ಬನಶಂಕರಿ ನಿವಾಸಿಗಳಿಗೆ ಪುನರ್ವಸತಿ ವಿಚಾರ: ಪರಸ್ಪರ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಹೈಕೋರ್ಟ್ ಸೂಚನೆ

Update: 2018-11-14 17:25 GMT

ಬೆಂಗಳೂರು, ನ.14: ಬನಶಂಕರಿ ಮೂರನೆ ಹಂತದ ಹೊಸಕೆರೆಹಳ್ಳಿಯ ಸರ್ವೇ ನಂಬರ್ 90ರಲ್ಲಿನ 21 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರು ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಮಧ್ಯದ ಗೊಂದಲ ಬುಧವಾರವೂ ಪರಿಹಾರವಾಗಲಿಲ್ಲ.

ಅರ್ಜಿದಾರರಿಗೆ ತಾತ್ಕಾಲಿಕ ಸೂರು ಕಲ್ಪಿಸುವಂತೆ ಕಳೆದ ತಿಂಗಳ 30ರಂದು ನೀಡಿದ ಆದೇಶ ಪಾಲಿಸಿಲ್ಲ ಎಂಬ ಕಾರಣಕ್ಕೆ ಕೊಳಚೆ ನಿರ್ಮೂಲನಾ ಮಂಡಳಿ ವಿರುದ್ಧ ಮಂಗಳವಾರವಷ್ಟೇ (ನ.13) ಗರಂ ಆಗಿದ್ದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ, ಬುಧವಾರ ಸೂಕ್ತ ತೀರ್ಮಾನದೊಂದಿಗೆ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು.

ಈ ಕುರಿತಂತೆ ಕೊಳಚೆ ನಿರ್ಮೂಲನಾ ಮಂಡಳಿ ಪರ ವಕೀಲ ಶ್ರೀಕಾಂತ್ ಪಾರ್ಥಸಾರಥಿ ಹಾಗೂ ಅರ್ಜಿದಾರರ ಪರ ವಕೀಲ ಕೆ.ಬಿ.ಓಂಕಾರ್ ಬುಧವಾರ ಪ್ರಮಾಣ ಪತ್ರ ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಯಾವ ಪ್ರದೇಶದಲ್ಲಿ ತಾತ್ಕಾಲಿಕ ಸೂರು ಕಲ್ಪಿಸಬೇಕು ಎಂಬ ವಿಷಯದಲ್ಲಿ ನೀವಿಬ್ಬರೂ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ, ಮತ್ತೊಮ್ಮೆ ಪರಸ್ಪರ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡು ಕೋರ್ಟ್‌ಗೆ ತಿಳಿಸಿ ಎಂದು ವಿಚಾರಣೆಯನ್ನು ಗುರುವಾರಕ್ಕೆ (ನ.15) ಮುಂದೂಡಿದೆ. ಅಭಯ ಹೆಸರಿನ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News