ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ನ.16 ರಿಂದ ರಾಜ್ಯವ್ಯಾಪಿ ಸೀರತ್ ಅಭಿಯಾನ

Update: 2018-11-14 15:29 GMT

ಬೆಂಗಳೂರು, ನ. 14: ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ಧ್ಯೇಯ ವಾಕ್ಯದಡಿ ನ.16 ರಿಂದ ಹದಿನೈದು ದಿನಗಳವರೆಗೆ ರಾಜ್ಯವ್ಯಾಪಿ ಸೀರತ್ ಅಭಿಯಾನವನ್ನು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಯಾನ ಸಮಿತಿಯ ಸಂಚಾಲಕ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಪ್ರವಾದಿ ಮುಹಮ್ಮದ್‌ರ ಜೀವನ ಹಾಗೂ ಸಂದೇಶವು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾಗಿದ್ದು, ಅವರ ಜೀವನ ಮತ್ತು ಸಾಧನೆಗಳು ಸರ್ವಧರ್ಮೀಯ ಜ್ಞಾನಿಗಳ ಮೆಚ್ಚುಗೆ ಪಡೆದು, ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದ್ದು, ನೈಜ ಜಾಗತಿಕ ನಾಯಕನೆಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದ್‌ರ ಪ್ರಸ್ತುತತೆ ಪಡಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಫ್ಯಾಸಿಸ್ಟ್ ಹಾಗೂ ಕೋಮುವಾದಿ ಶಕ್ತಿಗಳು ದ್ವೇಷ ಮತ್ತು ವರ್ಗೀಯ ಸಂಘರ್ಷಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅನ್ಯಾಯ, ಹಿಂಸೆ, ದೌರ್ಜನ್ಯ, ಅರಾಜಕತೆ, ಗುಂಪು ಹತ್ಯೆ, ಭ್ರಷ್ಟಾಚಾರ, ಅತ್ಯಾಚಾರ, ಬಡವರ ಹಾಗೂ ದುರ್ಬಲರ ಶೋಷಣೆ ದೈನಂದಿನ ಸುದ್ದಿಗಳಾಗಿಬಿಟ್ಟಿವೆ. ಆಚಾರ ಮತ್ತು ವಿಚಾರಗಳಲ್ಲಿ ನೈಜ ನಾಯಕತ್ವದ ಕೊರತೆ ಕಂಡು ಬರುತ್ತಿದೆ. ಮಾನವೀಯತೆ ವಿನಾಶದ ಅಂಚಿನಲ್ಲಿದ್ದು ಭವಿಷ್ಯ ಕರಾಳವಾಗಿ ಕಾಣುತ್ತಿದೆ ಎಂದರು.

ಆರ್ಥಿಕ ಶೋಷಣೆ, ಸಾಮಾಜಿಕ ತಾರತಮ್ಯ, ಮಹಿಳೆಯರು ಮತ್ತು ದುರ್ಬಲರ ಮೇಲೆ ಅತಿರೇಕ ಹಾಗು ನೈತಿಕ ಅಧಃಪತನ ಇತ್ಯಾದಿಗಳನ್ನು ಪ್ರವಾದಿಯವರ ಆದರ್ಶ ಮತ್ತು ತತ್ವಗಳನ್ನು ಪಾಲಿಸುವುದರ ಮೂಲಕ ಸರಿಪಡಿಸಬಹುದು. ಅವರು ಇಂದು ಮಾನವೀಯತೆಗೆ ಅಗತ್ಯವಿರುವ ನೈಜ ಜಾಗತಿಕ ನಾಯಕ, ಮಾನವ ಕುಲಕ್ಕೆ ಅನುಗ್ರಹ ಮತ್ತು ನೈತಿಕತೆಯ ಬೆಳಕಾಗಿದ್ದಾರೆ ಎಂದು ತಿಳಿಸಿದರು.

