ಈ ಆರು ಅಭ್ಯಾಸಗಳು ಧೂಮ್ರಪಾನದಷ್ಟೇ ಕೆಟ್ಟವು ಗೊತ್ತೇ ?

Update: 2018-11-13 09:14 GMT

ಧೂಮ್ರಪಾನ ಹಾನಿಕರ ಎನ್ನುವುದು ಅದರ ಚಟವಿರುವವರು ಸೇರಿದಂತೆ ಎಲ್ಲರಿಗೂ ಗೊತ್ತು. ಮಾನವ ಶರೀರಕ್ಕೆ ಹಲವಾರು ವಿಧಗಳಲ್ಲಿ ಹಾನಿಯನ್ನುಂಟು ಮಾಡುವ ಅದು ಕೆಲವು ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತದೆ. ಹೀಗಾಗಿ ಧೂಮ್ರಪಾನ ಮಾಡದವರು ತಾವು ಆರೋಗ್ಯವಂತರಾಗಿರುತ್ತವೆ ಎಂದು ಭಾವಿಸಿರಬಹುದು. ಆದರೆ ಧೂಮ್ರಪಾನದಷ್ಟೇ ಕೆಟ್ಟದಾಗಿರುವ ಹಲವಾರು ಅಭ್ಯಾಸಗಳು ಹೆಚ್ಚಿನವರಿಗೆ ಇರುತ್ತವೆ.

ನಿಮ್ಮ ಕೆಲವು ದೈನಂದಿನ ಅಭ್ಯಾಸಗಳನ್ನು ನೀವು ಗಮನಿಸದಿರಬಹುದು,ಆದರೆ ಅವು ನಿಮ್ಮ ಆರೋಗ್ಯದ ಮೇಲೆ ಹಲವಾರು ರೀತಿಗಳಲ್ಲಿ ಅತ್ಯಂತ ಹಾನಿಕಾರಕ ಪರಿಣಾಮಗಳನ್ನು ಬೀರಬಲ್ಲವು. ಧೂಮ್ರಪಾನದಂತೆಯೇ ಅವು ಆರೋಗ್ಯವನ್ನು ಕೆಡಿಸಬಲ್ಲವು. ಮೇಲ್ನೋಟಕ್ಕೆ ಅಪಾಯಕಾರಿಯಾಗಿ ಕಂಡುಬರದ,ಆದರೆ ನಿಮ್ಮ ಆರೋಗ್ಯಕ್ಕೆ ದುಬಾರಿಯಾಗಬಲ್ಲ ಇಂತಹ ಆರು ಅಭ್ಯಾಸಗಳ ಮಾಹಿತಿಗಳಿಲ್ಲಿವೆ.

► ಇಡೀ ದಿನ ಕುಳಿತುಕೊಂಡೇ ಇರುವುದು

ಸುದೀರ್ಘ ಸಮಯದವರೆಗೆ ಕುಳಿತುಕೊಂಡೇ ಇರುವುದು ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ತಳುಕು ಹಾಕಿಕೊಂಡಿದೆ. ಅದು ನಿಷ್ಕ್ರಿಯತೆಗೆ ಕಾರಣವಾಗುತ್ತದೆ ಮತ್ತು ನಿಷ್ಕ್ರಿಯತೆ ಹೃದಯಾಘಾತ ಹಾಗೂ ಕ್ಯಾನ್ಸರ್‌ನಂತಹ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಆದ್ದರಿಂದ ನೀವು ಸಾಧ್ಯವಾದಷ್ಟು ಚಲನವಲನಗಳಲ್ಲಿ ತೊಡಗಿಕೊಂಡಿರಬೇಕು. ನೀವು ಕುಳಿತುಕೊಂಡು ಕೆಲಸ ಮಾಡುತ್ತಿದ್ದರೆ ಆಗಾಗ್ಗೆ ಸ್ವಲ್ಪ ವಿರಾಮವನ್ನು ತೆಗೆದುಕೊಂಡು ಅತ್ತಿಂದಿತ್ತ ಓಡಾಡುವುದನ್ನು ರೂಢಿಸಿಕೊಳ್ಳಿ. ಸೋಮಾರಿತನವನ್ನು ಕಡಿಮೆ ಮಾಡಿ ಓಡಾಡುವುದನ್ನು ಹೆಚ್ಚಿಸಿದರೆ ಹಲವಾರು ಮಾರಣಾಂತಿಕ ಕಾಯಿಲೆಗಳಿಂದ ದೂರವಿರಬಹುದು.

► ಸಾಕಷ್ಟು ನಿದ್ರೆ ಮಾಡದಿರುವುದು

ನೀವು ಸಾಕಷ್ಟು ನಿದ್ರೆಯಿಂದ ವಂಚಿತರಾಗಿದ್ದರೆ ದಿನವಿಡೀ ಬಳಲಿಕೆಯ ಭಾವನೆ ಕಾಡುತ್ತಿರುತ್ತದೆ. ಅದು ನಿಮ್ಮನ್ನು ಆಲಸಿಗಳಾಗಿಸುವ ಜೊತೆಗೆ ದೈನಂದಿನ ಕೆಲಸ ಮಾಡಲು ಶಕ್ತಿಯ ಕೊರತೆಯನ್ನೂ ನೀವು ಅನುಭವಿಸುತ್ತೀರಿ. ನಿದ್ರೆಯ ಕೊರತೆಯು ಬೊಜ್ಜು,ಅಧಿಕ ರಕ್ತದೊತ್ತಡ,ಹೃದಯಾಘಾತಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ದಿನಕ್ಕೆ ಕನಿಷ್ಠ ಆರು ಗಂಟೆಗಳ ಕಾಲ ನೀವು ನಿದ್ರೆ ಮಾಡಲೇಬೇಕು. ರಾತ್ರಿ ಶಾಂತನಿದ್ರೆ ಮಾಡಲು ಸಾಧ್ಯವಾಗುವಂತೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಯೋಜಿಸಿಕೊಳ್ಳಿ. ಸುಮಾರು ಸಮಯದಿಂದ ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲವಾದರೆ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ.

