ಬೆಂಗಳೂರು: ಸಿಗರೇಟ್ ವಿಚಾರದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯ

Update: 2018-11-14 17:22 GMT

ಬೆಂಗಳೂರು, ನ.14: ಸಿಗರೇಟ್ ಹಣದ ವಿಚಾರವಾಗಿ ಯುವಕನೋರ್ವನನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಹದೇವಯ್ಯ ಎಂಬಾತ ಕೊಲೆಯಾದ ಯುವಕನಾಗಿದ್ದು, ಕೃತ್ಯದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ವಿನಯ್ ಕುಮಾರ್ ಎಂಬಾತ ವಿಜಯನಗರ ವ್ಯಾಪ್ತಿಯ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿ ಪೇಟಿಎಂ ಮೂಲಕ ಹಣ ನೀಡುವುದಾಗಿ ಹೇಳಿದ್ದ. ಆದರೆ, ಅಂಗಡಿಯಲ್ಲಿದ್ದ ಚೋಟು ಎಂಬ ಯುವಕ, ಸಿಗರೇಟ್‌ನ ಹದಿನೈದು ರೂಪಾಯಿಗಾಗಿ ಪೇಟಿಎಂ ಬೇಡ ಎಂದಿದ್ದ. ಆದರೆ, ವಿನಯ್ ಕುಮಾರ್ ಹಣ ನೀಡದೆ, ಸಿಗರೇಟ್ ಪಡೆದು ತೆರಳಿದ್ದ ಎನ್ನಲಾಗಿದೆ.

ಸಿಗರೇಟ್ ಹಣ ನೀಡಲಿಲ್ಲ ಎಂದು ಅಂಗಡಿನಲ್ಲಿದ್ದ ಚೋಟು, ಮಾಲಕನಿಗೆ ತಿಳಿಸಿದ್ದ. ಅ.4ರಂದು ಅಂಗಡಿ ಮಾಲಕ ರಾಜ್‌ದೀಪ್ ಮತ್ತು ಆತನ ಸ್ನೇಹಿತ ಮಹದೇವಯ್ಯ, ವಿನಯ್‌ಕುಮಾರ್ ಆಟವಾಡುತ್ತಿದ್ದ ಮೈದಾನಕ್ಕೆ ತೆರಳಿ, ಹಣ ನೀಡುವಂತೆ ಕೇಳಿದ್ದಾರೆ. ಆದರೆ, ಹಣ ನೀಡಲು ನಿರಾಕರಿಸಿ, ವಿನಯ್ ಕುಮಾರ್ ಮತ್ತು ಈತನ ಸಹಚರರು, ಮಹದೇವಯ್ಯ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ತಕ್ಷಣ ಮಹದೇವಯ್ಯ ಅವರನ್ನು ಸಮೀಪದ ಗಾಯತ್ರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News