ಸ್ಪೈಡರ್‌ಮ್ಯಾನ್ ಜನಕ ಸ್ಟ್ಯಾನ್ ಲೀ ಇನ್ನಿಲ್ಲ

Update: 2018-11-13 11:45 GMT

ಲಾಸ್‌ಎಂಜಲೀಸ್, ನ. 13: ಕಾಮಿಕ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ, ಸ್ಪೈಡರ್‌ಮ್ಯಾನ್, ಫೆಂಟ್ಯಾಸ್ಟಿಕ್ ಫೋರ್, ಇನ್‌ಕ್ರೆಡಿಬಲ್ ಹಕ್‌ನಂಥ ಅತಿಮಾನವ ಸೂಪರ್‌ಹೀರೊ ಸೃಷ್ಟಿ ಮೂಲಕ ಹಾಲಿವುಡ್‌ಗೆ ಕೋಟ್ಯಂತರ ಡಾಲರ್ ಗಳಿಕೆಗೆ ದಾರಿ ಮಾಡಿಕೊಟ್ಟ ಸ್ಟ್ಯಾನ್‌ ಲೀ ಸೋಮವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಲಾಸ್‌ಎಂಜಲೀಸ್‌ನ ಸೆಡರ್ಸ್‌- ಸೈನಿ ವೈದ್ಯಕೀಯ ಕೇಂದ್ರದಲ್ಲಿ ಅವರು ಸೋಮವಾರ ಮೃತಪಟ್ಟಿದ್ದಾರೆ ಎಂದು ಲೀ ಪುತ್ರಿ ಜೆ.ಸಿ.ಲೀ ಅವರ ಅಟಾರ್ನಿ ಕ್ರಿಕ್ ಶ್ಚೆಂಕ್ ಪ್ರಕಟಿಸಿದ್ದಾರೆ.

ಅತ್ಯದ್ಭುತ ಕಾಮಿಕ್ ಬರಹಗಳಿಗೆ ಹೆಸರಾಗಿದ್ದ ಇವರು, ಬಳಿಕ ಇದರ ಪ್ರಕಾಶಕರಾಗಿಯೂ ಜನಪ್ರಿಯರಾಗಿದ್ದರು. ಪ್ರಸ್ತುತ ದಿನಮಾನಗಳ ಕಾಮಿಕ್ ಪುಸ್ತಕ ಕ್ಷೇತ್ರದ ಶಿಲ್ಪಿ ಎಂದೇ ಖ್ಯಾತರಾಗಿದ್ದ ಇವರು, 1960ರ ದಶಕದಲ್ಲಿ ಈ ಕಾಮಿಕ್ ಪುಸ್ತಕೋದ್ಯಮವನ್ನು ಪುನಶ್ಚೇತನಗೊಳಿಸಿದರು. ಯುವ ಓದುಗರರನ್ನು ಆಕರ್ಷಿಸುವ ಸಲುವಾಗಿ, ವೈವಿಧ್ಯಮಯ ಉಡುಪು ಹಾಗೂ ಸಾಹಸಗಳನ್ನು ಕಾಮಿಕ್‌ನಲ್ಲಿ ಸೇರಿಸಿದ್ದರು. ಇದರ ಜತೆಗೆ ಆಧುನಿಕ ಕಥಾನಕಗಳು, ಕಾಲೇಜು ಮಟ್ಟದ ಸಂವಾದ, ವಿಡಂಬನೆ, ಕಾಲ್ಪನಿಕ ವಿಜ್ಞಾನ ಕಥೆಗಳು ಮತ್ತು ತತ್ವಜ್ಞಾನದಂಥ ವಿಶೇಷಗಳನ್ನು ಕೂಡಾ ಕಾಮಿಕ್‌ಗಳಲ್ಲಿ ಸೇರಿಸುವ ಮೂಲಕ ಸಮಾಜದ ಎಲ್ಲ ವರ್ಗಗಳನ್ನೂ ಆಕರ್ಷಿತರಾಗುವಂತೆ ಮಾಡಿದ್ದರು.

