ರೆಡ್ಡಿಗೆ ನ್ಯಾಯಾಲಯ ನ್ಯಾಯ ಒದಗಿಸಿಕೊಟ್ಟಿದೆ: ರೆಡ್ಡಿ ಪರ ವಕೀಲರ ಹೇಳಿಕೆ

Update: 2018-11-14 16:10 GMT
ಜನಾರ್ದನ ರೆಡ್ಡಿ

ಬೆಂಗಳೂರು, ನ.14: ಆ್ಯಂಬಿಡೆಂಟ್ ಪ್ರಕರಣದಲ್ಲಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಸಿಸಿಬಿಯಿಂದ ಬಂಧನವಾಗಿದ್ದ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬುಧವಾರ ಜಾಮೀನು ದೊರೆತಿದ್ದು, ಇದು ಕಾರ್ಯಾಂಗದ ವಿರುದ್ಧ ನ್ಯಾಯಾಂಗದ ಜಯ ಎಂದು ರೆಡ್ಡಿ ಪರ ವಕೀಲರು ಹೇಳಿದ್ದಾರೆ.

ಜಾಮೀನು ದೊರೆತ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ ಪರ ವಕೀಲ ಚಂದ್ರಶೇಖರ್, ಈ ಪ್ರಕರಣದಲ್ಲಿ ಕಾರ್ಯಾಂಗ ತನ್ನ ಕಾರ್ಯವನ್ನು ಸರಿಯಾಗಿ ಮಾಡಿಲ್ಲ. ಆದರೆ ನ್ಯಾಯಾಂಗ ನಮ್ಮ ನೆರವಿಗೆ ಬಂದು ನ್ಯಾಯವನ್ನು ಎತ್ತಿಹಿಡಿದಿದೆ ಎಂದರು. ಗಾಲಿ ರೆಡ್ಡಿ ಅವರಿಗೂ ಆ್ಯಂಬಿಡೆಂಟ್ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ ಆದರೂ ಸಹ ಸಿಸಿಬಿಯ ತನಿಖಾಧಿಕಾರಿಗಳು ಒತ್ತಡಕ್ಕೆ ಸಿಲುಕಿ ರೆಡ್ಡಿ ಅವರನ್ನು ಬಂಧಿಸಿ ಅವರ ವ್ಯಕ್ತಿತ್ವಕ್ಕೆ ಕುತ್ತು ತರುವ ಕಾರ್ಯ ಮಾಡಿದ್ದಾರೆ ಎಂದು ಅವರು ಹೇಳಿದರು. ಆ್ಯಂಬಿಡೆಂಟ್ ವಂಚನೆ ಪ್ರಕರಣವನ್ನು ತನಿಖೆ ಮಾಡಲು ಕಮಿಷನರ್ ಸಿಸಿಬಿಗೆ ವಹಿಸಿದ್ದರು. ಅವರು ಜನರಿಗೆ ವಂಚಿಸಿದವರನ್ನು ಹಿಡಿಯುವ ಬದಲಿಗೆ, ತನಿಖೆಯ ದಾರಿ ತಪ್ಪಿಸಿ ಯಾವುದೋ ಒಂದು ದುರ್ಬಲವಾದ ಎಳೆ ಹಿಡಿದು ಅನವಶ್ಯಕವಾಗಿ ರೆಡ್ಡಿ ಅವರನ್ನು ಬಂಧಿಸಿದ್ದರು ಎಂದು ಅವರು ಹೇಳಿದರು.

ಸಿಸಿಬಿಯ ಪ್ರಶ್ನೆಗಳಿಗೆ ಉತ್ತರಿಸಿದ್ದರೂ ಬಂಧನ: ಸಿಸಿಬಿ ನೀಡಿದ ನೋಟಿಸ್‌ಗೆ ಒಂದು ದಿನ ಮುಂಚಿತವಾಗಿಯೇ ಸಿಸಿಬಿಯ ಕಚೇರಿಗೆ ತೆರಳಿ ಸೆಕ್ಷನ್ 57 ರ ಪ್ರಕಾರ ಸತತ 24 ಗಂಟೆ ಸಿಸಿಬಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದರೂ ಸಹ ಅವರನ್ನು ಬಂಧಿಸಲಾಗಿದೆ. ಇದು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧ ನಡೆ ಆಗಿತ್ತು. ಅದನ್ನೇ ನಾವು ನ್ಯಾಯಾಧೀಶರ ಗಮನಕ್ಕೆ ತಂದಿದ್ದೇವೆ ಎಂದು ವಕೀಲರು ಹೇಳಿದರು.

ನ್ಯಾಯ ವ್ಯವಸ್ಥೆಯಲ್ಲಿ ಆಲಿಖಾನ್-ರೆಡ್ಡಿ ಬೇರೆ ಬೇರೆ. ರೆಡ್ಡಿ ಆಪ್ತ ಆಲಿಖಾನ್ ತಾನು 18 ಕೋಟಿ ಹಣವನ್ನು ಆ್ಯಂಬಿಡೆಂಟ್ ಮಾಲಕನಿಂದ ಪಡೆದುಕೊಂಡಿದ್ದು ನಿಜ, ಅದನ್ನು ದೇವರ ಹರಕೆ ತೀರಿಸಲು ಬಳಸಿದ್ದೇನೆ ಎಂದು ಅಫಿಡವಿಟ್‌ನಲ್ಲಿ ಸಲ್ಲಿಸಿದ್ದ. ಇದು ತನ್ನ ಮಾಲಕ ರೆಡ್ಡಿ ಅವರನ್ನು ಬಚಾವ್ ಮಾಡಲು ನೀಡಿರುವ ಹೇಳಿಕೆ ಎನ್ನಲಾಗಿತ್ತು. ಈ ಬಗ್ಗೆ ಮಾತನಾಡಿದ ರೆಡ್ಡಿ ಪರ ವಕೀಲರು ನ್ಯಾಯಾಂಗ ವ್ಯವಸ್ಥೆಯಲ್ಲಿ ರೆಡ್ಡಿ ಮತ್ತು ಆಲಿಖಾನ್ ಬೇರೆ ಬೇರೆ. ಉಪ್ಪು ತಿಂದವರಷ್ಟೆ ನೀರು ಕುಡಿಯಬೇಕು ಅವರ ಜೊತೆಗಿದ್ದವರಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಯಾವಾಗ ಕರೆದರೂ ವಿಚಾರಣೆಗೆ ಬರುತ್ತೇವೆ: ಇನ್ನು ಮುಂದೆಯೂ ಸಿಸಿಬಿ ಎಷ್ಟು ಬಾರಿ ರೆಡ್ಡಿ ಅವರನ್ನು ವಿಚಾರಣೆಗೆ ಕರೆಯುತ್ತಾರೆಯೋ ಆವಾಗೆಲ್ಲಾ ನಾವು ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದೇವೆ. ರೆಡ್ಡಿ ಅವರೇ ಆಗಲಿ ಯಾರೇ ಆಗಲಿ ಕಾನೂನಿಗಿಂತಲೂ ದೊಡ್ಡವರಲ್ಲ. ಹಾಗಾಗಿ ತನಿಖೆ ಪೂರ್ಣ ಆಗುವವರೆಗೂ ನಾವು ಸಿಸಿಬಿ ಕರೆದಾಗ ವಿಚಾರಣೆಗೆ ಬಂದೇ ಬರುತ್ತೇವೆ ಎಂದು ರೆಡ್ಡಿ ಪರ ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News