಂದು 2013ರಲ್ಲಿ ಸೇವೆಯಿಂದ ನಿವೃತ್ತಗೊಂಡ ಮಹಾಲೆ ಹೇಳಿದರು.

  ಕಸಬ್ ಬಗ್ಗೆ ಮಹಾಲೆ ಆಸಕ್ತಿಯನ್ನು ಹೊಂದಿದ್ದರು. ಕಠಿಣ ವಿಚಾರಣಾ ಪದ್ಧತಿಗಳಿಂದ ಆತನ ಬಾಯಿ ಬಿಡಿಸಲು ಸಾಧ್ಯವಿಲ್ಲ ಎನ್ನುವುದನ್ನು ಅವರು ಬಹುಬೇಗನೆ ಅರಿತುಕೊಂಡಿದ್ದರು. ‘‘ತಾನಿಲ್ಲಿ ಆರಾಮವಾಗಿದ್ದೇನೆ ಎಂಬ ಭಾವನೆಯನ್ನು ನಾವು ಕಸಬ್‌ನಲ್ಲಿ ಮೂಡಿಸಿದ್ದೆವು ಮತ್ತು ಆತ ತಾನಾಗಿಯೇ ಬಾಯಿ ಬಿಡುವವರೆಗೆ ಕಾದಿದ್ದೆವು ’’ ಎಂದು ಅವರು ನೆನಪಿಸಿಕೊಂಡರು. ಕಸಬ್‌ನ ವಿಶ್ವಾಸ ಗೆಲ್ಲಲು ಮಹಾಲೆ ಆತನಿಗೆ ಎರಡು ಉಡುಪುಗಳ ನೀಡಿಕೆ ಸೇರಿದಂತೆ ಕೆಲವು ಸಣ್ಣಪುಟ್ಟ ಕರುಣೆಗಳನ್ನು ಆಗಾಗ್ಗೆ ತೋರಿಸುತ್ತಲೇ ಇದ್ದರು.

ಒಂದೂವರೆ ತಿಂಗಳು ಕಸ್ಟಡಿಯಲ್ಲಿ ಕಳೆದ ಬಳಿಕ ಅದೊಂದು ದಿನ ಮಹಾಲೆಯವರಿಗೆ ಅನಿರೀಕ್ಷಿತವಾಗಿ ಕಸಬ್‌ನ ಚಿಂತನಾ ಕ್ರಮದ ಒಳನೋಟ ಕಂಡಿತ್ತು. ‘‘ ನಾನು ಆತನೊಂದಿಗೆ ಮಾತಿನಲ್ಲಿ ತೊಡಗಿದ್ದೆ. ತನ್ನ ಅಪರಾಧಕ್ಕಾಗಿ ತನ್ನನ್ನು ಗಲ್ಲಿಗೇರಿಸಬಹುದಾದರೂ ಮರಣದಂಡನೆಯ ಬಗ್ಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಒಲವು ಹೊಂದಿಲ್ಲವಾದ್ದರಿಂದ ಅದು ಸಂಭವಿಸುವುದಿಲ್ಲ ಎಂದು ಕಸಬ್ ಆಗ ಹೇಳಿದ್ದ’’ ಎಂದರು ಮಹಾಲೆ. ಸಂಸತ್ ದಾಳಿಯ ಅಪರಾಧಿ ಅಫ್ಝಲ್ ಗುರುವಿನ ನಿದರ್ಶನ ನೀಡಿದ್ದ ಕಸಬ್,ಭಾರತೀಯ ನ್ಯಾಯಾಲಯಗಳು ಆತನಿಗೆ ಮರಣದಂಡನೆಯನ್ನು ಘೋಷಿಸಿ ಎಂಟು ವರ್ಷಗಳು ಕಳೆದಿದ್ದರೂ ಆತನನ್ನು ಇನ್ನೂ ಗಲ್ಲಿಗೇರಿಸಲಾಗಿಲ್ಲ ಎಂದು ಬೆಟ್ಟು ಮಾಡಿದ್ದ. ಅಂದು ಮಹಾಲೆ ಹೆಚ್ಚು ಮಾತನಾಡದೇ ಸುಮ್ಮನಿದ್ದರು.

   ಹಲವಾರು ಸಂದರ್ಭಗಳಲ್ಲಿ ಕಸಬ್ ತನಿಖಾಧಿಕಾರಿಗಳನ್ನು ಅಚ್ಚರಿಗೆ ತಳ್ಳುತ್ತಲೇ ಇದ್ದ. ವಿಚಾರಣೆಯ ಅಂತ್ಯ ಸಮೀಪಿಸಿದ್ದಾಗ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸುವಂತೆ ಆತನಿಗೆ ಸೂಚಿಸಲಾಗಿತ್ತು. ತಾನು ಪಾಕಿಸ್ತಾನಿ ಪ್ರಜೆಯಾಗಿದ್ದು,ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ರ ದರ್ಶನ ಪಡೆಯಲು ಕಾನೂನುಬದ್ಧ ವೀಸಾದೊಂದಿಗೆ ಮುಂಬೈಗೆ ಬಂದಿದ್ದೇನೆ ಎಂದಾತ ನ್ಯಾಯಾಲಯಕ್ಕೆ ತಿಳಿಸಿದ್ದ. ತಾನು ಜುಹುಲ್ಲಿರುವ ಬಚ್ಚನ್ ಬಂಗಲೆಯ ಹೊರಗೆ ನಿಂತುಕೊಂಡಿದ್ದಾಗ ರಾ ಅಧಿಕಾರಿಗಳು ತನ್ನನ್ನು ವಶಕ್ಕೆ ತೆಗೆದುಕೊಂಡು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದರು. ಪೊಲೀಸರು ತನ್ನನ್ನು ಲಾಕಪ್‌ಗೆ ತಳ್ಳುವ ಮುನ್ನ ತನ್ನ ಕೈಗೆ ಗುಂಡು ಹಾರಿಸಿದ್ದರು. ನಾಲ್ಕು ದಿನಗಳ ಬಳಿಕ ಅವರು ತನ್ನನ್ನು 26/11 ಪ್ರಕರಣದಲ್ಲಿ ಫಿಕ್ಸ್ ಮಾಡಿದ್ದರು ಎಂದು ಕಸಬ್ ಹೇಳಿಕೊಂಡಿದ್ದ ಎಂದು ಮಹಾಲೆ ತಿಳಿಸಿದರು.

