ಕಲಾಪಕ್ಕೆ ಯಾವುದೇ ಕಾರಣಕ್ಕೂ ಗೈರು ಹಾಜರಾಗಬೇಡಿ: ಸ್ಪೀಕರ್ ರಮೇಶ್ ಕುಮಾರ್

Update: 2018-11-15 14:27 GMT

ಬೆಂಗಳೂರು, ನ. 15: ‘ಯಾರೂ ಕುಳಿತುಕೊಳ್ಳಲಾಗದ ಜಾಗದಲ್ಲಿ ಕುಳಿತುಕೊಳ್ಳಲು ನಿಮಗೆ ಅವಕಾಶ ಸಿಕ್ಕಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸದನ ಕಲಾಪಕ್ಕೆ ಗೈರು ಹಾಜರಾಗಬಾರದು’ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ನೂತನ ಶಾಸಕರಿಗೆ ಸಲಹೆ ಮಾಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ವಿಧಾನ ಮಂಡಲ ತರಬೇತಿ ಸಂಸ್ಥೆಯಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ಏರ್ಪಡಿಸಿದ್ದ ‘ತರಬೇತಿ ಶಿಬಿರ’ ಉದ್ಘಾಟಿಸಿ ಮಾತನಾಡಿದ ಅವರು, ‘ನಿಮಗೆ ಸಂಬಂಧಿಸಿದ ವಿಷಯವಿಲ್ಲದೆ ಇದ್ದರೂ ಕಲಾಪಕ್ಕೆ ಬನ್ನಿ. ನಿಮ್ಮ ವಸ್ತ್ರಾಭಿರುಚಿ ಚೆನ್ನಾಗಿರಲಿ’ ಎಂದು ಸೂಚಿಸಿದರು.

‘ಬಯಸುವವರೆಲ್ಲರೂ ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ಸಾಧ್ಯವಿಲ್ಲ. ರಾಜ್ಯದ ಆರು ಕೋಟಿ ಜನರ ಪೈಕಿ ಕೇವಲ 224 ಮಂದಿ ಶಾಸಕರು ಹಾಗೂ 75 ಮಂದಿ ಪರಿಷತ್ ಸದಸ್ಯರಿಗೆ ಮಾತ್ರ ಅವಕಾಶ ಸಿಗುತ್ತದೆ. ನೀವೆಲ್ಲರೂ ಪುಣ್ಯವಂತರಾಗಿರಬಹುದು’ ಎಂದು ನೂತನ ಶಾಸಕರನ್ನು ಹೊಗಳಿದರು.

ಯಾವುದೋ ಅಗೋಚರ ಶಕ್ತಿ ನಿಮ್ಮ ಹಿಂದೆ ಇದ್ದರೆ ಮಾತ್ರ ನೀವು ಶಕ್ತಿಸೌಧದ ಮೆಟ್ಟಿಲುಗಳನ್ನು ಹತ್ತಲು ಸಾಧ್ಯ. ರಾಜಕಾರಣದ ಬಗ್ಗೆ ಯಾರು ಎಷ್ಟೇ ಅಪಹಾಸ್ಯ ಮಾಡಿದರೂ, ಟೀಕೆ ಮಾಡಿದರೂ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಷ್ಟೇ ಮಂದಿಗೆ ಮಾತ್ರ ಇಲ್ಲಿ ಪ್ರವೇಶಿಸಲು ಅವಕಾಶ ಇರುವುದು’ ಎಂದು ರಮೇಶ್ ಕುಮಾರ್ ನುಡಿದರು.

‘ನಾನು ವಿಧಾನಸಭೆ ಸ್ಪೀಕರ್ ಆದ ಬಳಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಏಕೆಂದರೆ ಮಾಧ್ಯಮಗಳಿಂದು ತುಂಬಾ ಚುರುಕಾಗಿವೆ. ನಾವು ಯಾವುದೋ ಹುರುಪಿನಲ್ಲಿ ಏನೋ ಮಾತನಾಡಿದರೆ ಅದೇ ದೊಡ್ಡದಾಗುತ್ತದೆ’ ಎಂದ ಅವರು, ಸ್ಪೀಕರ್ ಸ್ಥಾನಕ್ಕೆ ಗೌರವ ತರುವ ಭಾರ ನನ್ನ ಮೇಲಿದೆ ಎಂದು ಹೇಳಿದರು.

