ಬೆಂಗಳೂರು: ಗುಂಡು ಹಾರಿಸಿ ಆರೋಪಿಯ ಬಂಧನ

Update: 2018-11-14 16:26 GMT

ಬೆಂಗಳೂರು, ನ.14: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ದಿನೇಶ್ ಎಂಬಾತನನ್ನು ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ದಿನೇಶ್ ಬಲಗಾಲಿಗೆ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತನಿಂದ ಹಲ್ಲೆಗೊಳಗಾಗಿರುವ ಬಾಣಸವಾಡಿ ಪೊಲೀಸ್ ಠಾಣೆ ಪೇದೆ ಮೂರ್ತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿಪಿ ರಾಹುಲ್‌ ಕುಮಾರ್ ಮಾಹಿತಿ ನೀಡಿದ್ದಾರೆ.

ಕಮ್ಮನಹಳ್ಳಿಯ ನಿವಾಸಿಯಾಗಿರುವ ದಿನೇಶ್ ವಿರುದ್ಧ ಅಪರಾಧ ಕೃತ್ಯಗಳ ಸಂಬಂಧ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಜತೆಗೆ, ಮೋಜಿನ ಜೀವನಕ್ಕಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಇನ್ಸ್‌ಪೆಕ್ಟರ್ ರೂಪಾಕ್ಷ ಅವರು ದಿನೇಶ್ ಕೆಜಿಹಳ್ಳಿಯ ಅಯೋಧ್ಯ ಪಾರ್ಕ್ ಬಳಿ ಮಂಗಳವಾರ ರಾತ್ರಿ 11:45ರ ವೇಳೆ ಇರುವ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ಕೈಗೊಂಡರು ಎಂದು ತಿಳಿದುಬಂದಿದೆ.

ಪೊಲೀಸರ ಜೀಪನ್ನು ನೋಡಿ ಓಡುತ್ತಿದ್ದ ದಿನೇಶ್‌ನನ್ನು ಪೊಲೀಸ್ ಪೇದೆ ಮೂರ್ತಿ ಬೆನ್ನಟ್ಟಿ ಹಿಡಿಯಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ರೂಪಾಕ್ಷ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಆತ ತಪ್ಪಿಸಿಕೊಳ್ಳಲು ಹೋದಾಗ ಮತ್ತೊಂದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ದಿನೇಶ್‌ನ ಬಲಗಾಲಿಗೆ ಆ ಗುಂಡು ತಗುಲಿ ಆತ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ವಿರುದ್ಧ ಇಂದಿರಾನಗರ, ಡಿಜೆ ಹಳ್ಳಿ ಸೇರಿದಂತೆ ಒಟ್ಟು 12 ಪ್ರಕರಣಗಳಿದ್ದು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News