ಶಬರಿಮಲೆ: ಮಹಿಳೆಯರ ಪ್ರವೇಶ ವಿಚಾರದಲ್ಲಿ ಸುಪ್ರೀಂ ಆದೇಶ ಪಾಲನೆಗೆ ಒತ್ತಾಯ

Update: 2018-11-15 14:49 GMT

ಬೆಂಗಳೂರು, ನ.15: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರಿಗೆ ಮುಕ್ತ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಅಯ್ಯಪ್ಪದೇವಸ್ಥಾನ ಆಡಳಿತ ಮಂಡಳಿ ಪಾಲಿಸಬೇಕೆಂದು ಅಂತರ್‌ರಾಷ್ಟೀಯ ಸೊಸೈಟಿ ಫಾರ್ ಪೂರ್ ಅಂಡ್ ಡೌನ್‌ಟ್ರಾಡನ್ ಸಂಸ್ಥೆ ಒತ್ತಾಯಿಸಿದೆ.

ಗುರುವಾರ ಪ್ರಕಾಶನಗರದ ಮೇಲುಮರವತ್ತೂರು ದೇವಸ್ಥಾನದಿಂದ ಮಲ್ಲೇಶ್ವರಂ ಬಳಿ ಇರುವ ಅಯ್ಯಪ್ಪ ದೇವಸ್ಥಾನದವರೆಗೆ ಶಾಂತಿಯುತವಾಗಿ ಪಾದಯಾತ್ರೆ ಮಾಡಿದ ನೂರಾರು ಮಹಿಳೆಯರು, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ತಿಳಿಸಿದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಮಾತನಾಡಿ, ಶತಶತಮಾನಗಳಿಂದ ಮಹಿಳೆಯರನ್ನು ಸಮಾಜ ತುಳಿಯುತ್ತಾ ಬಂದಿದೆ. ಮಹಿಳೆಯರು, ಪುರುಷರರಂತೆ ಸರಿಸಮಾನ ಎಂದು ಕಾನೂನು ಹೇಳಿದೆ. ಆದರೆ, ನಮ್ಮ ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದನ್ನ ವಿರೋಧಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಮುಕ್ತ ಅವಕಾಶ ನೀಡಿರುವುದು ಹೃದಯಪೂರ್ವಕ ಸ್ವಾಗತವಾಗಿದ್ದು, ದೇವಸ್ಥಾನ ಆಡಳಿತ ಮಂಡಳಿ ಸುಪ್ರೀಂಕೋರ್ಟ್ ಆದೇಶ ಪರಿಪಾಲನೆ ಮಾಡುವ ಮೂಲಕ ಮಹಿಳೆಯರಿಗೆ ದೇವರ ದರ್ಶನ ಮಾಡುವಂತಹ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕೆಂದು ಅವರು ಒತ್ತಾಯಿಸಿದರು.

ಈ ಪಾದಯಾತ್ರೆಯಲ್ಲಿ ಪ್ರೇಮಲತಾ, ಕೌಸಲ್ಯಾ, ಜಯಲಕ್ಷ್ಮಿ, ಮಂಗಳಾ, ಭಾಗ್ಯಲಕ್ಷ್ಮಿ ಮತ್ತು ನೂರಾರು ಮಹಿಳೆಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News