'ಮನೆಯಂಗಳದಲ್ಲಿ ಮಾತುಕತೆ'ಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

Update: 2018-11-14 16:39 GMT

ಬೆಂಗಳೂರು, ನ14: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನ.17ರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮವು ತಿಂಗಳಿಗೊಮ್ಮೆ ಆಯೋಜಿಸಲಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ಅವರ ಬದುಕಿನ ಅನುಭವಗಳನ್ನು ಸಭಿಕರೊಂದಿಗೆ ಹಂಚಿಕೊಳ್ಳುವುದು ಹಾಗೂ ಸಂವಾದ ನಡೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಈಗಾಗಲೆ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ 200ಕ್ಕೂ ಹೆಚ್ಚು ಸಾಧಕರನ್ನು ಆಹ್ವಾನಿಸಿ, ಅವರ ಬದುಕಿನ ಅನುಭವಗಳನ್ನು ನಾಡಿನ ಜನತೆಗೆ ತಿಳಿಸಿಕೊಡಲಾಗಿದೆ. ಈ ಸಾಲಿನಲ್ಲಿ ಸಾಹಿತ್ಯ, ಸಂಗೀತ, ಆರೋಗ್ಯ, ವಿಜ್ಞಾನ, ಪರಿಸರ, ಚಿತ್ರಕತೆ ಸೇರಿದಂತೆ ಎಲ್ಲ ಕ್ಷೇತ್ರದ ಸಾಧಕರನ್ನು ಪರಿಚಯಿಸಲಾಗುತ್ತಿದೆ.

ಕನ್ನಡದ ಹಿರಿಯ ಸಾಹಿತಿ ಎ.ಎನ್.ಮೂರ್ತಿರಾವ್ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ಪ್ರಥಮ ಅತಿಥಿಯಾಗಿ ಅಮ್ಮ ಅನುಭವವನ್ನು ಹಂಚಿಕೊಂಡಿದ್ದರು. 50ನೆ ಅತಿಥಿಯಾಗಿ ಚಿತ್ರ ನಿರ್ದೇಶಕ ಎಂ.ಎಸ್.ಸತ್ಯು, 100ನೆ ಅತಿಥಿಯಾಗಿ ಡಾ.ಎಂ.ರಾಮಾ ಜೋಯಿಸ್, 150 ಅತಿಥಿಯಾಗಿ ಪ್ರೊ.ಜಿ.ಕೆ.ಗೋವಿಂದರಾವ್ ಹಾಗೂ 200ನೆ ಅತಿಥಿಯಾಗಿ ಪ್ರೊ.ಸಿ.ಎನ್.ಆರ್ ರಾವ್ ಆಗಮಿಸಿ, ತಮ್ಮ ಬಾಲ್ಯದ ಅನುಭವ ಹಾಗೂ ತಮ್ಮ ಕ್ಷೇತ್ರದ ಸಾಧನೆಗೆ ಯಾವ ಅಂಶಗಳು ಪ್ರೇರಣೆ ನೀಡಿದ್ದವು ಎಂಬುದನ್ನು ಹಂಚಿಕೊಂಡಿದ್ದರು.

ಇವರನ್ನು ಹೊರತು ಪಡಿಸಿದಂತೆ ಸಾಹಿತಿ ಬರಗೂರು ರಾಮಚಂದ್ರಪ್ಪ, ಪರಿಸರವಾದಿ ಯಲ್ಲಪ್ಪ ರೆಡ್ಡಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಹಿರಿಯ ಪತ್ರಕರ್ತ ನಾಗೇಶ್‌ಹೆಗಡೆ, ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್, ಹಿರಿಯ ಗಾಯಕ ಪಂಡಿತ್ ವೆಂಕಟೇಶಕುಮಾರ್ ಸೇರಿದಂತೆ ಹಲವು ಸಾಧಕರು ಭಾಗವಹಿಸಿದ್ದಾರೆ. ಈಗ 204ನೆ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗಮಿಸುತ್ತಿರುವುದು ವಿಶೇಷವಾಗಿದೆ.

ಎಚ್‌ಡಿಡಿ ಪರಿಚಯ: 1933ರ ಮೇ 18ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ಎಚ್.ಡಿ.ದೇವೇಗೌಡ ಸಿವಿಲ್ ಎಂಜಿನಿಯರಿಂಗ್ ಡಿಪ್ಲೋಮಾ ಮುಗಿಸಿ ಜನಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. 1953ರಲ್ಲಿ ಕಾಂಗ್ರೆಸ್‌ಗೆ ಸೇರುವುದರೊಂದಿಗೆ ರಾಜಕೀಯ ಪ್ರವೇಶ ಮಾಡಿ, 1962ರಲ್ಲಿ ಕಾಂಗ್ರೆಸ್ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದರು.

1996ರಲ್ಲಿ ರಾಷ್ಟ್ರ ರಾಜಕಾರಣದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸಂಯುಕ್ತರಂಗ ಸರಕಾರ ಮುನ್ನಡೆಸುವ ಅಪೂರ್ವ ಅವಕಾಶ ಬಂತು. ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ಎಂಬ ಹೆಮ್ಮೆಯ ಗರಿ ಇವರದ್ದು. ಅಲ್ಪಾವಧಿಯಲ್ಲಿಯೆ ಕಾಶ್ಮೀರದಲ್ಲಿ ಚುನಾವಣೆ, ರಸಗೊಬ್ಬರಕ್ಕೆ ಸಬ್ಸಿಡಿ, ಈಶಾನ್ಯ ಭಾರತದಲ್ಲಿ ಶಾಂತಿ ಮರು ಸ್ಥಾಪನೆ, ಕೃಷ್ಣ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಹಣ ಮಂಜೂರು, ನಮ್ಮ ಮೆಟ್ರೋ ಯೋಜನೆಗೆ ಅಸ್ತು ಮುಂತಾದ ಸಾರ್ಥಕ ಕೆಲಸಗಳನ್ನು ಮಾಡಿದ್ದಾರೆ.

1997ರಿಂದ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿ, ಸಂಸದರಾಗಿ ಇದೀಗ 6ನೆ ಅವಧಿ. ಜನಪರ ನಿಲುವು, ರೈತಪರ ಕಾಳಜಿ, ನೆಲ-ಜಲ ರಕ್ಷಣೆಗಾಗಿ ಸದಾ ಹೋರಾಟ, ರಾಜಕೀಯ ಜಾಣ್ಮೆಯೆ ಎಚ್.ಡಿ.ದೇವೇಗೌಡರ ಬಹುದೊಡ್ಡ ಆಸ್ತಿಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News