ಕ್ರಿಮಿನಲ್‌ಗಳ ಜಾಮೀನಿಗೆ ಅಮಾಯಕ ರೈತರ ಜಮೀನು ದುರ್ಬಳಕೆ

Update: 2018-11-12 14:32 GMT

ಬೆಂಗಳೂರು, ನ.12: ಕ್ರಿಮಿನಲ್‌ಗಳಿಗೆ ಜಾಮೀನು ಕೊಡಿಸಲು ಅಮಾಯಕ ರೈತರ ಜಮೀನನ್ನು ಕೋರ್ಟ್‌ಗೆ ಭದ್ರತೆ(ಶ್ಯೂರಿಟಿ) ನೀಡುತ್ತಿರುವ ಜಾಲ ನಗರದಲ್ಲಿ ಅಸ್ತಿತ್ವದಲ್ಲಿದೆ ಎಂಬ ಅಂಶ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ನೆಲಮಂಗಲದ ಹೆಗ್ಗಡದೇವನಪುರ ರೈತನೊಬ್ಬನ ಜಮೀನನ್ನು ಇಂತಹ ಜಾಲ ಸಿಟಿ ಸಿವಿಲ್ ಕೋರ್ಟ್‌ಗಳಲ್ಲಿ ಕ್ರಿಮಿನಲ್ ಒಬ್ಬನಿಗೆ ಜಾಮೀನು ಕೊಡಿಸಲು ಬಳಸಿಕೊಂಡಿರುವುದು ಸ್ಪಷ್ಟವಾಗಿದ್ದು, ಜಾಲದಲ್ಲಿರುವ ವಂಚಕನೊಬ್ಬನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. 

ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಿರುಸಿನ ತನಿಖೆಗೆ ಇಳಿದಿದ್ದಾರೆ. ಕಳೆದ ಅಕ್ಟೋಬರ್ 4ರಂದು ಬೆಳಗ್ಗೆ ಪೊಲೀಸರು ನಗರದ 33ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನೀಡಿದ್ದ ಅರೆಸ್ಟ್ ವಾರೆಂಟ್ ಅನ್ನು ಹೆಗ್ಗಡೆದೇವನಪುರ ಗ್ರಾಮದ ರೈತ ಎಚ್.ಆರ್.ಭೈರೇಗೌಡ ಅವರಿಗೆ ತಲುಪಿಸಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ತಾವು ಯಾವುದೇ ವ್ಯಕ್ತಿ ಪರವಾಗಿ ಯಾವುದೇ ನ್ಯಾಯಾಲಯದಲ್ಲಿ ಶ್ಯೂರಿಟಿಗಾಗಿ ತಮ್ಮ ಜಮೀನು ನೀಡಿಲ್ಲ ಎಂದು ತಿಳಿಸಿದ ರೈತ, ಪೊಲೀಸರಿಗೆ ನೀವು ಬಂಧಿಸುವ ಅಗತ್ಯವಿಲ್ಲ. ನಾಳೆ ಕೋರ್ಟ್ ವಿಚಾರಣೆಗೆ ನಾನೇ ಖುದ್ದು ಹಾಜರಾಗುತ್ತೇನೆ ಎಂದು ತಿಳಿಸಿ ವಾಪಸ್ಸು ಕಳಿಸಿದ್ದಾರೆ.

ಕೇವಲ 17.5 ಗುಂಟೆ ಭೂಮಿ ಮಾತ್ರ ಇದೆ. ಹೀಗಾಗಿ, ಭೂಮಿಯನ್ನು ಯಾರೊಬ್ಬರಿಗೂ ಭದ್ರತೆಗಾಗಿ ಕೊಟ್ಟಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರೈತ ಅಮಾಯಕ ಎಂದು ಪರಿಗಣಿಸಿದ ನ್ಯಾಯಾಲಯ, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ರೈತನಿಗೆ ಸಲಹೆ ನೀಡಿ ಕಳುಹಿಸಿಕೊಟ್ಟಿದೆ.