ಈ ವೇಳೆಗಾಗಲೇ ಕಸಬ್ ವಿಚಾರಣೆಯನ್ನು ನಡೆಸಿದ್ದ ಮಹಾಲೆಯವರಿಗೆ ಆತನ ಇಂತಹ ದಿಕ್ಕು ತಪ್ಪಿಸುವ ಹೇಳಿಕೆಗಳು ಅಭ್ಯಾಸವಾಗಿಬಿಟ್ಟಿದ್ದವು. ‘‘ನಮ್ಮ ಪ್ರಶ್ನೆಗಳಿಗೆ ಆತ ಎಂದೂ ನೇರವಾದ ಉತ್ತರಗಳನ್ನು ನೀಡಿರಲಿಲ್ಲ’’ ಎಂದು ಮಹಾಲೆ ತಿಳಿಸಿದರು.

 2012,ನ.11ರಂದು ವಿಶೇಷ ನ್ಯಾಯಾಲಯವು ಕಸಬ್ ವಿರುದ್ಧ ಡೆತ್ ವಾರಂಟ್ ಹೊರಡಿಸಿತ್ತು ಮತ್ತು ನ.21ರಂದು ಪುಣೆಯ ಯೆರವಾಡಾ ಜೂಲಿನಲ್ಲಿ ಆತನನ್ನು ಗಲ್ಲಿಗೇರಿಸಬೇಕಿತ್ತು. ಆಗಿನ ಮುಂಬೈ ಪೊಲೀಸ್ ಆಯುಕ್ತ ಡಾ.ಸತ್ಯಪಾಲ ಸಿಂಗ್ ಅವರು ಖುದ್ದಾಗಿ ಆಸಕ್ತಿ ವಹಿಸಿ ಮಹಾಲೆಯವರನ್ನು ಕಸಬ್‌ನನ್ನು ಪುಣೆಗೆ ಸಾಗಿಸುವ ವಿಶೇಷ ತಂಡಕ್ಕೆ ಸೇರ್ಪಡೆಗೊಳಿಸಿದ್ದರು.

ನ.19ರಂದು ಮಧ್ಯರಾತ್ರಿ ಕಸಬ್‌ನನ್ನು ಆತನ ಸೆಲ್‌ನಿಂದ ಕರೆತರಲು ಮಹಾಲೆ ತೆರಳಿದ್ದರು. ತಾನು ಮರಣ ದಂಡನೆಯಿಂದ ಪಾರಾಗುತ್ತೇನೆ ಎಂದು ಕಸಬ್ ಗಟ್ಟಿ ನಂಬಿಕೆಯನ್ನು ಹೊಂದಿದ್ದ ಎನ್ನುವುದನ್ನು ಆತನಿಗೆ ನೆನಪಿಸಲು ಈ ಘಳಿಗೆಯನ್ನು ಮಹಾಲೆ ಆಯ್ಕೆ ಮಾಡಿಕೊಂಡಿದ್ದರು. ‘‘ನೆನಪಿದೆಯೇ? ನಾಲ್ಕು ವರ್ಷಗಳೂ ಪೂರ್ಣಗೊಂಡಿಲ್ಲ,ಇನ್ನೂ ಏಳು ದಿನಗಳು ಬಾಕಿಯಿವೆ’’ ಎಂದು ಮಹಾಲೆ ಪ್ರಶ್ನಿಸಿದಾಗ,‘‘ನೀವು ಗೆದ್ದಿರಿ,ನಾನು ಸೋತೆ’’ ಎಂದು ಆತ ಉತ್ತರಿಸಿದ್ದ. ಮೂರುವರೆ ಗಂಟೆಗಳ ಪುಣೆ ಪ್ರಯಾಣದುದ್ದಕ್ಕೂ ಒಂದೇ ಒಂದು ಶಬ್ದವನ್ನು ಆತ ಉಸುರಿರಲಿಲ್ಲ. ಆತನಲ್ಲಿ ತಾನು ಗಲ್ಲಿಗೇರುವುದಿಲ್ಲ ಎಂಬ ಆತ್ಮವಿಶ್ವಾಸದ ಬದಲು ಸಾವಿನ ಭೀತಿ ತುಂಬಿಕೊಂಡಿತ್ತು ಎಂದು ಮಹಾಲೆ ಹೇಳಿದರು.

ನ.21ರ ಬೆಳಗನ್ನು ನೆನೆಸಿಕೊಂಡ ಮಹಾಲೆ,ಕಸಬ್‌ನ ಸಾವಿನ ಸುದ್ದಿ ತಿಳಿದಾಗ ಅದು ‘‘ನನ್ನ ಜೀವನದಲ್ಲಿಯ ಅತ್ಯಂತ ಆನಂದದ ಘಳಿಗೆಗಳಲ್ಲೊಂದಾಗಿತ್ತು. ನ್ಯಾಯ ದೊರಕಿತ್ತು ಮತ್ತು ದುಷ್ಟಶಕ್ತಿ ಸತ್ತಿತ್ತು ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News