ಸಿಎಂ ಕುಮಾರಸ್ವಾಮಿ 12 ವರ್ಷದ ಹಗೆ ಸಾಧಿಸುತ್ತಿದ್ದಾರೆ: ಜನಾರ್ದನ ರೆಡ್ಡಿ ವಾಗ್ದಾಳಿ

Update: 2018-11-14 16:06 GMT

ಬೆಂಗಳೂರು, ನ.14: ಆ್ಯಂಬಿಡೆಂಟ್ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನರೆಡ್ಡಿ ಅವರು ನಾಲ್ಕು ದಿನಗಳ ಕಾಲ ಜೈಲುವಾಸದ ಬಳಿಕ ಬುಧವಾರ ಸಂಜೆ ಬಿಡುಗಡೆಯಾದರು.

ದೋಸ್ತಿ ಸರಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಜೈಲಿಗೆ ತಳ್ಳಿದೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳನ್ನು ಬಳಸಿಕೊಂಡು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವತಃ ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ಜನಾರ್ದನರೆಡ್ಡಿ ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಹರಿಹಾಯ್ದರು. 12 ವರ್ಷದ ಹಿಂದಿನ ದ್ವೇಷ ತೀರಿಸಿಕೊಳ್ಳಲು ಕುಮಾರಸ್ವಾಮಿ ಈ ಸಂಚು ರೂಪಿಸಿದ್ದಾರೆ ಎಂದು ಅವರು ದೂರಿದರು. ಅವರಿಂದಾಗಿ ಪ್ರಾಮಾಣಿಕ ಅಧಿಕಾರಿಗಳು ತಲೆತಗ್ಗಿಸಬೇಕಾಗಿ ಬಂದಿದೆ ಎಂದರು.

ಜೈಲಿನಿಂದ ಹೊರಬರುತ್ತಿದ್ದಂತೆ ಇತ್ತೀಚೆಗೆ ಇಹಲೋಕ ತ್ಯಜಿಸಿರುವ ಕೇಂದ್ರ ಸಚಿವ ಅನಂತಕುಮಾರ್ ಅವರನ್ನು ನೆನೆದು ಬಾವುಕರಾದ ರೆಡ್ಡಿ, ಅವರ ಅಂತಿಮ ದರ್ಶನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಅವರ ಜತೆಗೆ ಒಡನಾಟದ ಕುರಿತು ಮಾಹಿತಿ ಹೊರಹಾಕಿದರು. ನನ್ನ ಎಲ್ಲ ಶ್ರೇಯಸ್ಸಿಗೆ ಅನಂತಕುಮಾರ್ ಅವರೇ ಕಾರಣ ಎಂದು ಹೇಳಿದ ಅವರು, ನೆಲದ ಮೇಲೆ ನಡಿ, ಆಕಾಶದಲ್ಲಿ ಹಾರಾಡಬೇಡ ಎಂದು ಕಿವಿಮಾತು ಹೇಳಿದ್ದರು. ಅವರ ಸೂಚನೆ ಮೇರೆಗೆ ನಾನು ಒಎಂಸಿಗೆ ಹಣ ಹೂಡಿಕೆ ಮಾಡಿದ್ದು, ಅದಾದ ಬಳಿಕ ನಾನು ಎತ್ತರಕ್ಕೆ ಬೆಳೆದೆ ಎಂದು ಹೇಳಿಕೆ ನೀಡಿದ್ದಾರೆ.

ನಾನು ಸಮಾಧಾನವಾಗಿದ್ದರೂ ಯಾಕೆ ನನ್ನ ಸುಮ್ಮನೆ ಬಿಡುತ್ತಿಲ್ಲ. ಇವತ್ತು ಅಧಿಕಾರಿಗಳು ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವತ್ತೆ ಯಾಕೆ ನನ್ನ ಬಂಧಿಸಲಿಲ್ಲ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾದ ದಿನದಿಂದಲೂ ನನ್ನ ಮನೆ ಸುತ್ತಮುತ್ತಲು ಭಯದ ವಾತಾವರಣ ಸೃಷ್ಟಿ ಮಾಡಲಾಗಿತ್ತು. ಯಾರೆಷ್ಟೇ ಭಯದ ವಾತಾವರಣ ಸೃಷ್ಟಿ ಮಾಡಿದರೂ ನನಗೆ ಏನು ಮಾಡಲು ಸಾಧ್ಯವಿಲ್ಲ ಎಂದರು. ನನಗೆ ಭದ್ರತೆಯ ಅವಶ್ಯಕತೆ ಇದ್ದು, ರಾಜ್ಯ ಸರಕಾರ ನನಗೆ ಭದ್ರತೆ ನೀಡಬೇಕೆಂದು ಮನವಿ ಮಾಡಿದರು.

ಸಂಭ್ರಮಿಸಿದ ರೆಡ್ಡಿ ತಂಗಿ: ಆ್ಯಂಬಿಡೆಂಟ್ ಡೀಲ್ ಆರೋಪದಡಿ ಜೈಲು ಸೇರಿದ್ದ ರೆಡ್ಡಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ರೆಡ್ಡಿಯ ತಂಗಿ ವನಿತಾ ಗುತ್ತಾಲ್ ಸಂಭ್ರಮ ಪಟ್ಟಿದ್ದಾರೆ. ನನ್ನ ಸಹೋದರನಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ಸಿಕ್ಕ ಜಯ, ಒಬ್ಬ ರೆಡ್ಡಿಯನ್ನು ಮಣಿಸಲು ಇಡೀ ಸರಕಾರವೇ ನಿಂತಿದೆ, ಈ ಸಂಬಂಧ ಸಹೋದರ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರೆಸುತ್ತಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News