ನ್ಯಾಯಾಲಯದ ಸಲಹೆ ಮೇರೆಗೆ ರೈತ ಭೈರೇಗೌಡ, ಕೊತ್ತನೂರು ಪೊಲೀಸ್ ಠಾಣೆಗೆ ತೆರಳಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕತ್ರಿಗುಪ್ಪೆ ನಿವಾಸಿ ನವೀನ್ ಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಮಾಹಿತಿಯಂತೆ ರೈತ ಭೈರೇಗೌಡ ಅವರ ಜಮೀನನ್ನು ಆರೋಪಿ ನವೀನ್ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ದುಷ್ಟರಿಗೆ ಜಾಮೀನು ಕೊಡಿಸಲು ದುರ್ಬಳಕೆ ಮಾಡಿಕೊಂಡಿದ್ದಾನೆ. ಆರೋಪಿ ನವೀನ್ ಅಮಾಯಕ ರೈತನ ಜಮೀನನ್ನು ಕರ್ನಾಟಕದಿಂದಾಜೆಗೂ ದುರ್ಬಳಕೆ ಮಾಡಿಕೊಂಡಿದ್ದಾನೆ. ಬೇರೆ ರಾಜ್ಯಗಳಲ್ಲಿ ಆಫ್ರಿಕನ್ ಪ್ರಜೆಗಳು ಮಾದಕವಸ್ತು ಸರಬರಾಜು ಮಾಡಿ ಸಿಕ್ಕಿಬಿದ್ದ ವೇಳೆ ಅವರಿಗೂ ಜಾಮೀನು ಕೊಡಿಸಲು ಇದೇ ರೈತನ ಭೂಮಿಯನ್ನು ಶ್ಯೂರಿಟಿಯಾಗಿ ನೀಡಿದ್ದಾನೆ. ಹೀಗೆ ತನಗೆ ಬೇಕಾದ ಕ್ರಿಮಿನಲ್‌ಗಳಿಗೆ ನ್ಯಾಯಾಲಯಗಳಲ್ಲಿ ಜಾಮೀನು ಕೊಡಿಸಲು ಭೂಮಿಯನ್ನು ಭದ್ರತೆಯಾಗಿ ದಾಖಲೆಗಳನ್ನು ಕೊಟ್ಟಿದ್ದಾನೆ. ಪೊಲೀಸರ ಮಾಹಿತಿಯಂತೆ ಆರೋಪಿ ನವೀನ್ ಬನಶಂಕರಿ ನಿವಾಸಿಯಾಗಿದ್ದು, ಆತ ಮೊದಲಿಗೆ ಹೊಟೇಲ್‌ವೊಂದರಲ್ಲಿ ಸಫ್ಲೈಯರ್ ಕೆಲಸ ಮಾಡಿಕೊಂಡಿದ್ದ. ಆ ಬಳಿಕ ಮೈಸೂರು ಮೂಲದ ವ್ಯಕ್ತಿಯೊಬ್ಬನ ಪರಿಚಯವಾಗಿ ಆತನ ಮೂಲಕ ಈ ಜಾಲದಲ್ಲಿ ಸೇರಿಕೊಂಡಿದ್ದಾನೆ. ಸದ್ಯ ಆರೋಪಿ ನವೀನ್‌ನನ್ನು ಜಾಲಕ್ಕೆ ಕರೆತಂದ ಮೈಸೂರು ಮೂಲದ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ನಗರದ ಹೊರವಲಯದ ಅಮಾಯಕ ರೈತರ ಬೆಲೆ ಬಾಳುವ ಜಮೀನುಗಳನ್ನು ಕ್ರಿಮಿನಲ್‌ಗಳಿಗೆ ಜಾಮೀನು ಕೊಡಿಸಲು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಬದಲಿಗೆ ಇಂತಹ ಕೃತ್ಯ ಎಸಗಲು ಸಾಕಷ್ಟು ವ್ಯಕ್ತಿಗಳಿರುವ ದೊಡ್ಡ ಜಾಲವೇ ಇದೆ ಎಂಬ ಅನುಮಾನ ಪೊಲೀಸರಲ್ಲಿದೆ. ಪೊಲೀಸರು ಇದೇ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ರೈತರ ಜಮೀನು ದುರ್ಬಳಕೆ ಹೇಗೆ: ಪೊಲೀಸರ ತನಿಖೆಯಂತೆ ಅಮಾಯಕ ರೈತರ ಜಮೀನುಗಳ ಕುರಿತು ಮಾಹಿತಿ ಪಡೆಯುವ ವಂಚಲಕರ ಜಾಲ, ಮೊದಲಿಗೆ ಸರ್ವೇ ನಂಬರ್ ಮತ್ತಿತರ ಪ್ರಾಥಮಿಕ ಮಾಹಿತಿ ಪಡೆಯುತ್ತದೆ. ನಂತರ ತಾವೇ ರೈತರೆಂದು ಹೇಳಿ ತಹಶೀಲ್ದಾರ್ ಕಚೇರಿಯಿಂದ ಪಹಣಿ ಪಡೆದು, ಅದರಲ್ಲಿರುವ ವಿಳಾಸಕ್ಕೆ ಸಂಬಂಧಿಸಿದಂತೆ ರೈತರ ಹೆಸರಿನಲ್ಲೇ ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಪಡೆದು ತಾವೇ ರೈತರೆಂದು ಬಿಂಬಿಸಿಕೊಂಡು ನ್ಯಾಯಾಲಯಗಳಲ್ಲಿ ಕೋರುವ ಶ್ಯೂರಿಟಿಗೆ ನೀಡಿದ್ದಾರೆ. ಅದರಂತೆ ಅಮಾಯಕ ರೈತರ ಜಮೀನಿನ ಮೇಲೆ ಕ್ರಿಮಿನಲ್‌ಗಳು ಜಾಮೀನು ಪಡೆದಿದ್ದಾರೆ.