► ಅತಿಯಾಗಿ ತಿನ್ನುವುದು

ನೀವು ಅತಿಯಾಗಿ ಆಹಾರ ಸೇವಿಸುವ ಜಾಯಮಾನದವರಾಗಿದ್ದರೆ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲರಿಗಳು ನಿಮ್ಮ ಶರೀರವನ್ನು ಸೇರಿಕೊಳ್ಳುತ್ತವೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ನಿಮ್ಮಲ್ಲಿ ಏನಾದರೂ ಅನಾರೋಗ್ಯವಿರಬಹುದು ಅಥವಾ ಆಗಾಗ್ಗೆ ಏನಾದರೂ ತಿನ್ನುತ್ತಲೇ ಇರಬೇಕೆಂಬ ತುಡಿತವನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವಿರಬಹುದು. ಅತಿಯಾದ ಆಹಾರ ಸೇವನೆಯು ಬೊಜ್ಜು,ಅಧಿಕ ರಕ್ತದೊತ್ತಡ,ಹೃದಯಾಘಾತದ ಹೆಚ್ಚಿನ ಅಪಾಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುವುದಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಮಾಂಸ ಮತ್ತು ಚೀಸ್‌ನ ಅತಿಯಾದ ಸೇವನೆಯು ಅತ್ಯಂತ ಹಾನಿಕರವಾಗುತ್ತದೆ.

► ಇಂಗಾಲೀಕೃತ ಪಾನೀಯಗಳ ಅತಿಯಾದ ಸೇವನೆ

ಕೋಕ್,ಪೆಪ್ಸಿಯಂತಹ ಕಾರ್ಬನೇಟೆಡ್ ಅಥವಾ ಇಂಗಾಲೀಕೃತ ಪಾನೀಯಗಳು ಅಧಿಕ ಸಕ್ಕರೆ ಮತ್ತು ರಾಸಾಯನಿಕಗಳನ್ನು ಒಳಗೊಂಡಿದ್ದು,ಯಾವುದೇ ಪೌಷ್ಟಿಕಾಂಶಗಳಿರುವುದಿಲ್ಲ. ಅವು ಕ್ಯಾನ್ಸರ್,ಹೃದ್ರೋಗಗಳು ಮತ್ತು ಮಧುಮೇಹದ ಅಪಾಯಗಳನ್ನು ಹೆಚ್ಚಿಸುತ್ತವೆ. ಯಕೃತ್ತಿಗೆ ಹಾನಿಯ ಜೊತೆಗೆ ಬಹುಬೇಗನೆ ಹೆಚ್ಚು ವಯಸ್ಸಾದವರಂತೆ ಕಾಣಿಸುವಂತೆ ಮಾಡುತ್ತವೆ. ಹೀಗಾಗಿ ಇಂಗಾಲೀಕೃತ ಪಾನೀಯಗಳನ್ನು ಹೆಚ್ಚಾಗಿ ಸೇವಿಸುವ ಅಭ್ಯಾಸ ಹೊಂದಿದ್ದರೆ ಅವುಗಳ ಬದಲಾಗಿ ತಾಜಾ ಹಣ್ಣಿನ ರಸಗಳು ಅಥವಾ ಶೇಕ್‌ಗಳನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ.

► ಸಮತೋಲನವಿಲ್ಲದ ಆಹಾರ

ಸಮತೋಲಿತ ಆಹಾರವು ನಮ್ಮ ಶರೀರಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇಂತಹ ಎಲ್ಲ ಪೋಷಕಾಂಶಗಳನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸದಿರುವುದು ಅತ್ಯಂತ ಅನಾರೋಗ್ಯಕಾರಿಯಾಗಿದೆ. ಅತಿಯಾದ ಕೊಬ್ಬಿನ ಸೇವನೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಎಲ್ಲ ಅಗತ್ಯ ಪೋಷಕಾಂಶಗಳ ಸೂಕ್ತ ಪ್ರಮಾಣದಲ್ಲಿ ಸೇವನೆಯನ್ನು ನೀವು ಖಚಿತಪಡಿಸಿಕೊಳ್ಳಬೇಕು.

► ವ್ಯಾಯಾಮ ಮಾಡದಿರುವುದು

ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಶರೀರಕ್ಕೆ ಅತ್ಯಗತ್ಯವಾಗಿದೆ. ಜೊತೆಗೆ ದಿನವಿಡೀ ನಿಮ್ಮ ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಿ. ಇದರಿಂದ ನೀವು ಉಲ್ಲಸಿತರಾಗಿರುತ್ತೀರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News