ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಯಡಿಯೂರಪ್ಪ

Update: 2018-11-15 13:55 GMT

ಬೆಂಗಳೂರು, ನ.15: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರಕಾರ ನಿಸ್ತೇಜಗೊಂಡಿದೆ. ಯಾರೂ ಯಾರ ಮಾತನ್ನೂ ಕೇಳದ ಪರಿಸ್ಥಿತಿಯಲ್ಲಿ ಆಡಳಿತಯಂತ್ರ ದುರುಪಯೋಗವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಹಾಡುಹಗಲೇ ಸಮಾಜಘಾತುಕ ಶಕ್ತಿಗಳು ಕತ್ತಿ ಝಳಪಿಸುತ್ತಿವೆ. ವಿಜಯನಗರದಲ್ಲಿ ಸಿಗರೇಟ್ ತೆಗೆದುಕೊಂಡು ಹಣ ಕೇಳಿದ್ದಕ್ಕಾಗಿ ಚುಚ್ಚಿ ಕೊಲೆ ಮಾಡಿದ್ದ ಘಟನೆಯ ವೀಡಿಯೋ ವೈರಲ್ ಆಗಿದ್ದು ಅಮಾನವೀಯ. ಇದು ಬೆಂಗಳೂರಿನಲ್ಲಿ ಇರುವ ಪೊಲೀಸ್ ಕಾನೂನು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಅವರು ಪ್ರಕಟನೆಯಲ್ಲಿ ದೂರಿದ್ದಾರೆ.

ಒಂದು ತಿಂಗಳಿನ ಹಿಂದೆ ಮಂಡ್ಯದಲ್ಲಿ ಸಾಲದ ಹಣ ಮರುಪಾವತಿಸಲಿಲ್ಲ ಎಂದು ಹೆಣ್ಣು ಮಗಳನ್ನು ಎಳೆದುಕೊಂಡು ಜೀಪ್‌ನಲ್ಲಿ ತೆಗೆದುಕೊಂಡು ಹೋದ ಪ್ರಕರಣ ಹಾಗೇ ಮುಚ್ಚಿಹೋಯಿತು. ಅಭಿವೃದ್ಧಿ ಕಾರ್ಯ ಒಂದೇ ಅಲ್ಲ, ಸರಕಾರದ ಎಲ್ಲ ಅಂಗಗಳೂ ಮುರಿದು ಬಿದ್ದಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರೀತಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ, ಯಾವೊಬ್ಬ ಉದ್ದಿಮೆದಾರನೂ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ. ಈ ಎಲ್ಲ ಅಪರಾಧ ಘಟನೆಗಳು ರಾಜ್ಯದ ಅಭಿವೃದ್ಧಿ ಮತ್ತು ಹೂಡಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಇದೆಲ್ಲಕ್ಕೂ ಪೊಲೀಸ್ ವ್ಯವಸ್ಥೆಯಲ್ಲಿ ರಾಜಕೀಯ ಶಕ್ತಿಗಳ ಹಸ್ತಕ್ಷೇಪವೇ ಕಾರಣ. ಇತ್ತೀಚೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಂಧಿಸಿ, ಬಿಡುಗಡೆಗೊಳಿಸಿರುವುದು ರಾಜಕೀಯ ಹಸ್ತಕ್ಷೇಪಕ್ಕೆ ತಾಜಾ ಉದಾಹರಣೆ. ರಾಜಕೀಯ ಸೇಡು ತೀರಿಸಿಕೊಳ್ಳಲು, ಎಸಿಬಿ ಮತ್ತು ಇತರ ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News