ಕೊಡಗು ನೆರೆ ಸಂತ್ರಸ್ತರಿಗೆ ಮಾದರಿ ಮನೆ: ಸಚಿವ ಯು.ಟಿ.ಖಾದರ್

Update: 2018-11-15 13:57 GMT

ಬೆಂಗಳೂರು, ನ.15: ಕೊಡಗು ಜಿಲ್ಲೆಯಲ್ಲಿನ ನೆರೆ ಸಂತ್ರಸ್ತರಿಗೆ ಮಾದರಿ ಮನೆಗಳನ್ನು ನಿರ್ಮಿಸಲು ಚಿಂತಿಸಲಾಗಿದೆ. ಈಗಿರುವ ಸಿಂಗಲ್ ಬೆಡ್‌ರೂಮ್ ಮಾದರಿಯ ಮನೆಗಳನ್ನು ಡಬಲ್ ಬೆಡ್‌ರೂಮ್ ಮನೆಗಳನ್ನಾಗಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾದರಿ ಮನೆಗಳ ನಿರ್ಮಾಣಕ್ಕೆ 101 ಕೋಟಿ ರೂ.ಗಳ ಅಗತ್ಯವಿದೆ. ಪ್ರತಿಯೊಂದು ಡಬಲ್ ಬೆಡ್‌ರೂಮ್ ಮನೆಗೆ ಸುಮಾರು 9.45 ಲಕ್ಷ ರೂ.ವೆಚ್ಚವಾಗಲಿದೆ. ಹೆಚ್ಚುವರಿ ಅನುದಾನ ನೀಡಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದರು.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶಾಲೆಗಳು, ವಸತಿಗಳಿರುವ ಪ್ರದೇಶದಲ್ಲಿ ಮೊಬೈಲ್ ಟವರ್‌ಗಳ ಅಳವಡಿಕೆಯಿಂದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದಿವೆ. ಹೀಗಾಗಿ, ನೂತನ ಟವರ್ ನೀತಿಯನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಶಾಲೆ ಹಾಗೂ ವಸತಿ ಪ್ರದೇಶಗಳಲ್ಲಿ ಎಷ್ಟು ಅಂತರದಲ್ಲಿ ಮೊಬೈಲ್ ಟವರ್ ಹಾಕಬೇಕು ಎಂಬುದು ನೂತನ ಮೊಬೈಲ್ ಟವರ್ ನೀತಿಯಾಗಿದೆ. ಈ ಸಂಬಂಧ ಶೀಘ್ರದಲ್ಲೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜೊತೆ ಚರ್ಚಿಸಿ, ಅಂದೇ ನೂತನ ಟವರ್ ನೀತಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಖಾದರ್ ತಿಳಿಸಿದರು.

ರೆಡ್ಡಿ ಬಗ್ಗೆ ಹೆಚ್ಚು ಮಾತನಾಡುವುದು ಬೇಡ: ಪುಣ್ಯಕೋಟಿ ಯಾರೆಂದು ಬಳ್ಳಾರಿ ಜನ ಲೋಕಸಭೆಯ ಉಪ ಚುನಾವಣೆಯಲ್ಲಿ ತಿಳಿಸಿದ್ದಾರೆ. ಜನಾರ್ದನ ರೆಡ್ಡಿ ಬಗ್ಗೆ ಹೆಚ್ಚು ಮಾತನಾಡಲು ಹೋಗಬಾರದು. ಒಳ್ಳೆಯದನ್ನು ಮಾತನಾಡಿದರೂ ನಾಯಕರಾಗುತ್ತಾರೆ. ಕೆಟ್ಟದಾಗಿ ಮಾತನಾಡಿದರೂ ನಾಯಕರಾಗುತ್ತಾರೆ. ಹೀಗಾಗಿ, ಅವರ ಬಗ್ಗೆ ಮಾತನಾಡದೆ ಸುಮ್ಮನೆ ಇರುವುದೇ ಒಳ್ಳೆಯದು ಎಂದು ಖಾದರ್ ಹೇಳಿದರು.

ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಜನಾರ್ದನ ರೆಡ್ಡಿ, ನಾನು ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ ಎಂದು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನೋಡೋಣ ಹಾಗಿದ್ದರೆ ಏನ್ ಮಾಡುತ್ತಾರೋ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News