ಬೆಂಗಳೂರು: ಯುವತಿಯರ ಕಳ್ಳ ಸಾಗಣೆ; ಉಡುಪಿ ಮೂಲದ ವ್ಯಕ್ತಿಯ ಬಂಧನ

Update: 2018-11-14 15:01 GMT

ಬೆಂಗಳೂರು, ನ.14: ಯುವತಿಯರನ್ನು ಕಳ್ಳ ಸಾಗಣೆ ಮಾಡಿಕೊಂಡು ಅಕ್ರಮ ಬಂಧನದಲ್ಲಿರಿಸಿದ್ದ, ಉಡುಪಿ ಮೂಲದ ಪ್ರವೀಣ್ ಶೆಟ್ಟಿ ಅನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 14 ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಅಂಚೆಯ ಹೇರೂರು ಹೋಯಿಗೆ ಮನೆಯ ಪ್ರವೀನ್ ಶೆಟ್ಟಿ, ಬೆಂಗಳೂರಿನ ಪಾಪರೆಡ್ಡಿಪಾಳ್ಯದಲ್ಲಿ ನೆಲೆಸಿದ್ದ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಏನಿದು ಪ್ರಕರಣ: ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹೊರರಾಜ್ಯದ ಯುವತಿಯರನ್ನು ಕರೆತಂದಿದ್ದ ಆರೋಪಿ ಪ್ರವೀನ್‌ ಶೆಟ್ಟಿ, ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಮನೆಯೊಂದರಲ್ಲಿ ಅವರನ್ನು ಹೊರಗಡೆ ಎಲ್ಲಿಯೂ ಕಳುಹಿಸದೇ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದ. ಈ ಸಂಬಂಧ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಆರೋಪಿ ಪ್ರವೀನ್ ಶೆಟ್ಟಿ ಬಂಧನದಿಂದ, ಹೊಸದಿಲ್ಲಿ ಮೂಲದ 3, ಪಂಜಾಬ್ ಮೂಲದ 3, ಬಾಂಬೆ ಮೂಲದ 4, ರಾಜಸ್ತಾನ ಮೂಲದ 4 ಮತ್ತು ಉತ್ತರ ಪ್ರದೇಶ ಮೂಲದ ಓರ್ವ ಯುವತಿ ಸೇರಿಂದತೆ ಒಟ್ಟು 14 ನೊಂದ ಯುವತಿಯರನ್ನು ಸಂರಕ್ಷಣೆ ಮಾಡಿ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಸಿಪಿ ಬಿ.ಎಸ್.ಮೋಹನ್‌ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಆಯಿಷಾ, ಸಿಬ್ಬಂದಿಗಳಾದ ಪದ್ಮಜಾ, ಶಶಿಧರ್, ನಂದೀಶ್ ಕೆ.ಆರ್. ಮತ್ತು ರಮೇಶ್ ಅವರ ತಂಡವನ್ನು ಸಿಸಿಬಿ ಹೆಚ್ಚುವರಿ ಆಯುಕ್ತ ಆಲೋಕ್ ಕುಮಾರ್ ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News