ನಾಡಿಗೀತೆ ಅವಧಿ ಕಡಿತ ವಿಚಾರ: ನ.14ರ ಸಭೆಗೆ 50 ಜನ ಗಣ್ಯರಿಗೆ ಆಹ್ವಾನ

Update: 2018-11-12 14:22 GMT

ಬೆಂಗಳೂರು, ನ.12: ಹಲವಾರು ದಿನಗಳಿಂದ ಚರ್ಚೆಯಲ್ಲಿರುವ ನಾಡಗೀತೆ ಸಮಯ ಹಾಗೂ ಮತ್ತಿತರೆ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನ.14 ರಂದು ಸಭೆ ಆಯೋಜನೆ ಮಾಡಿದ್ದು, ಸಭೆಗೆ 50 ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯನ್ನು ಕೆಲವು ಸಂಗೀತಗಾರರು ಆಲಾಪ, ಪುನರಾವರ್ತನೆ ಸೇರಿ 7-8 ನಿಮಿಷ ಹಾಡುವುದರಿಂದ ಆರೊಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ನಿಲ್ಲಲು ಕಷ್ಟ ಆಗುತ್ತದೆ. ಹೀಗಾಗಿ ಎರಡರಿಂದ ಎರಡೂವರೆ ನಿಮಿಷದಲ್ಲಿ ಹಾಡಿ ಮುಗಿಸುವಂತಾಗಲು ಈ ಸಭೆ ನಡೆಸಲಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದ್ದಾರೆ.

ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವಥ್ ಅವರ ಧಾಟಿಯಲ್ಲಿರಲಿ ಎಂದು ಹಲವರು ವಾದ-ಪ್ರತಿವಾದಗಳನ್ನು ಮುಂದಿಡುತ್ತಿದ್ದಾರೆ. ಆದರೆ, ಸದ್ಯದ ಸ್ಥಿತಿಯಲ್ಲಿ ಕಡಿಮೆ ಅವಧಿಯಲ್ಲಿ ಗೀತೆಯನ್ನು ಹಾಡುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಹಾಡುವ ಸಲುವಾಗಿ ಐದು ಜನ ಗಾಯಕಿಯರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ನಾಡಿನ ಸಾಹಿತಿಗಳು, ವಿದ್ವಾಂಸರು, ಗಾಯಕರು ಸಭೆಗೆ ಆಗಮಿಸಲಿದ್ದಾರೆ. ಈ ಸಭೆಯಲ್ಲಿ ಎಲ್ಲರೂ ಒಪ್ಪಿದರೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದು ಮನು ಬಳಿಗಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News