ನಾಡಗೀತೆ ಎರಡೂವರೆ ನಿಮಿಷಗಳಿಗೆ ಸೀಮಿತಗೊಳಿಸಲು ನಿರ್ಧಾರ

Update: 2018-11-14 15:56 GMT

ಬೆಂಗಳೂರು, ನ.14: ಪುನರಾವರ್ತನೆ ಮಾಡದೆ ನಾಡಗೀತೆಯನ್ನು ಎರಡೂವರೆ ನಿಮಿಷಗಳಲ್ಲಿ ಹಾಡಿ ಮುಗಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದ್ದು, ಈ ಸಂಬಂಧ ಎರಡು ದಿನಗಳಲ್ಲಿ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ.

ಬುಧವಾರ ನಗರದ ಕಸಾಪದಲ್ಲಿ ನಡೆದ ಸಾಹಿತಿ, ಗಾಯಕರ ಹಾಗೂ ಹೋರಾಟಗಾರರ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡಿದ್ದು, ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಅಪಭ್ರಂಶವಿಲ್ಲದೆ, ಯಾವುದೇ ಪದಗಳನ್ನು ತೆಗೆಯದೆ ಎರಡೂವರೆ ನಿಮಿಷದಲ್ಲಿ ಹಾಡಬಹುದು ಎಂದು ಅಭಿಪ್ರಾಯ ಬಂದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್, ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಯನ್ನು ಇದೀಗ ಸಭೆ, ಸಮಾರಂಭಗಳಲ್ಲಿ 8-9 ನಿಮಿಷಗಳ ಕಾಲ ಹಾಡಲಾಗುತ್ತಿದೆ. ಇದರಿಂದ ವಯಸ್ಸಾದವರು, ಅನಾರೋಗ್ಯಪೀಡಿತರು ಹಾಗೂ ಅಸಹಾಯಕರಿಗೆ ಹೆಚ್ಚು ಸಮಯ ನಿಲ್ಲಲು ಹಾಗೂ ಕೇಳಿಸಿಕೊಳ್ಳಲು ಕಷ್ಟ. ಹೀಗಾಗಿ, ನಾಡಗೀತೆಯನ್ನು ಕಡಿತ ಮಾಡಬೇಕು ಎಂಬ ಅಭಿಪ್ರಾಯ ಬಂದಿದ್ದರಿಂದ ಸಭೆ ನಡೆಸಲಾಗಿದೆ. ಅದರಲ್ಲಿ ಹಾಡನ್ನು ಪುನರಾವರ್ತನೆಯಾಗದಂತೆ ಯಾವುದೇ ಧಾಟಿಯಲ್ಲಿ ಹಾಡಿದರೂ ಎರಡೂವರೆ ನಿಮಿಷದೊಳಗೆ ಹಾಡಬಹುದು ಎಂಬುದನ್ನು ದಾಖಲಿಸಿದ್ದೇವೆ ಎಂದು ಹೇಳಿದರು.

ನಾಡಗೀತೆ ಹಾಡುವ ಧಾಟಿಗೆ ಸಂಬಂಧಿಸಿದಂತೆ ಈಗಾಗಲೇ ಸಾಹಿತಿಗಳಾದ ಜಿ.ಎಸ್. ಶಿವರುದ್ರಪ್ಪ ಮತ್ತು ವಸಂತ ಕನಕಾಪುರ ಅವರ ಸಮಿತಿಗಳು ನೀಡಿರುವ ವರದಿಗಳು ಸರಕಾರದ ಮಟ್ಟದಲ್ಲಿವೆ. ಅವು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೆ, ಕಸಾಪದಿಂದ ನಮಗೆ ಧಾಟಿಯ ಕುರಿತಾದ ಯಾವುದೇ ಆಕ್ಷೇಪಗಳಿಲ್ಲ. ನಾವು ಕೇವಲ ಅವಧಿಯ ಬಗ್ಗೆ ಚರ್ಚಿಸಿ, ನಿರ್ಧರಿಸಿದೆವು. ಆದರೆ ಸರಕಾರದ ಮಟ್ಟದಲ್ಲಿರುವ ಹಳೆಯ ವರದಿಗಳನ್ನು ಸರಕಾರ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಚಂದ್ರಶೇಖರ ಪಾಟೀಲ, ನಾಡೋಜ ಕಮಲಾ ಹಂಪನಾ, ಡಾ. ದೊಡ್ಡರಂಗೇಗೌಡ, ಬಿ.ಟಿ. ಲಲಿತಾ ನಾಯಕ್ ಮತ್ತಿತರ ಸಾಹಿತಿಗಳು, ವೈ.ಕೆ. ಮುದ್ದುಕೃಷ್ಣ, ಮುದ್ದುಮೋಹನ್, ಆನಂದ ಮಾದಲಗೆರೆ, ಕಿಕ್ಕೇರಿ ಕೃಷ್ಣಮೂರ್ತಿ ಮತ್ತಿತರ ಗಾಯಕರು, ರಾ.ನಂ. ಚಂದ್ರಶೇಖರ್, ಸತೀಶ್‌ಗೌಡ, ತಿಮ್ಮಯ್ಯ ಮತ್ತಿತರ ಕನ್ನಡಪರ ಹೋರಾಟಗಾರರು ಸೇರಿದಂತೆ ಒಟ್ಟಾರೆ 33 ಮಂದಿ ಭಾಗವಹಿಸಿದ್ದರು.

ಇವರೆಲ್ಲರ ಸಮ್ಮುಖದಲ್ಲಿ ನಾಡಗೀತೆಯ ಅವಧಿಯ ಬಗ್ಗೆ ಚರ್ಚೆಯಾಯಿತು. ಈ ವೇಳೆ ಆನಂದ ಮಾದಲಗೆರೆ, ಮೃತ್ಯುಂಜಯ ದೊಡ್ಡವಾಡ ಅವರು ಸಭೆಯಲ್ಲಿ ನಾಡಗೀತೆಯನ್ನು ಹಾಡಿದರು. ಯಾವುದೇ ಅಪಭ್ರಂಶವಿಲ್ಲದೆ, ಅವಸರವೂ ಇಲ್ಲದೆ ಅತ್ಯಂತ ಸೊಗಸಾಗಿ 2.18 ನಿಮಿಷದಲ್ಲಿ ಹಾಡಿ ಮುಗಿಸಿದರು. ಹೀಗಾಗಿ ಎರಡರಿಂದ ಎರಡೂವರೆ ನಿಮಿಷದಲ್ಲಿ ನಾಡಗೀತೆಯ ಅವಧಿಯನ್ನು ನಿಗದಿಗೊಳಿಸಬಹುದು ಎಂಬುದನ್ನು ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕೆ ಕವಿ ನಿಸಾರ್ ಅಹಮದ್ ಪತ್ರ ಬರೆದು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮನು ಬಳಿಗಾರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News