ಅಂಗನವಾಡಿ ಶಿಕ್ಷಕರ ಹುದ್ದೆ ತಕ್ಷಣ ಭರ್ತಿಗೆ ಸಚಿವೆ ಜಯಮಾಲಾ ಸೂಚನೆ

Update: 2018-11-13 16:03 GMT

ಬೆಳಗಾವಿ, ನ.13: ಮುಂಬರುವ ದಿನಗಳಲ್ಲಿ ಖಾಲಿಯಾಗುವ ಅಂಗನವಾಡಿ ಕೇಂದ್ರದ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಮುಂಚಿತವಾಗಿಯೇ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಡಾ.ಜಯಮಾಲಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆರಿಗೆ ರಜೆ, ನಿವೃತ್ತಿ, ಅಕಾಲಿಕ ಮರಣ ಹಾಗೂ ಇತರೆ ಕಾರಣಗಳಿಂದ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡ ಅವರು, ಮುಂಚಿತವಾಗಿ ಯಾಕೆ ನೇಮಕಾತಿ ಮಾಡಿಕೊಂಡಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಮುಂಬರುವ ದಿನಗಳಲ್ಲಿ ಖಾಲಿ ಇರುವ ಅಂಗನವಾಡಿ ಶಿಕ್ಷಕಿಯರು ಮತ್ತು ಅಡುಗೆ ಸಹಾಯಕರ ಹುದ್ದೆಗಳನ್ನು ಮುಂಚಿತವಾಗಿಯೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜಯಮಾಲಾ ತಿಳಿಸಿದರು. ಈ ಸಂದರ್ಭದಲ್ಲಿ ವಿವರಣೆ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ರಾಮಚಂದ್ರನ್, ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ತಿಳಿಸಿದರು.

ಮಾತೃಪೂರ್ಣ ಯೋಜನೆ: ಬಡ ಮಹಿಳೆಯರು ಹಾಗೂ ಮಹಿಳಾ ಕಾರ್ಮಿಕರು ಹೆರಿಗೆ ಸಂದರ್ಭದಲ್ಲಿ ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸರಕಾರ ಮಾತೃಪೂರ್ಣ ಯೋಜನೆ ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಶೇ.72ರಷ್ಟು ಸಾಧನೆ ಆಗಿದ್ದು, ಇದನ್ನು ಶೇ.90ಕ್ಕೆ ಹೆಚ್ಚಿಸಬೇಕು ಎಂದು ಜಯಮಾಲಾ ಸೂಚನೆ ನೀಡಿದರು.

ಆಹಾರದ ಮೆನು ಪ್ರದರ್ಶಿಸುತ್ತಿಲ್ಲ ಹಾಗೂ ಹಾಜರಾತಿ ರಿಜಿಸ್ಟರ್ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಸಚಿವರ ಗಮನಕ್ಕೆ ತಂದರು.ಇದರ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದ ಅವರು, ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರದ ಅಥವಾ ನಿರ್ಲಕ್ಷ ತೋರಿಸುವ ಅಧಿಕಾರಿಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಭಾಗ್ಯಲಕ್ಷ್ಮಿ ಬಾಂಡ್ ಬಂದಿಲ್ಲ: ಜಿಲ್ಲೆಯಲ್ಲಿ 2008-09ನೇ ಸಾಲಿನ 1553 ಹಾಗೂ 2009-10 ನೇ ಸಾಲಿನ 332 ಭಾಗ್ಯಲಕ್ಷ್ಮಿ ಬಾಂಡ್‌ಗಳು ಬಂದಿಲ್ಲ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಅರ್ಜಿ ಪಡೆದುಕೊಂಡು ಅಗತ್ಯ ದಾಖಲೆಗಳ ಸಮೇತ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗಿದೆ. ಆದಾಗ್ಯೂ ಇನ್ನೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ವಿವರಿಸಿದರು. ಸಭೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೇರಿದಂತೆ ಸಂಬಂಧಪಟ್ಟ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News