ಅನ್ವರ್ ಮಾಣಿಪ್ಪಾಡಿ ವರದಿ ವಿಚಾರ: ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್

Update: 2018-11-13 16:58 GMT

ಬೆಂಗಳೂರು, ನ.13: ಅನ್ವರ್ ಮಾಣಿಪ್ಪಾಡಿ ವರದಿಯನ್ನು ಮಂಡಿಸಿಲ್ಲ ಎಂಬ ಆಕ್ಷೇಪಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಿಕೊಳ್ಳುವುದಾಗಿ ಹೈಕೋರ್ಟ್ ಮತ್ತೊಮ್ಮೆ ಎಚ್ಚರಿಸಿದೆ.

ವರದಿಯನ್ನು 2016ರ ಫೆಬ್ರವರಿಯಲ್ಲಿ ಮಂಡಿಸಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಆದರೆ, ಇನ್ನೂ ಸಲ್ಲಿಸಿಲ್ಲ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಕೆ.ಕಾಂತ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ಎಚ್.ಪಿ.ಸಂದೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ದಿನೇಶ್ ರಾವ್ ಅವರು, ಈ ಹಿಂದಿನ ಆದೇಶ ಪ್ರಶ್ನಿಸಿ ಈಗಾಗಲೇ ಮರು ಪರಿಶೀಲನಾ ಅರ್ಜಿ ವಿಚಾರಣೆ ಹಂತದಲ್ಲಿದೆ ಎಂದು ಪುನರುಚ್ಚರಿಸಿದರು. ಆದರೆ, ಇದನ್ನು ಒಪ್ಪದ ನ್ಯಾಯಪೀಠ, ಈ ಕುರಿತಂತೆ ನಿಮಗೆ ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಇದೇ 27ರಂದು ನಡೆಸಲಾಗುವುದು. ಅಷ್ಟರಲ್ಲಿ ಪುನರ್ ಪರಿಶೀಲನಾ ಅರ್ಜಿಗೆ ಸಂಬಂಧಿಸಿದ ಆದೇಶ ಪಡೆದು ಅದನ್ನು ಹಾಜರುಪಡಿಸಿ. ಇಲ್ಲದೇ ಹೋದರೆ, 27ರಂದು ಪ್ರಧಾನ ಕಾರ್ಯದರ್ಶಿ ಕೋರ್ಟ್‌ಗೆ ಖುದ್ದು ಹಾಜರಾಗಬೇಕು ಎಂದು ಆದೇಶಿಸಿದೆ.

ರಾಜ್ಯದಾದ್ಯಂತ ವಕ್ಫ್ ಮಂಡಳಿ ಸ್ಥಿರಾಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ 2012ರ ಮಾರ್ಚ್ 26ರಂದು ಅಂದಿನ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News