ನ.19 ರಿಂದ ರಾಷ್ಟ್ರೀಯ ಐಕ್ಯತಾ ಸಪ್ತಾಹ

Update: 2018-11-13 17:02 GMT

ಬೆಂಗಳೂರು, ನ.13: ನವೆಂಬರ್ 19 ರಿಂದ 25 ರವರೆಗೆ ರಾಜ್ಯಾದ್ಯಂತ ರಾಷ್ಟ್ರೀಯ ಐಕ್ಯತಾ ಸಪ್ತಾಹ ವನ್ನು ಆಚರಿಸಲಾಗುತ್ತಿದ್ದು, ಅದರಂತೆ ರಾಷ್ಟ್ರದ ಸ್ವಾತಂತ್ರ ಹಾಗೂ ಐಕ್ಯತೆಯನ್ನು ಬಲಪಡಿಸಲು, ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಕೋಮುದ್ವೇಷವನ್ನು ತಡೆಗಟ್ಟುವುದಕ್ಕಾಗಿ ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲು ವಾರವಿಡಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ನ.19 ರಂದು ರಾಷ್ಟ್ರೀಯ ಐಕ್ಯತಾ ದಿನದ ಅಂಗವಾಗಿ ಅಹಿಂಸೆ, ಕೋಮು ಸೌಹಾರ್ದತೆ, ಜಾತ್ಯತೀತತೆ ಕುರಿತ ವಿಚಾರ ಸಂಕಿರಣ. ನ. 20ರಂದು ಅಲ್ಪಸಂಖ್ಯಾತರ ಕಲ್ಯಾಣ ದಿನದ ಅಂಗವಾಗಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂಪಿಸಿರುವ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಕೋಮು ಗಲಭೆಪೀಡಿತ ಪ್ರದೇಶಗಳಲ್ಲಿ ಭ್ರಾತೃತ್ವ ಭಾವನೆ ಬೆಳಸುವಂತೆ ಮೆರವಣಿಗೆಗಳನ್ನು ಏರ್ಪಡಿಸಲಾಗುವುದು.

ನ.21 ರಂದು ಭಾಷಾ ಸೌಹಾರ್ದತಾ ದಿನ ಭಾರತದ ಇತರ ಪ್ರದೇಶಗಳ ಭಾಷಾ ಪರಂಪರೆಯನ್ನು ಮತ್ತೊಂದು ಪ್ರದೇಶದ ಜನತೆಗೆ ತಿಳಿ ಹೇಳುವ ಸಲುವಾಗಿ ವಿಶೇಷ ಸಾಹಿತ್ಯಕ ಸಮಾರಂಭ ಮತ್ತು ಕವಿಸಮ್ಮೇಳನ, ನವೆಂಬರ್ 22 ರಂದು ದುರ್ಬಲ ವರ್ಗಗಳ ದಿನದ ಅಂಗವಾಗಿ ಭೂಹೀನ ಕೃಷಿ ಕಾರ್ಮಿಕರಿಗೆ ಹೆಚ್ಚುವರಿ ಜಮೀನು ಮಂಜೂರಾತಿ ಕಾರ್ಯಕ್ರಮ ಸೇರಿದಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿಗೆ ಸರಕಾರ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮ ಮತ್ತು ಮರೆವಣಿಗೆ ಏರ್ಪಡಿಸುವುದು.

ನ.23 ರಂದು ಸಾಂಸ್ಕೃತಿಕ ಏಕತಾ ದಿನ ಅಂಗವಾಗಿ ಭಾರತೀಯ ಪರಂಪರೆಯಾದ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವಂತೆ ಸಂಸ್ಕೃತಿ ಮತ್ತು ಐಕ್ಯತೆಯನ್ನು ಸಂರಕ್ಷಿಸುವ ಕಾರ್ಯಕ್ರಮ. ನ. 24 ರಂದು ಮಹಿಳಾ ದಿನದ ಅಂಗವಾಗಿ ಭಾರತೀಯ ಸಮಾಜದಲ್ಲಿ ಮಹಿಳೆಯರ ಪ್ರಾಮುಖ್ಯತೆ ರಾಷ್ಟ್ರ ನಿರ್ಮಾಣ ಹಾಗೂ ಪ್ರಗತಿಯಲ್ಲಿ ಅವರ ಪಾತ್ರವನ್ನು ತೋರಿಸುವಂತಹ ಕಾರ್ಯಕ್ರಮ.

ನ. 25 ರಂದು ಪರಿಸರ ರಕ್ಷಣಾ ದಿನ ಅಂಗವಾಗಿ ಜನಸಾಮಾನ್ಯರಿಗೆ ಪರಿಸರದ ಬಗ್ಗೆ ಹಾಗೂ ಅದನ್ನು ಉಳಿಸಿ ಬೆಳೆಸಲು ತಿಳುವಳಿಕೆ ಹೇಳುವ ಸಭೆ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News