ಕನ್ನಡ ಹೋರಾಟಕ್ಕೆ ರಹಮಾನ್‌ ಖಾನ್ ಸ್ಫೂರ್ತಿ: ಕನ್ನಡ ಹೋರಾಟಗಾರ ಪಾರ್ಶ್ವನಾಥ್

Update: 2018-11-13 14:32 GMT

ಬೆಂಗಳೂರು, ನ.13: ಐತಿಹಾಸಿಕ ಗೋಕಾಕ್ ಚಳವಳಿಯನ್ನು ಮೊದಲು ಆರಂಭ ಮಾಡಿದ ಶ್ರೇಯಸ್ಸು ರಹಮಾನ್‌ ಖಾನರಿಗೆ ಸಲ್ಲಬೇಕು. ಸಮಾನ ಮನಸ್ಕರೊಂದಿಗೆ ಗೋಕಾಕ್ ವರದಿ ಜಾರಿಗೆ ಹೋರಾಟ ಮಾಡಿದ ರಹಮಾನ್‌ ಖಾನ್ ಅಂದಿನ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಪೊಲೀಸ್ ಆಯುಕ್ತರ ಕೈಯಲ್ಲಿ ಏಟು ತಿಂದದ್ದು ಇನ್ನೂ ನೆನಪಿದೆ ಎಂದು ಕನ್ನಡ ಹೋರಾಟಗಾರ ಶ್ರ.ದೇ.ಪಾರ್ಶ್ವನಾಥ್ ಹೇಳಿದರು.

ನಗರದಲ್ಲಿ ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಏರ್ಪಡಿಸಿದ್ದ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಅಭಿನಂದನೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು, ತಮಗೆ ಸಂದ ಈ ಪ್ರಶಸ್ತಿ ನನ್ನದಲ್ಲ, ಅದು ರಹಮಾನ್‌ ಖಾನರದ್ದು ಎಂದು ಭಾವುಕರಾಗಿ ನುಡಿದರು.

ಖಜಾನೆಯಲ್ಲಿ ಕೆಲಸ ಮಾಡುತ್ತಿದ್ದ ನಮ್ಮನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕರೆದೊಯ್ದ ಪ್ರಿಯಬಂಧು ರಹಮಾನ್‌ ಖಾನರೇ ಮುಂದಿನ ದಿನಗಳಲ್ಲಿ ಕಸಾಪದ ಯಾವುದೇ ಪದಾಧಿಕಾರಿಯಾಗಲು ಸಾಧ್ಯವಾಗಲಿಲ್ಲ. ಅಂತಹ ವಿಷಮ ವ್ಯವಸ್ಥೆ ನಮ್ಮದು ಎಂದು ತೀವ್ರ ಖೇದ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಬಿಎಂಪಿ ಸದಸ್ಯ ಮಂದಾರ ಸಂಪತ್‌ ಕುಮಾರ್, ಭಾಷೆ ಮತ್ತು ಸಾಮಾಜಿಕ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪಾರ್ಶ್ವನಾಥ್ ಮತ್ತು ಅಭಿಮನ್ಯು ರಮೇಶ್ ಅವರುಗಳನ್ನು ಸನ್ಮಾನಿಸುತ್ತಿರುವುದು ಮಹಮದೀಯರ ವೇದಿಕೆಯ ಕನ್ನಡತನಕ್ಕೆ ಸಾಕ್ಷಿಯಾಗಿದೆ ಎಂದರು.

ಅಭಿಮನ್ಯು ಪತ್ರಿಕೆಯ ಮೂಲಕ ನೂರಾರು ಯುವ ಮನಸ್ಸುಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಸಾಮಾಜಿಕ ಹೋರಾಟದಲ್ಲಿಯೂ ತೊಡಗಿಸಿಕೊಂಡಿರುವ ಅತಿಹಿಂದುಳಿದ ವರ್ಗದ ಪ್ರತಿಭೆ ರಮೇಶ್ ಮತ್ತು ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದಕ್ಕೆ ನಿದರ್ಶನವಾಗಿರುವ ಪಾರ್ಶ್ವನಾಥ್ ಈ ಬಾರಿಯ ಕೆಂಪೇಗೌಡ ಪ್ರಶಸ್ತಿ ಸಂದ ಪುರಸ್ಕೃತರಲ್ಲಿ ಅರ್ಹರಿಗೂ ಸ್ಥಾನವಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಅವರು ನುಡಿದರು.

ಆಶಯ ನುಡಿಗಳನ್ನಾಡಿದ ಮಹಮದೀಯರ ಕನ್ನಡ ವೇದಿಕೆಯ ಅಧ್ಯಕ್ಷ ಸಮೀವುಲ್ಲಾ ಖಾನ್, ಇವರಿಬ್ಬರೂ ಸಾರ್ವಜನಿಕ ಬದುಕಿನಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ಒಬ್ಬರು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ರಾಜಧಾನಿಯಲ್ಲಿ ಕನ್ನಡವನ್ನು ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಮತ್ತೊಬ್ಬರು ನೂರಾರು ಯುವಕರಿಗೆ ಮಾದರಿಯಾಗಿ ಸಂಘಟನಶೀಲರಾಗಿ, ಪತ್ರಕರ್ತರಾಗಿ ಸುಶೀಲತೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ, ಜಾತ್ಯತೀತತೆ ಎನ್ನುವುದು ಸವಕಲು ನಾಣ್ಯವಾಗಿ, ಜಾತೀಯತೆಯೇ ವಿಜೃಂಭಿಸುತ್ತಿರುವಾಗ ಮಹಮದೀಯರ ಕನ್ನಡ ವೇದಿಕೆ ಎಲ್ಲ ಸಂಘಟನೆಗಳಿಗೆ ಮಾದರಿಯಾಗಿದೆ. ಮಸೀದಿಯಲ್ಲಿ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳಿಂದ ಮೊದಲುಗೊಂಡು ಮದ್ರಸಾಗಳಲ್ಲಿ ಕನ್ನಡ ಕಲಿಕಾ ಶಿಬಿರಗಳನ್ನು ನಡೆಸುತ್ತಾ ಸೌಹಾರ್ದ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ವೇದಿಕೆಯ ಹೆಗ್ಗಳಿಕೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಒಕ್ಕೂಟದ ಮಾಜಿ ಅಧ್ಯಕ್ಷ ಯು.ಡಿ. ನರಸಿಂಹಯ್ಯ, ಸಾಹಿತಿ ಡಾ.ಜಿ.ಕೃಷ್ಣಪ್ಪ, ಕನ್ನಡಪರ ಹೋರಾಟಗಾರ ಶೇ.ಬೋ. ರಾಧಾಕೃಷ್ಣ, ರಂಗಭೂಮಿ ಕಲಾವಿದ ಎ.ಬಿ.ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News