ವಾರೆಂಟ್ ಬಂದಾಗಲೇ ರೈತನಿಗೆ ತಿಳಿದಿದ್ದು: ರೈತ ಭೈರೇಗೌಡ ಅವರು 2016ರಲ್ಲಿ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆಯಲು ಅಗತ್ಯವಿದ್ದ ಪಹಣಿ(ಆರ್‌ಟಿಸಿ) ಪಡೆಯಲು ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಈ ವೇಳೆ ಪಹಣಿಯಲ್ಲಿ ನ್ಯಾಯಾಲಯದ ಶ್ಯೂರಿಟಿಗೆ ನೀಡಿರುವ ಕುರಿತು ದಾಖಲಾಗಿತ್ತು. ಕೂಡಲೇ ರೈತ, ತಾನು ಯಾವುದೇ ಶ್ಯೂರಿಟಿಗೂ ಜಮೀನನ್ನು ಬಳಸಿಲ್ಲ ಎಂದು ಮನವಿ ಮಾಡಿದ್ದರು. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ನಿರ್ದೇಶನದ ಮೇರೆಗೆ ಪಹಣಿಯಲ್ಲಿ ದಾಖಲಿಸಿರುವ ಶ್ಯೂರಿಟಿಯನ್ನು ಸರಿಪಡಿಸಲು ನ್ಯಾಯಾಲಯವೇ ಆದೇಶಿಸಬೇಕು ಎಂದಿದ್ದರು. ಅದರಂತೆ ರೈತ ಭೈರೇಗೌಡ ಪರಿಚಿತ ವಕೀಲರೊಬ್ಬರ ಮೂಲಕ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆದರೆ, ಅಕ್ಟೋಬರ್ 4ರಂದು ಪೊಲೀಸರು ಅರೆಸ್ಟ್ ವಾರೆಂಟ್ ಹಿಡಿದು ಮನೆ ಬಾಗಿಲು ಬಡಿದಾಗಲೇ ರೈತನಿಗೆ ತಾನು ಎಂತಹ ಸಂಕಷ್ಟದಲ್ಲಿ ಸಿಲುಕಿದ್ದೇನೆ ಎಂಬ ಅರಿವಾಗಿದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News