ಮಹಿಷಿ ವರದಿ ಮಂಡನೆಗೆ ಮುಖ್ಯ ಕಾರ್ಯದರ್ಶಿ ಅಡ್ಡಗಾಲು: ಖಂಡನೆ

Update: 2018-11-12 15:48 GMT

ಬೆಂಗಳೂರು, ನ.12: ಖಾಸಗಿ ವಲಯದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸರೋಜಿನಿ ಮಹಿಷಿ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಸಿದ್ದವಾಗಿರುವ ಸಂದರ್ಭದಲ್ಲಿ ‘ಕನ್ನಡಿಗರು ಯಾರು’ ಎಂಬ ಗೊಂದಲ ಸೃಷ್ಟಿಸಿ ಮಸೂದೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ ಎಂದು ಕನ್ನಡ ಗೆಳೆಯರ ಬಳಗ ಆಕ್ಷೇಪಿಸಿದೆ.

ಖಾಸಗೀ ವಲಯದಲ್ಲಿ ಕನ್ನಡಗರಿಗೆ ಉದ್ಯೋಗವನ್ನು ಮೀಸಲಿಡುವ ಮಸೂದೆಯು ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದು ಹೇಳಲಾಗಿತ್ತು. ಕನ್ನಡ ಹೋರಾಟಗಾರರು ಇದನ್ನು ಸ್ವಾಗತಿಸಿದ್ದರು. ಆದರೆ, ಈಗ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸಂಪುಟದಲ್ಲಿ ಮಂಡಿಸುವ ಮುನ್ನವೇ ಕನ್ನಡಿಗರು ಎಂದರೆ ಯಾರು ಎಂಬ ಸ್ಪಷ್ಟತೆ ಇರಬೇಕು ಎಂದಿದ್ದಾರೆ. ಅಲ್ಲದೆ, ಕಾರ್ಮಿಕ ಇಲಾಖೆ ಅದರಲ್ಲಿ ಬದಲಾವಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಆದರೆ, ಮಹಿಷಿ ವರದಿಯಲ್ಲಿ ಕನ್ನಡಿಗರು ಯಾರು ಎಂಬುದರ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಆದರೂ, ಮುಖ್ಯ ಕಾರ್ಯದರ್ಶಿ ಅನಗತ್ಯ ಗೊಂದಲ ಸೃಷ್ಟಿಸಿ ವಿಧೇಯಕ ಮಂಡನೆಯಾಗದಂತೆ ತಡೆಯಲು ಯತ್ನಿಸುತ್ತಿದ್ದಾರೆ ಎಂದು ಬಳಗ ಆರೋಪಿಸಿದೆ.

ವರದಿಯಲ್ಲಿ ಸ್ಥಳೀಯರು ಎಂದು ಪರಿಗಣಿಸಲು ರಾಜ್ಯದಲ್ಲಿ 15 ವರ್ಷಗಳ ಕಾಲ ವಾಸವಾಗಿರಬೇಕು ಹಾಗೂ ಕನ್ನಡ ಭಾಷಾ ಜ್ಞಾನವಿರಬೇಕು. ಎಸೆಸ್ಸೆಲ್ಸಿವರೆಗೂ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಿರಬೇಕು. ಪಡಿತರ ಚೀಟಿ, ಜನ್ಮ ದಾಖಲೆ, ಆಧಾರ್ ಕಾರ್ಡ್ ಹಾಗೂ ಮತ್ತಿತರೆ ದಾಖಲೆಗಳನ್ನು ಹೊಂದಿರಬೇಕು. ಹೊರರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಎಸೆಸ್ಸೆಲ್ಸಿವರೆಗೂ ಓದಿದ ವಿದ್ಯಾರ್ಥಿಗಳಿಗೂ ಎಲ್ಲ ಸೌಲಭ್ಯ ಸಿಗಬೇಕು ಎಂದು ಹೇಳಲಾಗಿದೆ.

ಕನ್ನಡಗರು ಎಂದರೆ ಯಾರು ಎಂಬದನ್ನು ಖಚಿತವಾಗಿ ಅರ್ಥೈಸಿದ್ದರೂ, ಕಾರ್ಮಿಕ ಇಲಾಖೆ ಉದ್ಯೋಗ ಬಯಸುವ ಅಭ್ಯರ್ಥಿ ಅಥವಾ ತಂದೆ-ತಾಯಿಯಲ್ಲಿ ಯಾರಾದರೂ ಒಬ್ಬರಾದರೂ ಕನ್ನಡಿಗರಾಗಿದ್ದು, 7 ವರ್ಷ ರಾಜ್ಯದ ಯಾವುದೇ ಭಾಗದಲ್ಲಿ ವಾಸವಾಗಿರುವವರನ್ನು ಕನ್ನಡಿಗರೆಂದು ಪರಿಗಣಿಸಬಹುದು ಎಂದು ತಿದ್ದಪಡಿ ಮಾಡಿರುವುದಾಗಿ ತಿಳಿದು ಬಂದಿದೆ.

ಮುಖ್ಯ ಕಾರ್ಯದರ್ಶಿಯು ಪಟ್ಟಭದ್ರರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಅನಗತ್ಯ ಗೊಂದಲ ಸೃಷ್ಟಿಸಿ ವರದಿಯನ್ನು ವಿರೂಪಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ, ಸರಕಾರ ವರದಿಯನ್ನು ಯಥಾವತ್ತಾಗಿ ಸದನದಲ್ಲಿ ಮಂಡಿಸಬೇಕು ಎಂದು ಬಳಗ ಪ್ರಕಟನೆಯಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News