ಬೆಂಗಳೂರು: ನ.15 ರಿಂದ ಕೃಷಿ ಮೇಳ ಆರಂಭ

Update: 2018-11-13 16:52 GMT

ಬೆಂಗಳೂರು, ನ. 13: ಪ್ರಸಕ್ತ ಸಾಲಿನ ಕೃಷಿ ಮೇಳವನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನ.15ರಿಂದ ನಾಲ್ಕು ದಿನಗಳವರೆಗೆ ಆಯೋಜಿಸಲಾಗಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ಮೇಳ ನಡೆಯಲಿದ್ದು, ರಾಜ್ಯಪಾಲರಾದ ವಜುಭಾಯಿ ವಾಲಾ ಮೇಳವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹಾಗೂ ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಮೇಳದ ಆಕರ್ಷಣೆಗಳು: ಸುಧಾರಿತ ಬೇಸಾಯ ಪದ್ಧತಿಗಳ ತಾಕುಗಳು, ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು, ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳು ಹಾಗೂ ಮಹತ್ವ, ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು, ಜಲಾನಯನ ನಿರ್ವಹಣೆ. ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ, ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನ ಪ್ರಾತ್ಯಕ್ಷಿಕೆ, ಮಾರುಕಟ್ಟೆ ನೈಪುಣ್ಯತೆ ಮಾಹಿತಿ, ಹವಾಮಾನ ವೈಪರೀತ್ಯ ಕೃಷಿ, ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ರೈತರಿಂದ-ರೈತರಿಗಾಗಿ ಚರ್ಚಾಗೋಷ್ಠಿ ಮೇಳದ ವಿಶೇಷ ಆಕರ್ಷಣೆಯಾಗಿದೆ.

ಇಸ್ರೇಲ್ ತಂತ್ರಜ್ಞಾನ ಚರ್ಚೆ-ಪ್ರಾತ್ಯಕ್ಷಿಕೆ: ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನಗಳಾದ ಹನಿ ನೀರಾವರಿ, ತುಂತುರು ನೀರಾವರಿ, ಹಸಿರು ಮನೆ, ಪ್ಲಾಸ್ಟಿಕ್ ಹೊದಿಕೆ ಮತ್ತು ನೆರಳು ಮನೆ ಬೇಸಾಯದ ಬಗ್ಗೆ ಪ್ರಾತ್ಯಕ್ಷಿಕೆಯ ತಾಕುಗಳು ಮುಖ್ಯ ಆಕಷರ್ಣೆಯಾಗಿರುತ್ತವೆ. ಇತ್ತೀಚೆಗೆ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ವಿಜ್ಞಾನಿಗಳು ರೈತರಿಗೆ ಮಾಹಿತಿ ಇಸ್ರೇಲ್ ಮಾದರಿಯ ಕೃಷಿ ಬಗ್ಗೆ ತಿಳಿಸಲಿದ್ದಾರೆ.

ವಿವಿಧ ತಳಿಗಳ ಪ್ರದರ್ಶನ: ಕುರಿಯಲ್ಲಿ ಸ್ಥಳೀಯ ತಳಿಗಳಾದಂತಹ ಡೆಕ್ಕಣಿ, ಬಂಡೂರು, ಕೆಂಗುರಿ ಹಾಗೂ ವಿದೇಶಿ ತಳಿಗಳಾದಂತಹ ರ್ಯಾಂಬುಲೆ, ಡಾರ್ಫರ್ ಮತ್ತು ಮೆರಿನೋ, ಮೇಕೆಯಲ್ಲಿ ಬ್ಲಾಕ್ ಬೆಂಗಾಲ್, ಜಮ್ನಪಾರಿ, ಶಿರೋ ಮತ್ತು ಬೀತಲ್ ತಳಿಗಳು, ಕೋಳಿಯಲ್ಲಿ ಕಾವೇರಿ, ಗಿರಿರಾಜ, ಗಿರಿರಾಣಿ, ಸ್ವರ್ಣದಾರ ಹಾಗೂ ನಾಟಿ ತಳಿಗಳ ಜೊತೆಗೆ ಖಡಕ್‌ನಾಥ್ (ಮಾಂಸ ಮತ್ತು ರಕ್ತ ಕಪ್ಪುಬಣ್ಣ) ಮುಂತಾದವುಗಳು ಹೆಚ್ಚಿನ ರೀತಿಯಲ್ಲಿ ಆಕರ್ಷಿಸಲಿವೆ.

ರೈತರಿಗೆ ಪ್ರಶಸ್ತಿ: ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಹೆಸರಿನಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಹಾಗೂ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ನೀಡಲಾಗುತ್ತಿದೆ. ಅಲ್ಲದೆ, ಸಿ.ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ, ಡಾ.ಎಂ.ಎಚ್.ಮರಿಗೌಡ ತೋಟಗಾರಿಕಾ ರೈತ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿ, ಜಿಲ್ಲಾ-ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ನೀಡಲಾಗುತ್ತದೆ.

ಕೃಷಿ ವಸ್ತು ಪ್ರದರ್ಶನ: ಕೃಷಿ ಮೇಳದಲ್ಲಿ 650ಕ್ಕೂ ಅಧಿಕ ಮಳಿಗೆಗಳು ಇರಲಿದ್ದು, ರಾಜ್ಯದ ಕೃಷಿ ವಿಶ್ವದ್ಯಾನಿಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಂಗ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಕೃಷಿ ಪರಿಕರಗಳ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ವಿವಿಧ ರೈತ ಪರ ಸಂಘ - ಸಂಸ್ಥೆಗಳು ಭಾಗವಹಿಸಲಿವೆ.

ಮಾಹಿತಿಯೊಂದಿಗೆ ಮನರಂಜನೆ: ಕೃಷಿ ಸಿರಿಯಲ್ಲಿ ಕೃಷಿ ಜ್ಞಾನ ಭಂಡಾರದ ಜತೆಗೆ ನಮ್ಮ ನಾಡಿನ ಸಾಂಸ್ಕೃತಿಕ ಕಲಾ ವೈಭವಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ರೈತರಿಗೆ ಮತ್ತು ಕೃಷಿ ಆಸಕ್ತರಿಗೆ ಜ್ಞಾನದೊಂದಿಗೆ ಮನರಂಜನೆಯ ಮಹಾಪೂರ ದೊರೆಯಲಿದೆ.

ಬಿಡುಗಡೆಗೆ ಸಿದ್ಧವಾಗಿರುವ ನೂತನ ತಳಿಗಳು

*ರಾಗಿ- ಕೆ.ಎಂ.ಆರ್-630, * ಸೂರ್ಯಕಾಂತಿ- ಕೆ.ಬಿ.ಎಸ್.ಹೆಚ್-78, * ಸೋಯಾ ಅವರೆ - ಕೆಬಿಎಸ್-23 ಮತ್ತು * ಅಕ್ಕಿ ಅವರೆ -ಕೆಬಿಆರ್-1

ವಿಶೇಷ ಸವಲತ್ತುಗಳು: ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ. ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ.

ಕೃಷಿ ಮೇಳಕ್ಕೆ ಉಚಿತ ಪ್ರವೇಶ.

ವಿಶ್ವವಿದ್ಯಾಲಯದ ಮಹಾದ್ವಾರದಿಂದ ಕೃಷಿ ಮೇಳದ ದಾಖಲಾತಿ ಸ್ಥಳಕ್ಕೆ ತಲುಪಲು ಕೃಷಿವಿಶ್ವದ್ಯಾನಿಲಯದ ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News