ಕಾಟಾಚಾರದ ಪ್ರವೃತ್ತಿ ಸಲ್ಲ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸದಸ್ಯರು ಕಾಟಾಚಾರಕ್ಕೆ ಸದನದ ಕಲಾಪಕ್ಕೆ ಬರುತ್ತಿದ್ದು, ಬಂದರೂ ಸಹಿ ಹಾಕಿ ಮೊಗಸಾಲೆಯಲ್ಲಿ ಕೂರುವ ಪ್ರವೃತ್ತಿ ಸಲ್ಲ ಎಂದು ಆಕ್ಷೇಪಿಸಿದರು.

ಶಾಸಕರ ವೈಯಕ್ತಿಕ ಜೀವನಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ರಾತ್ರಿ 9 ಗಂಟೆಯ ನಂತರ ಶಾಸಕರ ಭವನಕ್ಕೆ ಪ್ರವೇಶ ನಿರ್ಬಂಧಿಸಿದ್ದೇವೆ. ಆದರೆ, ಕೆಲ ಬೆಂಬಲಿಗರು ಗಲಾಟೆ ಮಾಡಿದರು ಎಂದ ಅವರು, ಸಮಿತಿಗಳ ಕಾರ್ಯವೈಖರಿಯೂ ಭತ್ತೆ ಪಡೆದುಕೊಳ್ಳಲಷ್ಟೇ ಎಂಬಂತಾಗಿದೆ. ಸಮಿತಿ ಸಭೆಗಳಲ್ಲಿ ಸಿಗುವಷ್ಟು ಮಾಹಿತಿ ಬೇರೆಲ್ಲೂ ಸಿಗುವುದಿಲ್ಲ ಎಂದರು.

ಸದಸ್ಯರ ಗೈರು: ವಿಧಾನಸಭೆಗೆ ಮೊದಲ ಬಾರಿಗೆ 61 ಮಂದಿ ಶಾಸಕರು ಹಾಗೂ ಪರಿಷತ್ತಿಗೆ 17 ಮಂದಿ ಸೇರಿದಂತೆ 78 ಮಂದಿ ಸದಸ್ಯರು ಚುನಾಯಿತರಾಗಿದ್ದು, 40 ಮಂದಿ ಶಾಸಕರಷ್ಟೇ ತರಬೇತಿ ಶಿಬಿರಕ್ಕೆ ಹಾಜರಾಗಿದ್ದು, ಶಾಸಕರಲ್ಲಿನ ನಿರಾಸಕ್ತಿ ಎದ್ದು ಕಾಣುವಂತಿತ್ತು. ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಆರ್.ಶಂಕರ್, ಮಾಜಿ ಸಭಾಪತಿ ಬಿ.ಎಲ್. ಶಂಕರ್ ಹಾಜರಿದ್ದರು.

‘ಲೋಕಸಭೆ-ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕು. ಪ್ರಧಾನಿ, ರಾಷ್ಟ್ರಪತಿ, ಸಿಎಂ, ಸಚಿವರ ಅಧಿಕಾರಾವಧಿ ಗರಿಷ್ಠ ಮಿತಿ ನಿಗದಿಪಡಿಸಬೇಕು. ವಂಶಾಡಳಿತ ಕೊನೆಗೊಳಿಸಬೇಕು. ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು. ಉಪ ಚುನಾವಣೆಗಳಿಗೆ ಅವಕಾಶವೇ ಇರಬಾರದು. ಜತೆಗೆ ಕಡ್ಡಾಯ ಮತದಾನ ಜಾರಿಗೂ ಮೊದಲೆ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಸಿದ್ಧಪಡಿಸಬೇಕು’

-ಬಿ.ಎಲ್.ಶಂಕರ್, ಮಾಜಿ ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News