ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ವೀರಗಲ್ಲು ಶೀಘ್ರವೇ ಸ್ಥಳಾಂತರ: ಡಾ.ಜಿ.ಪರಮೇಶ್ವರ್

Update: 2018-11-12 14:15 GMT

ಬೆಂಗಳೂರು, ನ.12: ರಾಷ್ಟ್ರೀಯ ಮಿಲಿಟರಿ ಸ್ಮಾರಕಕ್ಕೆ ಶೀಘ್ರವೇ ವೀರಗಲ್ಲು ಸ್ಥಳಾಂತರಿಸುವ ಕೆಲಸವನ್ನು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ವೀರಯೋಧರ ಸ್ಮರಣಾರ್ಥವಾಗಿ ಸೋಮವಾರ ನಗರದಲ್ಲಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಪುಷ್ಪಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಚೀನಾ ಹಾಗೂ ಪಾಕಿಸ್ತಾನದ ಗಡಿ ಕಾಯುವ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ್ದಾರೆ. ಅವರನ್ನು ಪ್ರತಿ ವರ್ಷ ಸ್ಮರಿಸಲೆಂದೇ ನಗರದಲ್ಲಿ ಸ್ಮಾರಕ ಉದ್ಯಾನವನ ನಿರ್ಮಿಸಿದ್ದೇವೆ. ಈ ಮೂಲಕ ಅವರಿಗೆ ಪ್ರತಿ ವರ್ಷ ಗೌರವ ಸಲ್ಲಿಸಬೇಕು ಎಂದು ಪರಮೇಶ್ವರ್ ತಿಳಿಸಿದರು. ಈ ಸ್ಮಾರಕ ಉದ್ಯಾನವನಕ್ಕಾಗಿ 1 ಕೋಟಿ ರೂ. ವೆಚ್ಚ ಮಾಡಿದ್ದು ಇದರ ನಿರ್ವಹಣೆಗೂ ಪ್ರತಿ ವರ್ಷ ಹಣ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಎನ್‌ಡಬ್ಲುಎನ್‌ಗೆ ಪ್ರತಿ ವರ್ಷ 57 ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಿದ್ದೇವೆ ಎಂದು ಅವರು ಹೇಳಿದರು.

ನಾವಿಬ್ಬರೂ ಆತ್ಮೀಯ ಸ್ನೇಹಿತರು: ಕೇಂದ್ರ ಸಚಿವ ಅನಂತಕುಮಾರ್ ನಿಧನ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಬಿಜೆಪಿ ಪಕ್ಷದಲ್ಲಿದ್ದರೂ ನನಗೆ ಉತ್ತಮ ಸ್ನೇಹಿತರಾಗಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ದುಃಖತರಿಸಿದೆ ಎಂದರು.

ಅನಂತಕುಮಾರ್ ನನಗೆ ಅತ್ಯಂತ ಆತ್ಮೀಯರು. ಆರು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಪಕ್ಷಾತೀತವಾಗಿ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರೊಬ್ಬ ಸಜ್ಜನ ರಾಜಕಾರಣಿಯಾಗಿದ್ದರು. ರಾಜಕೀಯ ಸಿದ್ಧಾಂತ ಬೇರೆಯೇ ಇದ್ದರೂ ಸಾರ್ವಜನಿಕ ಬದುಕಿನಲ್ಲಿ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು. ಬಹುಶಃ ಅವರ ಆರೋಗ್ಯದ ಬಗ್ಗೆ ಮೊದಲೇ ತಿಳಿದಿದ್ದರೆ ಇಂಥ ಅನಾಹುತವಾಗುತ್ತಿರಲಿಲ್ಲ. ಇತ್ತೀಚೆಗೆ ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಇಬ್ಬರು ಅಕ್ಕ ಪಕ್ಕ ಕುಳಿತಿದ್ದೆವು. ಆಗಲೂ ಅವರು ಆರೋಗ್ಯವಂತರಾಗಿಯೇ ಕಂಡರು. ಅವರ ಕೆಲಸವನ್ನು ಪಕ್ಷಾತೀತವಾಗಿ ಎಲ್ಲರೂ ಸ್ಮರಿಸುವಂಥದ್ದು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಅವರು ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News