ಭತ್ತಕ್ಕೆ ಬೆಂಬಲ ಬೆಲೆ: ಕೇಂದ್ರಕ್ಕಿಂತಲೂ ಹೆಚ್ಚಿನ ಬೆಲೆ ನೀಡಲು ಯಡಿಯೂರಪ್ಪ ಆಗ್ರಹ

Update: 2018-11-14 15:19 GMT

ಬೆಂಗಳೂರು, ನ. 14: ರಾಜ್ಯ ಸರಕಾರ ಕೂಡಲೇ ಕೇಂದ್ರ ಸರಕಾರದೊಂದಿಗೆ ಸಮಾಲೋಚನೆ ನಡೆಸಿ, ಈಗಾಗಲೇ ಕೇಂದ್ರ ನಿಗದಿಪಡಿಸಿರುವ ಬೆಂಬಲ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ಕೇಂದ್ರ ನಿಗದಿಪಡಿಸಿರುವ ಬೆಲೆಗಿಂತ ಹೆಚ್ಚಿನ ಬೆಲೆ ನಿಗದಿಪಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,600 ರೂ.ಬೆಲೆ ಘೋಷಿಸಿದ್ದಾರೆ. ಆದರೆ, ಕೇಂದ್ರ ಸರಕಾರ 5 ತಿಂಗಳ ಹಿಂದೆಯೇ ಭತ್ತ ಸೇರಿದಂತೆ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಕೇಂದ್ರ ಸರಕಾರ ಗುಣಮಟ್ಟದ ಭತ್ತಕ್ಕೆ 1,770 ರೂ., ಸಾಮಾನ್ಯ ಭತ್ತಕ್ಕೆ 1,770 ರೂ. ನಿಗದಿಪಡಿಸಿದೆ.

ರಾಗಿ ಪ್ರತಿ ಕ್ವಿಂಟಾಲ್‌ಗೆ 1,900 ರೂ.ಗಳಿಂದ 2,897 ರೂ.ಬೆಂಬಲ ಬೆಲೆ ಹೆಚ್ಚಿಸಿದೆ. ದುರಂತವೆಂದರೆ ರಾಜ್ಯ ಸರಕಾರ ಈ ವಿಷಯವನ್ನು ಪರಿಗಣಿಸದೇ ಇದೀಗ ಭತ್ತಕ್ಕೆ ಮಾತ್ರ ಬೆಂಬಲ ಬೆಲೆ ಘೋಷಿಸಿದೆ ಎಂದು ಯಡಿಯೂರಪ್ಪ, ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಲಮನ್ನಾ ಮಾಡಲಾಗದೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಮುಂದುವರಿಸಿರುವ ರಾಜ್ಯ ಸರಕಾರ, ರೈತರ ಕಣ್ಣಿಗೆ ಮಣ್ಣೆರಚುತ್ತಿದ್ದು, ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ರೈತರಿಗೆ ದ್ರೋಹ ಬಗೆಯುತ್ತಿರುವುದು ಖಂಡನೀಯ ಎಂದು ಬಿಎಸ್‌ವೈ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News