ಇವರ ಕಾಮಿಕ್ ಪಾತ್ರಗಳಾದ ಸ್ಪೈಡರ್‌ಮ್ಯಾನ್, ದ ಹಕ್ ಹಾಗೂ ಎಕ್ಸ್-ಮ್ಯಾನ್‌ಗಳು ಹಲವು ಬಾಲಿವುಡ್ ಚಿತ್ರಗಳ ತಾರೆಗಳಾಗಿ ಮೆರೆದಿದ್ದರು. ಇತ್ತೀಚಿನ ಬ್ಲ್ಯಾಕ್‌ಪ್ಯಾಂಥರ್ ಹಾಗೂ ಡಾಕ್ಟರ್ ಸ್ಟ್ರೇಂಜ್‌ನಂಥ ಚಿತ್ರಗಳು ಕೂಡಾ ಇವರ ಕಾಮಿಕ್‌ನಿಂದ ಪ್ರೇರಿತವಾಗಿವೆ. ಏಜೆಂಟ್ಸ್ ಆಫ್ ಶೀಲ್ಡ್ ಹಾಗೂ ಗಾರ್ಡಿಯನ್ಸ್ ಆಫ್ ಗೆಲಾಕ್ಸಿಯಂಥ ಜನಪ್ರಿಯ ಧಾರಾವಾಹಿಗಳಿಗೂ ಇವರು ಸ್ಫೂರ್ತಿ ನೀಡಿದ್ದರು.

ಕಾಮಿಕ್ ಪುಸ್ತಕೋದ್ಯಮವನ್ನು ಕಲಾ ಮಾಧ್ಯಮವಾಗಿ ಬಿಂಬಿಸುವಲ್ಲಿ ಲೀ ಯಶಸ್ವಿಯಾಗಿದ್ದು. ನಿರಂತರವಾಗಿ 10 ವರ್ಷಗಳ ಕಾಲ ದಿನಕ್ಕೊಂದು ಕಾಮಿಕ್ ಪುಸ್ತಕ ರಚಿಸಿದ ಹೆಗ್ಗಳಿಕೆ ಅವರದ್ದು.

"ಪ್ರತಿಯೊಬ್ಬರೂ ಜೀವನಕ್ಕಿಂತ ದೊಡ್ಡದಾದ್ದನ್ನು ಇಷ್ಟಪಡುತ್ತಾರೆ ಎನ್ನುವುದು ನನ್ನ ನಂಬಿಕೆ...ಆ ಬಗ್ಗೆ ನಾನು ಯೋಚಿಸಿ, ದೊಡ್ಡವರಿಗಾಗಿಯೂ ಇಂಥ ಆಕರ್ಷಕ ಕಥೆಗಳನ್ನು ಹೆಣೆದಿದ್ದೇನೆ" ಎಂದು 2006ರಲ್ಲಿ ತಮ್ಮ ಯಶಸ್ಸಿನ ಗುಟ್ಟನ್ನು ಸಂದರ್ಶನವೊಂದರಲ್ಲಿ ಲೀ ಬಿಚ್ಚಿಟ್ಟಿದ್ದರು. "ನಾನು ಎಷ್ಟು ಬರೆದಿದ್ದೇನೆ ಎನ್ನುವುದು ನನಗೇ ಗೊತ್ತಿಲ್ಲ; ನೂರಾರು ಅಥವಾ ಸಾವಿರಾರು ಬರೆದಿರಬಹುದು" ಎಂದು ಹೇಳಿದ್ದರು.

ಲೀ ಅವರ ಕೆಲ ಸೃಷ್ಟಿಗಳು ಸಾಮಾಜಿಕ ಬದಲಾವಣೆಗಳ ಸಂಕೇತಗಳಾಗಿಯೂ ಜನಪ್ರಿಯವಾಗಿದ್ದವು. ಸ್ಪೈಡರ್‌ಮ್ಯಾನ್‌ನ ಆಂತರಿಕ ತುಮುಲಗಳು 1960ರ ದಶಕದ ಅಮೆರಿಕದ ಜೀವನಕ್ಕೆ ಕನ್ನಡಿ ಹಿಡಿದಿತ್ತು.

ಮಾರ್ವೆಲ್ಸ್‌ನ ಬಹುತೇಕ ಸೂಪರ್‌ಹೀರೊ ಕಾಮಿಕ್‌ಗಳನ್ನು 1960ರ ದಶಕದಲ್ಲಿ ರಚಿಸಿದ್ದ ಇವರು, 1972ರಲ್ಲಿ ಮಾರ್ವೆಲ್ಸ್ ಪ್ರಕಾಶನ ಸಂಸ್ಥೆಯ ಪ್ರಕಾಶಕರು ಹಾಗೂ ಸಂಪಾದಕೀಯ ನಿರ್ದೇಶಕರಾದರು. ನಾಲ್ಕು ವರ್ಷ ಬಳಿಕ ಸ್ಪೈಡರ್‌ಮ್ಯಾನ್‌ನ 72 ದಶಲಕ್ಷ ಪ್ರತಿಗಳು ಮಾರಾಟವಾಗಿದ್ದವು.
ಲೀ ಅವರು ಪುತ್ರಿ ಜಾನಿಯವರನ್ನು ಅಗಲಿದ್ದಾರೆ. ಲೀ ಪತ್ನಿ ಕಳೆದ ವರ್ಷ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News