ಯುವಕನನ್ನು ವಾಹನದಡಿ ತಳ್ಳಿದ್ದ ಕೇರಳ ಪೊಲೀಸ್ ಅಧಿಕಾರಿ ಶವವಾಗಿ ಪತ್ತೆ

Update: 2018-11-13 10:33 GMT

ತಿರುವನಂತಪುರಂ,ನ.13 : ಕೊಲೆ ಪ್ರಕರಣವೊಂದರಲ್ಲಿ ಬೇಕಾಗಿ ತಲೆಮರೆಸಿಕೊಂಡಿದ್ದ ಕೇರಳದ ಪೊಲೀಸ್ ಅಧಿಕಾರಿಯೊಬ್ಬರು ತಿರುವನಂತಪುರಂ ಸಮೀಪದ ಕಲ್ಲಂಬಲಂ ಎಂಬಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ನೆಯ್ಯತ್ತಿನ್ಕರ ಡಿವೈಎಸ್ಪಿ ಆಗಿದ್ದ  ಬಿ ಹರಿಕುಮಾರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ನೆಯ್ಯತ್ತಿನ್ಕರ ಎಂಬಲ್ಲಿನ ನಿವಾಸಿ, 32 ವರ್ಷದ ಎಸ್ ಸನಲ್ ಎಂಬಾತನನ್ನು  ಪಾರ್ಕಿಂಗ್ ವಿವಾದವೊಂದಕ್ಕೆ ಸಂಬಂಧಿಸಿದಂತೆ ಚಲಿಸುತ್ತಿದ್ದ ವಾಹನದ ಎದುರು ತಳ್ಳಿದ್ದ ಆರೋಪ ಅವರ ಮೇಲಿದ್ದು ಸನಲ್ ನಂತರ ತೀವ್ರ ಗಾಯಗಳಿಂದ ಮೃತಪಟ್ಟಿದ್ದ. ಪೊಲೀಸ್ ಅಧಿಕಾರಿ ಸನಲ್‍ನನ್ನು ಕೊಲ್ಲಲೆಂದೇ ಆತನನ್ನು ದೂಡಿದ್ದರೆಂದು ಆರೋಪಿಸಲಾಗಿತ್ತು.

ಘಟನೆಯ ನಂತರ ಹರಿಕುಮಾರ್ ನಾಪತ್ತೆಯಾಗಿದ್ದರಲ್ಲದೆ ತಮಿಳುನಾಡಿಗೆ ಪರಾರಿಯಾಗಿರಬಹುದೆಂದೂ ಶಂಕಿಸಲಾಗಿತ್ತು. ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತಲ್ಲದೆ ಐಪಿಸಿ ಸೆಕ್ಷನ್ 302 ಅನ್ವಯ ಪ್ರಕರಣ ದಾಖಲಾಗಿತ್ತು.

ಈ ವಾರ ಐಜಿ ಎಸ್ ಶ್ರೀಜಿತ್ ಅವರ ನೇತೃತ್ವದ ತಂಡ ಗಡಿ ಭಾಗಗಳಲ್ಲಿ ಕೂಲಂಕಷ ತಪಾಸಣೆಗೈದಿದ್ದರೂ ಫಲ ನೀಡಿರಲಿಲ್ಲ. ಅಂತಿಮವಾಗಿ ಅಧಿಕಾರಿ ಅವರ ಮನೆಯಲ್ಲಿಯೇ ಸಾವಿಗೀಡಾಗಿರುವುದು ತಿಳಿದು ಬಂತು. ಕೆಲ ದಿನಗಳ ಹಿಂದೆ ಅವರು ದಾಖಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಲಿದ್ದ ಒಂದು ದಿನ ಮುಂಚೆಯೇ ಅವರು ಸಾವಿಗೀಡಾಗಿದ್ದಾರೆ.

ಇಂದು ಬೆಳಗ್ಗಿನಿಂದ ಸನಲ್ ಪತ್ನಿ ವಿಜಿ ಮತ್ತಾಕೆಯ ಕುಟುಂಬ ಸದಸ್ಯರು ಆರೋಪಿ ಪೊಲೀಸ್ ಅಧಿಕಾರಿಯ ತಕ್ಷಣ ಬಂಧನಕ್ಕೆ ಆಗ್ರಹಿಸಿ ಉಪವಾಸ ಆರಂಭಿಸಿದ್ದರು. ಆದರೆ ಅಧಿಕಾರಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರತಿಭಟನೆ ಕೈಬಿಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಿ “ಎಲ್ಲವೂ ದೇವರ ಇಚ್ಛೆ,” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News