ರೆಡ್ಡಿ ಪರ ಮಾತನಾಡದ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ

Update: 2018-11-15 14:09 GMT
ಜನಾರ್ದನ ರೆಡ್ಡಿ

ಬೆಂಗಳೂರು, ನ. 15: ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಶ್ರಮಿಸಿದ ಆ್ಯಂಬಿಡೆಂಟ್ ವಂಚನೆ ಪ್ರಕರಣದ ಆರೋಪಿ ಜನಾರ್ದನ ರೆಡ್ಡಿಯವರ ಪರವಾಗಿ ನಿಲ್ಲದ, ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ಬಿಜೆಪಿ ಕಾರ್ಯಕರ್ತ ದಿನೇಶ ಗಾಣಿಗ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕ ವಿಧಾನಕ್ಷೇತ್ರಗಳಲ್ಲಿ ಗೆಲುವು ಪಡೆಯಲು ಶ್ರಮಿಸಿದವರಲ್ಲಿ ರೆಡ್ಡಿ ಒಬ್ಬರಾಗಿದ್ದು, ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ರೆಡ್ಡಿ ಪರವಾಗಿ ಬಿಜೆಪಿ ನಾಯಕರು ಮಾತನಾಡದೇ ಸುಮ್ಮನಿದ್ದರೆ ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದು ಪ್ರಶ್ನಿಸಿದರು. ಹಾಗೂ ಬಿಜೆಪಿ ರೆಡ್ಡಿಯವರಿಗೆ ಸೂಕ್ತ ಬೆಂಬಲ ನೀಡುವಂತೆ ಮನವಿ ಮಾಡಿದರು.

ಸಮ್ಮಿಶ್ರ ಸರಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಜನಾರ್ದನ ರೆಡ್ಡಿ ಮೇಲೆ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುತ್ತಿದೆ. ಗಣಿ ಹಗರಣ ಎಲ್ಲ ಪಕ್ಷದ ನಾಯಕರ ಮೇಲೂ ಇದೆ. ಆದರೆ, ಜನಾರ್ದನ ರೆಡ್ಡಿಯವರನ್ನು ಮಾತ್ರ ಜೈಲಿಗೆ ಕಳುಹಿಸಿರುವುದು ದುರಂತವಾಗಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯವರನ್ನು ಕೈಬಿಡದೆ ಇದ್ದಲ್ಲಿ, ಬೆಳಗಾವಿಯ ಅಧಿವೇಶನದಲ್ಲಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಕಾರ್ಯಕರ್ತ ದಿನೇಶ ಗಾಣಿಗ ತಿಳಿಸಿದ್ದಾರೆ.                                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News