ಮೌಲಾನಾ ಮಕ್ಸೂದ್ ಇಮ್ರಾನ್ ರಷಾದಿ ಮಾತನಾಡಿ, ಇಂದು ಸಮಾಜದಲ್ಲಿ ದ್ವೇಷ, ಹಿಂಸೆ, ಸ್ವಾರ್ಥ ಮತ್ತು ವೈರತ್ವ ವ್ಯಾಪಕವಾಗುತ್ತಿರುವ ಸಮಯದಲ್ಲಿ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯ ಪರವಾಗಿ ಎದ್ದು ನಿಲ್ಲೋಣ ಹಾಗೂ ಇವುಗಳ ಮೂಲಕ ದೇಶ ಮತ್ತು ಜಗತ್ತಿನ ಉಜ್ವಲ ಭವಿಷ್ಯವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.

ಪೂರ್ವಗ್ರಹ ಮತ್ತು ಸ್ವಾರ್ಥಗಳ ಬೆನ್ನತ್ತಿ ಮಾನವ ದಾರಿ ತಪ್ಪಿದಂತಹ ಪ್ರತಿಯೊಂದು ಕಾಲ ಘಟ್ಟದಲ್ಲಿ ಮಾನವರಿಗೆ ದೇವನ ಸಂದೇಶ ನೆನಪಿಸಲು ಜಗತ್ತಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಪ್ರವಾದಿಗಳನ್ನು ಕಳುಹಿಸಲಾಯಿತು. ಅವರು ಸಮಾಜವನ್ನು ಸುಧಾರಿಸಲು ಅವಿರತ ಶ್ರಮಿಸಿದರು. 1,24,000 ಪ್ರವಾದಿಗಳು ಲೋಕಕ್ಕೆ ಆಗತರಾದರೆಂದು ಪ್ರವಾದಿಯವರ ಬೋಧನೆಯಲ್ಲಿ ವರದಿಯಾಗಿದೆ ಎಂದು ಹೇಳಿದರು.

ಗತಕಾಲದ ಪ್ರವಾದಿಗಳು ಮತ್ತು ದೈವಿಕ ಗ್ರಂಥಗಳಾದ ಬೈಬಲ್‌ನ ಹಳೆ ಮತ್ತು ಹೊಸ ಒಡಂಬಡಿಕೆ, ಅಥರ್ವವೇದ, ಭವಿಷ್ಯ ಪುರಾಣ, ಪಾರ್ಸಿ ದಸಾತಿರ್‌ನಲ್ಲಿ ಪ್ರವಾದಿಯವರ ಬರುವಿಕೆಯ ಕುರಿತು ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ಮಾಹಿತಿ ನೀಡಿದರು.

ಸಮಿತಿಯ ಅಧ್ಯಕ್ಷ ಮುಹಮ್ಮದ್ ಅತ್ತರುಲ್ಲಾ ಷರೀಫ್ ಮಾತನಾಡಿ, ಅಭಿಯಾನ ಅಂಗವಾಗಿ ರಾಜ್ಯದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರವಾದಿ ಮುಹಮ್ಮದ್‌ರ ಬಗ್ಗೆ ಜಗತ್ತಿನ ಪ್ರಸಿದ್ಧ ದಾರ್ಶನಿಕರ ಅನಿಸಿಕೆಗಳು ಮತ್ತು ನಾಡಿನ ಹೆಸರಾಂತ ಸಾಹಿತಿಗಳು ಬರೆದಿರುವ ಲೇಖನಗಳ ಪುಸ್ತಕಗಳನ್ನು ಹೊರತರಲಾಗುವುದು. ರಾಜ್ಯಾದ್ಯಂತ ಬೃಹತ್ ಸಮ್ಮೇಳನಗಳು, ವಿಚಾರಗೋಷ್ಠಿಗಳು, ವಸ್ತುಪ್ರದರ್ಶನ, ಸಾಮಾಜಿಕ ಕಾರ್ಯಚಟುವಟಿಕೆಗಳಾದ ಸ್ವಚ್ಛತಾ ಅಭಿಯಾನ, ಸಸಿ ನೆಡುವುದು, ಸೌಹಾರ್ದತೆಗಾಗಿ ಮಾನವ ಸರಪಳಿ ಹಾಗೂ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News