ಶ್ರುತಿ ಹರಿಹರನ್ ಬಗ್ಗೆ ಅಶ್ಲೀಲ ಕಮೆಂಟ್ ವಿರುದ್ಧ ಕ್ರಮ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ

Update: 2018-11-14 15:17 GMT
ನಟಿ ಶ್ರುತಿ ಹರಿಹರನ್

ಬೆಂಗಳೂರು, ನ.14: ಲೈಂಗಿಕ ಕಿರುಕುಳ ಸಂಬಂಧ ಧ್ವನಿಗೂಡಿಸಿರುವ ನಟಿ ಶ್ರುತಿ ಹರಿಹರನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಮೆಂಟ್‌ಗಳನ್ನು ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಠಾಣಾ ಪೊಲೀಸರಿಗೆ ಲಿಖಿತ ದೂರು ನೀಡಿ, ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್, ವಕೀಲ ಅನಂತ್ ನಾಯ್ಕ ಅವರೊಂದಿಗೆ ಬುಧವಾರ ನಗರದ ಕೆಜಿ ರಸ್ತೆಯಲ್ಲಿರುವ ಮಹಿಳಾ ಆಯೋಗ ಕಚೇರಿಗೆ ಹಾಜರಾಗಿದ್ದ ಬಗ್ಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶ್ರುತಿ ಅವರ ಮೊಬೈಲ್‌ಗೆ ಅನ್ಯ ವ್ಯಕ್ತಿಗಳು ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ. ಈ ಹಿನ್ನೆಲೆ ನಾನು ಲಿಖಿತ ರೂಪದಲ್ಲಿ ದೂರು ತೆಗೆದುಕೊಂಡಿದ್ದೇನೆ. ಇದನ್ನು ಸೈಬರ್ ಕ್ರೈಂಗೆ ಹಸ್ತಾಂತರಿಸುತ್ತೇನೆ. ನನಗೆ ಅಶ್ಲೀಲ ಸಂದೇಶ ಬಂದಿರುವ ಬಗ್ಗೆ ಸಾಕ್ಷವೂ ಇದೆ. ಈ ಹಿನ್ನೆಲೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಟ ಅರ್ಜುನ್ ಸರ್ಜಾ ಮೇಲೆ ಮಾಡಿರುವ ಆರೋಪದ ಪ್ರಕರಣ ಒಂದು ತಿಂಗಳಿನಿಂದ ನಡೆಯುತ್ತಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಹಾಗಾಗಿ, ಎಲ್ಲವನ್ನೂ ಬಹಿರಂಗವಾಗಿ ಮಾಧ್ಯಮಗಳಿಗೆ ತಿಳಿಸಲು ಆಗುವುದಿಲ್ಲ ಎಂದು ನಾಗಲಕ್ಷ್ಮೀ ಬಾಯಿ ಹೇಳಿದರು.

ನಟಿ ಶ್ರುತಿ ಹರಿಹರನ್ ಮಾತನಾಡಿ, ಚಿತ್ರರಂಗದ ಇತರೆ ನಟಿಯರು ಬೆಂಬಲ ಸೂಚಿಸಿಲ್ಲ ಎನ್ನುವ ಬಗ್ಗೆ ಬೇಸರ ಇಲ್ಲ. ನನ್ನ ಹೋರಾಟವನ್ನು ಧೈರ್ಯದಿಂದ ನಾನೇ ಮುಂದುವರೆಸುತ್ತೇನೆ ಎಂದು ತಿಳಿಸಿದರು.

ಲೈಂಗಿಕ ಕಿರುಕುಳದಲ್ಲಿ ನೊಂದ ಎಲ್ಲ ಹೆಣ್ಣು ಮಕ್ಕಳಿಗೂ ನ್ಯಾಯ ಸಿಗಬೇಕು. ನಾನೇನು ಸುಮ್ಮನೆ ಈ ರೀತಿ ಆರೋಪ ಮಾಡಿಲ್ಲ. ನನ್ನ ಬಳಿ ಸಾಕ್ಷಧಾರ ಇದೆ. ಅವುಗಳನ್ನು ಮಹಿಳಾ ಆಯೋಗಕ್ಕೂ ನೀಡಿದ್ದೇನೆ ಎಂದು ನುಡಿದರು.

ಸರ್ಜಾ ವಿಚಾರಣೆಗೆ ಒತ್ತಾಯ

ಲೈಂಗಿಕ ಕಿರುಕುಳದ ಆರೋಪಿ ಎನ್ನಲಾದ ನಟ ಅರ್ಜುನ್ ಸರ್ಜಾ ಅವರನ್ನು ಮಹಿಳಾ ಆಯೋಗ ವಿಚಾರಣೆಗೊಳಪಡಿಸಬೇಕು ಎಂದು ಶ್ರುತಿ ಹರಿಹರನ್ ಪರ ವಕೀಲ ಅನಂತ್ ನಾಯ್ಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News