ಟಿಪ್ಪು ಜಯಂತಿಯನ್ನು ರಾಜ್ಯದಲ್ಲಿ ಆಚರಿಸದೆ ಬೇರೆಡೆ ಆಚರಿಸಲು ಸಾಧ್ಯವೇ: ಸಚಿವೆ ಜಯಮಾಲ ಪ್ರಶ್ನೆ

Update: 2018-11-13 15:52 GMT

ಬೆಳಗಾವಿ, ನ.13: ಕರ್ನಾಟಕದಲ್ಲಿ ಜನಿಸಿದ ದೇಶ ಕಂಡ ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯದಲ್ಲಿ ಆಚರಿಸದೆ, ಬೇರೆಡೆ ಆಚರಿಸಲು ಸಾಧ್ಯವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಅಭಿಪ್ರಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಯೋಧ ಟಿಪ್ಪು ಸುಲ್ತಾನ್ ಭಾರತದ ಮೊದಲ ಸ್ವಾತಂತ್ರ ಹೋರಾಟಗಾರನೆಂದು ಬ್ರಿಟಿಷರೆ ಒಪ್ಪಿಕೊಳ್ಳುತ್ತಾರೆ. ಹಾಗೂ ನಾಡಿನ ರಕ್ಷಣೆಗಾಗಿ ತನ್ನ ಮಕ್ಕಳನ್ನೆ ಒತ್ತೆ ಇಟ್ಟಿದ್ದರು. ಅಂತಹ ಹೋರಾಟಗಾರನನ್ನು ಸ್ಮರಿಸುವುದು ನಾಡಿನ ಪ್ರತಿಯೊಬ್ಬರ ಕರ್ತವ್ಯವೆಂದು ತಿಳಿಸಿದರು.

ಕೆಲವು ಸಂಘಟನೆಗಳು ಟಿಪ್ಪು ಸುಲ್ತಾನ್ ಬಗ್ಗೆ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಟಿಪ್ಪು ವಿಷಯದಲ್ಲಿ ದಶಕಗಳ ಕಾಲದಿಂದಲೂ ಸಂಶೋಧನೆ ಮಾಡಿದವರು ಹಾಗೂ ಟಿಪ್ಪು ಜಯಂತಿ ವಿರೋಧಿಸುವವರ ನಡುವೆ ಚರ್ಚೆ, ಸಂವಾದ ನಡೆಯಲಿ. ಆಗ ಸತ್ಯ ಹೊರಗೆ ಬರುತ್ತದೆ. ವಿನಾಕಾರಣ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ ರಾಜನ ಬಗ್ಗೆ ಜನಸಾಮಾನ್ಯರಿಗೆ ದಾರಿ ತಪ್ಪಿಸುವ ಕೆಲಸ ಯಾರು ಮಾಡಬಾರದು ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬುದಿಲ್ಲ. ಅಖಂಡ ಕರ್ನಾಟಕ ಮಾತ್ರ ಇರುವುದು. ನಮ್ಮ ಸರಕಾರ ಎಲ್ಲ ಭಾಗದ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡುತ್ತಿದೆ. ಬೆಂಗಳೂರಿನಲ್ಲೂ ರಾಣಿ ಚನ್ನಮ್ಮ ಜಯಂತಿ ಆಚರಿಸಿದೆವು. ಹೀಗಾಗಿ ಅದೇ ದಿನ ಇಲ್ಲಿ ನಡೆದ ಕಾರ್ಯಕ್ರಮಕ್ಕೆ ಭಾಗವಹಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ಅಪಾರ್ಥ ಕಲ್ಪಿಸಿಕೊಳ್ಳಬಾರದು ಎಂದು ಅವರು ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News